ADVERTISEMENT

ಆತ್ಮಕ್ಕೆ ಭೇದವಿಲ್ಲ: ಬಿರಾದಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 9:35 IST
Last Updated 12 ಜನವರಿ 2012, 9:35 IST

ಯಾದಗಿರಿ: ಜನನ, ಮರಣಗಳು ದೇಹಕ್ಕೆ ಸಂಬಂಧಿಸಿದ್ದಾಗಿದ್ದರೂ ಆತ್ಮವು ಅವಿನಾಶವಾಗಿದೆ. ಆತ್ಮಕ್ಕೆ ಗಂಡು-ಹೆಣ್ಣುಗಳೆಂಬ ಭೇದವಿಲ್ಲ ಎಂದು ಯೆಲ್ಹೇರಿ ಸರಕಾರಿ ಪ್ರೌಢ ಶಾಲೆಯ ಸಾಹೇಬಗೌಡ ವೈ.ಬಿರಾದಾರ ಹೇಳಿದರು.

ಅವರು ನಗರದ ಹೊರವಲಯದಲ್ಲಿನ ಕೆ.ಎಸ್.ಆರ್.ಟಿ.ಸಿ. ಕಾರ್ಯಾಗಾರದ ಹತ್ತಿರ ನೂತನವಾಗಿ ನಿರ್ಮಾಣಗೊಂಡ ಶ್ರೀ ವೀರೇಶ್ವರ ದಾಸಬಾಳ ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ  ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ದತಿಯ ಮಾಲಿಕೆಯ ಕುರಿತು ಉಪನ್ಯಾಸ ನೀಡಿದರು.

ಉಸಿರಿನ ಮಧ್ಯೆ ಬದುಕುವ ಮನುಷ್ಯ ಜೀವನ ತನ್ನ ತಾನು ಅರಿವು ಮೂಲಕ ಪರಮಾತ್ಮನನ್ನು ಕಂಡುಕೊಳ್ಳಬಹುದು ಅಂಡಜ, ಪಿಂಡಜ, ಜಲಜ, ಉದ್ಬಿಜಗಳೆಂಬ 84 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ದೊಡ್ಡದ್ದು, ವಿಚಾರಿಸುವಂತಹ ಶಕ್ತಿ ಮನುಷ್ಯನಿಗೆ ಮಾತ್ರ ಇರಲು ಸಾಧ್ಯ, ಕಾಮ, ಕ್ರೋದ, ಲೋಬ, ಮೋಹ ಮದ, ಮತ್ಸರ, ಮುಂತಾದ ಅರಿಷಡ್ವರ್ಗಗಳ ಮೇಲೆ ಹಿಡಿತ ಸಾಧಿಸಿ ಗುರು ಮುಖದಿಂದ ತತ್ವ ಜ್ಞಾನಪಡೆದು ಮನುಷ್ಯತ್ವದಿಂದ ಮೋಕ್ಷದ ಕಡೆಗೆ ಸಾಗಬೇಕೆಂದು ಅವರು ಹೇಳಿದರು.

ಪ್ರಾಚಾರ್ಯ ಶರಣಪ್ಪ ಜುಗೇರಿ  ಮಾತನಾಡಿ  ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳಾಗಿ ಸದ್ಗುಣವಂತರಾಗಿ ರೂಪಿಸುವ ಗುರುತರ ಕಾರ್ಯ ಪಾಲಕರ ಮೇಲಿದೆ ಅದರಂತೆ ಶರಣ ಸತ್ಪುರುಷರ ಸಂಗದಿಂದ ಸಾತ್ವಿಕ ಬದುಕು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಕ ದಂಡಿಗಿ ಮಠದ  ಪರಮಪೂಜ್ಯ ಗುರುನಾಥ ಮಹಾಸ್ವಾಮಿಗಳು ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ವೀರೇಶ್ವರ ಮಹಾ ಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ  ಅಡಿವೆಪ್ಪ ಸಾಹುಕಾರ, ಅಶೋಕ ಕುಮಾರ, ಸೋಮಶೇಖರ, ಬಸವರಾಜ, ಶಿವುರೆಡ್ಡಿ ಆಶನಾಳ, ಚಂದ್ರಶೇಖರ, ಸೋಮನಾಥ, ಬಸನಗೌಡ ಭೋನಾಳ, ನಿಂಗಣ್ಣಬಿ.ಜಡಿ ವಡಿಗೇರಾ, ಮಲ್ಲಿಕಾರ್ಜುನ ಅರುಣಿ, ಸಾಬಣ್ಣ ಯರಗೋಳ ಭಾಗವಹಿಸಿದ್ದರು.

ಡಾ. ಬಸವರಾಜ ಹೂಗಾರ ನಿರೂಪಿಸಿದರು. ವಿಜಯ ಕುಮಾರ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮಲ್ಹಾರ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.