ADVERTISEMENT

ಕರೆಂಟ್ ಇದ್ರ ಕುಡ್ಯಾಕ ನೀರರಿ...

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:10 IST
Last Updated 16 ಅಕ್ಟೋಬರ್ 2012, 6:10 IST

ಯಾದಗಿರಿ: “ಕರೆಂಟ್ ಇದ್ರ ನಮಗ ಕುಡ್ಯಾಕ ನೀರ ಸಿಗತಾವ್ರಿ. ಇಲ್ಲಂದ್ರ ಕಿ.ಮೀ. ಗಟ್ಟಲೆ ನಡಕೊಂಡ ಹೋಗಬೇಕ್ರಿ. ಕರೆಂಟ್ ಕೈಕೊಟ್ರ ತಮ್ಮ ಗೋಳಾ ಹೇಳಾಕ ಆಗುದುಲ್ರಿ”

ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುತ್ತಿರುವ ಪ್ರತಿಯೊಬ್ಬ ಮಹಿಳೆಯರು ಹೇಳುವ ಮಾತಿದು. ಕುಡಿಯುವ ನೀರಿಗಾಗಿ ನಿತ್ಯ ಪಡಬಾರದ ಕಷ್ಟ ಪಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿರುವ ಈ ಗ್ರಾಮದ ನಾಲ್ಕು ವಿಭಾಗಗಳಿಂದ ಹತ್ತು ಸದಸ್ಯರು ಆಯ್ಕೆಯಾಗಿದ್ದಾರೆ.

ಗ್ರಾಮದಲ್ಲಿ ಇರುವ ಮೂರ‌್ನಾಲ್ಕು ಕೊಳವೆಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ಉಪ್ಪು ನೀರು ಬರುತ್ತವೆ. ಹೀಗಾಗಿ ಈ ನೀರನ್ನು ಜನರು ಉಪಯೋಗಿಸುವುದಿಲ್ಲ. ಗ್ರಾಮದ ಮೂರು ಕಡೆ ನೀರು ಸರಬರಾಜು ಮಾಡುವ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಂದಲೇ ಕುಡಿಯುವ ನೀರನ್ನು ಪಡೆಯಬೇಕಾಗಿದೆ.

ಗ್ರಾಮದಲ್ಲಿ ಎರಡರಿಂದ ಮೂರು ತಾಸು ಮಾತ್ರ ವಿದ್ಯುತ್ ಇರುತ್ತದೆ. ಈ ಸಮಯದಲ್ಲಿಯೇ ಮಹಿಳೆಯರು ಕುಡಿಯುವ ನೀರನ್ನು ಪಡೆಯಬೇಕು. ನಿತ್ಯ ನೀರಿಗಾಗಿ ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಇದರಿಂದ ನೀರಿಗಾಗಿ ಗ್ರಾಮಸ್ಥರ ಮಧ್ಯೆ ವೈಮನಸ್ಸು ಬೆಳೆಯುತ್ತಿದೆ ಎಂದು ಗ್ರಾಮದ ಹಿರಿಯರಾದ ಮರೆಪ್ಪ ಶಿವರಾಯನೋರ ಹೇಳುತ್ತಾರೆ.

ಗ್ರಾಮದಲ್ಲಿ ವಿದ್ಯುತ್ ಸರಿಯಾಗಿ ಇಲ್ಲದಿರುವುದರಿಂದ ಒಂದು ದಿನ ಒಂದು ಬ್ಲಾಕ್‌ಗೆ, ಇನ್ನೊಂದು ದಿನ ಮತ್ತೊಂದು ಬ್ಲಾಕ್‌ಗೆ ನೀರು ಪೂರೈಸಲಾಗುತ್ತದೆ.
ವಿದ್ಯುತ್ ಇಲ್ಲದಿದ್ದರೆ ಸುಮಾರು ಎರಡು ಕಿ.ಮೀ. ದೂರದಿಂದ ನೀರು ತರಬೇಕಾಗುತ್ತದೆ ಎಂದು ಗ್ರಾಮದ ಮಹಿಳೆಯರು ಹೇಳುತ್ತಾರೆ.

ಗ್ರಾಮದಲ್ಲಿ ಒಂದೇ ಸಿಹಿ ನೀರಿನ ಬೋರವೆಲ್ ಇದೆ. ಅದು ಶಾಲೆಯ ಆವರಣದಲ್ಲಿ ಇರುವುದರಿಂದ ಅದಕ್ಕೆ ಮೋಟಾರ್ ಅಳವಡಿಸಲಾಗಿದೆ. ಅದು ಶಾಲೆಯ ಮಕ್ಕಳಿಗಾಗಿ ಮಾತ್ರ ಉಪಯೋಗಿಸಲಾಗುತ್ತದೆ.

ಗ್ರಾಮದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಕೊಳವೆ ಬಾವಿ ಕೊರೆದರೆ ಸಿಹಿ ನೀರು ಸಿಗುತ್ತದೆ. ಅಲ್ಲಿಂದ ಗ್ರಾಮಕ್ಕೆ ನೀರು ಪೂರೈಸುವ ಕೆಲಸ ಆಗಬೇಕಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT