ADVERTISEMENT

ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ

ಡಾ.ಜಗಜೀವನರಾಂ ಭವನಗಳ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:07 IST
Last Updated 11 ಡಿಸೆಂಬರ್ 2013, 8:07 IST

ಯಾದಗಿರಿ: ‘ಗುರುಮಠಕಲ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಜೂರಾಗಿರುವ ಒಂಬತ್ತು ಡಾ. ಜಗಜೀವನ ರಾಂ ಭವನಗಳ ನಿರ್ಮಾ­ಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಶೀಘ್ರ ಕಾಮಗಾರಿಗಳನ್ನು ಆರಂಭಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್‌  ಕರ್ನಾಟಕ ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆ ಮಾತನಾಡಿದರು. ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟಿರುವ ರಸ್ತೆಗಳ ನಿರ್ಮಾಣ ಕಾಮಗಾರಿಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ನಿಯಮಾ­ನುಸಾರ ಕೈಗೆತ್ತಿಕೊಳ್ಳಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹ ಅಧಿಕಾರಿಗೆ ಹೇಳಿದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾ­ಯಿತಿ ವ್ಯಾಪ್ತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕ­ವಾಗಿ ಜಾರಿಗೊಳಿಸುವ ಕುರಿತು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಕಾರ್ಯ­ದರ್ಶಿ­ಗಳೊಂದಿಗೆ ಜಂಟಿ­ಯಾಗಿ ಸಭೆ ನಡೆಸಿ ಈ ಕಾಮಗಾರಿ­ಗಳು ತೀವ್ರಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಸಂಬಂಧಪಟ್ಪ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಯಾದಗಿರಿ ತಾಲ್ಲೂಕಿನ ಆನೂರ, ಯರಗೋಳ, ಗೊಂದಡಗಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಬರುವ ಜನವರಿ ಅಂತ್ಯದವರೆಗೆ ಪೂರ್ಣಗೊಳಿಸಬೇಕು. ಸಣ್ಣಸಾಂಬ್ರಾ ಗ್ರಾಮದ ಕರೆ ಅಭಿವೃದ್ದಿ ಕಾಮಗಾರಿಯನ್ನು ಸಹ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಕ್ಷಣ ಕೈಗೆತ್ತಿ­ಕೊಳ್ಳುವಂತೆ ಪಂಚಾಯಿತ್‌ ರಾಜ್ ಎಂಜನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ₨50 ಕೋಟಿ ವಿಶೇಷ ಅನುದಾನ ಮತ್ತು ನಗರೋತ್ಥಾನ ಅನುದಾನದಡಿ ಉಳಿತಾಯವಾಗುವ ಅನುದಾನದಲ್ಲಿ ಆನೂರ ಕೆ. ದಿಂದ ಬೆಳಗುಂದಾ ರಸ್ತೆ ಹಾಗೂ ಬಾಡಿ­ಯಾಲ ದಿಂದ ಸೈದಾಪೂರ ರಸ್ತೆಗಳ ಕಾಮಗಾರಿಗಳನ್ನು ಅಲ್ಪಾವಧಿ ಟೆಂಡರ್ ಕರೆದು ತಕ್ಷಣ ಕಾಮಗಾರಿ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಹತ್ತಿಕುಣಿ, ಬಂದಳ್ಳಿ, ಜೈಗ್ರಾಂ, ಚಾಮನಾಳ ಮತ್ತು ಇತರೆ ಗ್ರಾಮಗಳಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಎಸ್.ಸಿ.ಪಿ. ಮತ್ತು ಪಿ.ಎಸ್.ಪಿ ಕಾರ್ಯಕ್ರಮಗಳ ಅನು­ದಾನದಲ್ಲಿ ಎಸ್.ಸಿ., ಎಸ್.ಟಿ. ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿ ತಕ್ಷಣ ಆರಂಭಿಸಬೇಕು. ಕೌಳ್ಳೂರ ಗ್ರಾಮ­ದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಕರೆದಿದ್ದ ವಿವಿಧ ಕಾಮಗಾರಿಗಳ ಟೆಂಡರ್ ರದ್ದು­ಗೊಂಡಿದ್ದು, ಹೊಸ ಟೆಂಡರ್ ಕರೆಯ­ಬೇಕು. ಯಾವುದೇ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ ಎನ್.ಒ.ಸಿ ಬೇಕಾ­ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಸಚಿವರು ದರು.

ಟಾಸ್ಕ್‌ ಪೊರ್ಸ್‌ ಅಡಿಯಲ್ಲಿ ಮಂಜೂರಾಗಿರುವ ಮತ್ತು ಅನು­ಮೋದನೆ­ಗೊಂಡಿರುವ ಕಾಮಗಾರಿ­ಗಳನ್ನು ತಕ್ಷಣ ಪೂರ್ಣಗೊಳಿಸಲು ಸೂಚಿಸಿ ಸಭೆಗೆ ಗೈರು ಹಾಜರಾಗಿದ್ದ ಜೇಸ್ಕಾಂ ಕಾರ್ಯನಿರ್ವಾಹಕ ಎಂಜಿನಿ­ಯರ್‌ರಿಗೆ ವಿವರಣೆ ಕೇಳಿ ನೋಟಿಸ್‌ ಜಾರಿಗೊಳಿಸಿವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಕ್ಷಣ ಅನುದಾನ ಮಂಜೂರು ಮಾಡ­ಲಾಗುತ್ತಿದೆ. ಅಧಿಕಾರಿಗಳು ಸಹ ಪ್ರಾಮಾಣಿಕತೆಯಿಂದ ಮತ್ತು ಜವಾಬ್ದಾರಿಯಿಂದ ತಮ್ಮ ಇಲಾಖೆ ವ್ಯಾಪ್ತಿಯ ಕಾಮಗಾರಿಗಳನ್ನು ಪೂರ್ಣ­ಗೊಳಿಸುವಂತೆ ಕಿವಿ ಮಾತು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.