ADVERTISEMENT

ಕಚೇರಿಯಲ್ಲಿ ಹೆಚ್ಚಿದ ಉಗುಳು ಪಿಡುಗು

ಅಸಹ್ಯ ಹುಟ್ಟಿಸುವ ನಗರಸಭೆಯ ಮೊದಲ ಮಹಡಿಯ ಗೋಡೆಗಳು

ಮಲ್ಲೇಶ್ ನಾಯಕನಹಟ್ಟಿ
Published 4 ಜೂನ್ 2018, 9:49 IST
Last Updated 4 ಜೂನ್ 2018, 9:49 IST
ಯಾದಗಿರಿಯ ಮೊದಲ ಮಹಡಿಯಲ್ಲಿ ಮೂಲೆಯಲ್ಲಿ ಅಸಹ್ಯವಾಗಿ ಉಗಿದಿರುವ ದೃಶ್ಯ
ಯಾದಗಿರಿಯ ಮೊದಲ ಮಹಡಿಯಲ್ಲಿ ಮೂಲೆಯಲ್ಲಿ ಅಸಹ್ಯವಾಗಿ ಉಗಿದಿರುವ ದೃಶ್ಯ   

ಯಾದಗಿರಿ:ಇಲ್ಲಿನ ನಗರಸಭೆಯ ಸಂಕೀರ್ಣದ ಮೊದಲ ಮಹಡಿ ಕಟ್ಟಡದ ಮೂಲೆಗಳು ಉಗುಳು ಪಿಡುಗಿನಿಂದಾಗಿ ಅಸಹ್ಯ ಹುಟ್ಟಿಸಿವೆ. ನಗರದ ನಾಗರಿಕರಿಗೆ ಸ್ವಚ್ಛತೆಯ ಪಾಠ ಹೇಳಬೇಕಾದ ನಗರಸಭೆಯೇ ಇಂಥಾ ಅಸಹ್ಯ ಅಸಂಸ್ಕೃತಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.

ಸ್ವಚ್ಛತೆ ನಾಗರಿಕ ಸಮಾಜದ ಪ್ರತಿಬಿಂಬ. ಅದನ್ನು ಸಮಾಜಕ್ಕೆ ತಿಳಿಹೇಳುವ ಹೊಣೆಯನ್ನು ನಗರಸಭೆ ಹೊತ್ತಿದೆ. ಇಂಥಾ ಜವಾಬ್ದಾರಿ ಹೊತ್ತಿರುವ ನಗರಸಭೆ ಸಂಕೀರ್ಣದ ಮೂಲೆಗಳು ಜನರಿಂದಲೋ, ಸಿಬ್ಬಂದಿಯಿಂದಲೋ ಅಸಹ್ಯ ಹುಟ್ಟಿಸುತ್ತಿವೆ. ಎಲೆ ಅಡಿಕೆ, ಪಾನ್‌, ಗುಟ್ಕಾ ಜಗಿಯುವವರು ಈ ಮೂಲೆಗಳನ್ನು ಬಳಸಿಕೊಂಡು ನಿರಂತರ ಉಗುಳುತ್ತಾ ಬಂದಿರುವುದರಿಂದ ಸಂಕೀರ್ಣದಲ್ಲಿ ದುರ್ನಾತವೂ ಹೆಚ್ಚಿದೆ.

ನಗರಸಭೆ ಅಂತಹ ದೊಡ್ಡ ಸಂಕೀರ್ಣವಲ್ಲ. ಹತ್ತಾರು ಕೋಣೆ ಹೊಂದಿರುವ ಸಾಮಾನ್ಯ ಮಹಡಿ ಸಂಕೀರ್ಣ. ಮಹಡಿ ಹತ್ತಲು ಮುಂದಾದರೆ ಅಲ್ಲಿ ಎದುರುಗೊಳ್ಳುವ ಮೂಲೆಗಳಲ್ಲಿ ಹತ್ತಾರು ಮಂದಿ ಉಗಿದಿರುವುದು ಜನರ ಮನಸ್ಸಿಗೆ ಕಸಿವಿಸಿ ಉಂಟು ಮಾಡುತ್ತದೆ. ಮಹಡಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ನೌಕರರು ಇದರಿಂದ ಬೇಸತ್ತಿದ್ದಾರೆ. ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನೌಕರ ಸಿಬ್ಬಂದಿ.

ADVERTISEMENT

ನಗರಸಭೆ ಒಂದೇ ಅಲ್ಲ. ನಗರದ ಸರ್ಕಾರಿ ಕಚೇರಿಗಳಲೆಲ್ಲಾ ಈ ಅಸಂಸ್ಕೃತಿ ಇದೆ. ಆದರೆ, ಇಲ್ಲಿನ ತಹಶೀಲ್ದಾರ್‌ ಕಚೇರಿ ಈ ಅಪವಾದಕ್ಕೆ ಹೊರತಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಖಡಕ್‌ ಎಚ್ಚರಿಕೆ ನೀಡುತ್ತಲೇ ಬಂದಿರುವುದರಿಂದ ಉಗುಳುದಾರರು ಎಚ್ಚೆತ್ತುಕೊಂಡಿದ್ದಾರೆ. ಪರಿಣಾಮವಾಗಿ ತಹಶೀಲ್ದಾರ್ ಕಚೇರಿ ಶುಭ್ರವಾಗಿ ನೋಡುಗರ ಗಮನ ಸೆಳೆಯುತ್ತಿದೆ.

ಜಿಲ್ಲಾಡಳಿತದ ಬೃಹತ್‌ ಕಟ್ಟಡ ಸಂಕೀರ್ಣದಲ್ಲಿ ನಿರ್ವಹಣೆ ಇದ್ದರೂ, ಉಗುಳು ಅಸಂಸ್ಕೃತಿಗೆ ಕಡಿವಾಣ ಬಿದ್ದಿಲ್ಲ. ಬಹುತೇಕ ಅಧಿಕಾರಿ, ನೌಕರ ಸಿಬ್ಬಂದಿ ವರ್ಗದವರೇ ಹೆಚ್ಚಾಗಿ ಗುಟ್ಕಾ ಜಗಿದು ಉಗಿದು ಸಾರ್ವಜನಿಕರಿಗೂ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕೋಲಿ ಸಮಾಜ ಮುಖಂಡ ಉಮೇಶ್ ಮುದ್ನಾಳ ದೂರಿದರು.

ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುವ ಗುಟ್ಕಾವನ್ನು ಆರೋಗ್ಯ ಇಲಾಖೆಯಲ್ಲಿ ಬಹುತೇಕ ಮಂದಿಯೇ ಜಗಿಯುತ್ತಾರೆ. ಜಿಲ್ಲಾಧಿಕಾರಿ ಇಡೀ ಜಿಲ್ಲಾಡಳಿತ ಕಟ್ಟಡ ಸಂಕೀರ್ಣದಲ್ಲಿ ಗುಟ್ಕಾ ಜಗಿಯುವ ಸರ್ಕಾರಿ ನೌಕರರ ಪಟ್ಟಿ ಮಾಡಿ ಎಚ್ಚರಿಕೆ ನೀಡುವ ಕೆಲಸ ಮಾಡಿದರೆ ಜಿಲ್ಲಾಡಳಿತ ಕಟ್ಟಡ ಸಂಕೀರ್ಣ ಅರ್ಧಭಾಗ ಸ್ವಚ್ಛತೆ ಕಾಪಾಡಿದಂತೆಯೇ ಎಂದು ಉಮೇಶ್ ಹೇಳುತ್ತಾರೆ.

ನಗರದ ನೂತನ ಬಸ್‌ ನಿಲ್ದಾಣದ ಗತಿ ಹೇಳುವುದೇ ಬೇಡ. ಉಗುಳುದಾರರಿಂದ ಅಲ್ಲಿಯೂ ನೆಮ್ಮದಿಯಿಂದ ಕುಳಿತುಕೊಳ್ಳುವಂತಿಲ್ಲ. ಎಲ್ಲಾ ಕಡೆಗಳಲ್ಲಿ ಗೋಡೆಗಳು ಕೆಂಪುರಂಗು ಬಳಿದುಕೊಂಡಿವೆ. ಅವುಗಳಿಂದ ದುರ್ನಾತವೂ ಹೊರಡುವುದರಿಂದ ಪ್ರಯಾಣಿಕರೂ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

**
ಬೇರೆಡೆ ಸ್ಥಳಾವಕಾಶ ಇದ್ದರೂ, ಜನರು ಕಟ್ಟಡಗಳ ಗೋಡೆಗಳನ್ನೇ ಬಳಸುತ್ತಿರುವುದು ವಿಪರ್ಯಾಸ. ಅಧಿಕಾರಿಗಳು ಅಂತಹ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇಂತಹ ಅಸಹ್ಯ ತಡೆಗಟ್ಟಲು ಅಸಾಧ್ಯ
ಶಿವಕಮಾರ ಶಿಂಧೆ, ಯಾದಗಿರಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.