ಯಾದಗಿರಿ: ಜಿಲ್ಲೆಯೂ ಐತಿಹಾಸಿಕವಾಗಿ ಸಾಕಷ್ಟು ಮಹತ್ವವನ್ನು ಪಡೆದಿದೆ. ಯಾದವರು, ಚಾಲುಕ್ಯರು, ರಾಷ್ಟ್ರಕೂಟರು ಸೇರಿದಂತೆ ಹಲವು ರಾಜಮನೆತಗಳು ಇಲ್ಲಿ ಆಡಳಿತ ನಡೆಸಿವೆ. ಜಿಲ್ಲೆಯಲ್ಲಿರುವ ಹಲವು ಐತಿಹಾಸಿಕ ಸ್ಮಾರಕಗಳು ಇಲ್ಲಿನ ಮಹತ್ವವನ್ನು ಸಾರಿ ಹೇಳುತ್ತಿವೆ.
ಆದರೆ, ಈ ಎಲ್ಲ ಕುರುಹುಗಳು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದು, ಪಕ್ಕದ ಕಲಬುರ್ಗಿ ಜಿಲ್ಲೆಯ ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಜೊತೆ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದಾರೆ. ಆದ್ದರಿಂದ ಇಲ್ಲಿ ಜನರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದಾರೆ.
ಯಾದಗಿರಿ ಸೇರಿದಂತೆ ಸುರಪುರ, ಶಹಾಪುರಗಳಲ್ಲಿರುವ ಕೋಟೆ ಮತ್ತು ದೇವಸ್ಥಾನಗಳು ಇಲ್ಲಿಯ ಇತಿಹಾಸದ ಕಥೆಗಳನ್ನು ಸಾರಿ ಸಾರಿ ಹೇಳುತ್ತಿವೆ.
ಕೆಂಭಾವಿಯ ಪ್ರಾಚ್ಯವಸ್ತು, ಮುದನೂರು ದೇವರ ದಾಸಿಮಯ್ಯ ಜನ್ಮ ಸ್ಥಳ ಹಾಗೂ ಕೊಡೇಕಲ್‌ನ ಹಿಂದು–-ಮುಸ್ಲಿಂ ಸೌಹಾರ್ದದ ಬಸವಣ್ಣನ ದೇವಸ್ಥಾನ, ದಕ್ಷಿಣ ಕಾಶಿ ಎಂದು ಕರೆಯುವ ನಾರಾಯಣಪುರದ ಛಾಯಾ ಭಗವತಿ ಕ್ಷೇತ್ರ, ಸುರಪುರ ರಾಜವಂಶದ ಕೋಟೆ ಕೊತ್ತಲುಗಳು, ಏವೂರಿನ ಐತಿಹಾಸಿಕ ವಾಸ್ತುಶಿಲ್ಪಗಳಿಂದ ಕೂಡಿದ ದೇವಾಲಯ ಹಾಗೂ ಶಾಸನಗಳು, ಯಾದಗಿರಿ ತಾಲ್ಲೂಕಿನ ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ ಫಾಲ್ಸ್, ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಮಠ, ಯಾದಗಿರಿ ಬೆಟ್ಟದಲ್ಲಿನ ಅರಮನೆ, ಜಿನ್ನಪ್ಪನ ಬೆಟ್ಟ, ಶಹಾಪುರ ತಾಲ್ಲೂಕಿನ ಮಲಗಿದ ಬುದ್ಧನ ಬೆಟ್ಟ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ಜಿಲ್ಲೆಯಲ್ಲಿವೆ.
***
ನಮ್ಮೊಳಗಿನ ಬುದ್ಧ ಮಲಗಿದ್ದಾನೆ!
ಶಹಾಪುರ: ನೋಡುಗರ ಮನದಲ್ಲಿ ಹಾಗೂ ಕಣ್ಣುಗಳಲ್ಲಿ ಶೋಧದ ತುಡಿತವಿದ್ದರೆ ಬೆಟ್ಟದ ಕಲ್ಲುಬಂಡೆಗಳ ನಡುವೆ ವಸ್ತುಗಳನ್ನು ಕಾಣಲು ಸಾಧ್ಯ. ನಿಸರ್ಗದ ಮಡಲಿನ ವಿಶಾಲವಾದ ಕಲ್ಲು ಬಂಡೆಯ ನಡುವೆ ರಾಜ್ಯ ಹೆದ್ದಾರಿ ಅನತಿ ದೂರದಲ್ಲಿ ಬುದ್ಧ ಮಲಗಿದ್ದಾನೆ!
ಶಹಾಪುರ– ಭೀಮರಾಯನಗುಡಿ ಮಧ್ಯದ ನಗರದಿಂದ 2 ಕಿ.ಮೀ ಅಂತರದಲ್ಲಿ ಹೆದ್ದಾರಿಯ ಮೇಲೆ ಸಂಚರಿಸುವಾಗ (ಶಹಾಪುರ ನಗರದಿಂದ ಸಾಗುವಾಗ)ಎಡಗಡೆ ಸುಮಾರು ಅರ್ಧ ಕಿ.ಮೀ ದೂರದ ಎತ್ತರದಲ್ಲಿ ಉದ್ದನೆಯ ಗುಡ್ಡ ಕಾಣುತ್ತೇವೆ.
ಆಗ ನಿಧಾನವಾಗಿ ನಮ್ಮೊಳಗೆ ಬುದ್ಧನ ಚಿತ್ರವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಸಾಲು ಬೆಟ್ಟದ ಮೇಲೆ ಕಣ್ಣು ತೆರೆದು ನೋಡುತ್ತಾ ಸಾಗುತ್ತಿದ್ದಂತೆ ಬಂಡೆಗಳ ನಡುವೆ ಬುದ್ಧನ ಕವಿ, ಮೂಗು, ದೇಹವು ಮಲಗಿದಂತೆ ಕಾಣುತ್ತದೆ. ಆಗ ನಮ್ಮ ಅರಿವಿಗೆ ಇಲ್ಲದಂತೆ ಬುದ್ದ ನಮ್ಮೊಳಗೆ ಇಳಿಯುತ್ತಿದ್ದಂತೆ ಆಗ ಮನಸ್ಸಿಗೆ ಏನೋ ಪಡೆದಷ್ಟು ಸಂಭ್ರಮವಾಗುತ್ತದೆ.
ಶೋಧ: 1972ರಲ್ಲಿ ಸುರಪುರದ ರಂಗರಾವ ಬಡಶೇಷಿ ಆಗ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ಅಧಿಕಾರಿಯೆಂದು ಸೇವೆ ಸಲ್ಲಿಸುತ್ತಿದ್ದರು. ತಮ್ಮೂರಿಗೆ ಬಸ್ಸಿನಲ್ಲಿ ಪ್ರಯಾಣಿತ್ತಿರುವಾಗ ಪ್ರತಿಬಾರಿಯು ಬೆಟ್ಟದ ಕಡೆ ಕಣ್ಣು ಹಾಯಿಸುತ್ತಾ ಇದ್ದಾಗ ಜಗಕ್ಕೆ ಅಹಿಂಸೆಯ ಬೋಧನೆ ಮಾಡಿದ ನಮ್ಮೊಳಗಿನ ಬುದ್ಧ ಸಾಲು ಬಂಡೆಗಳ ನಡುವೆ ಮಲಗಿದ್ದಾನೆ ಎನ್ನುವ ಭಾವನೆ ಬರುತ್ತಿತ್ತು.
ಅವರ ಶೋಧನೆಯ ಫಲವಾಗಿ ಇಂದು ಐತಿಹಾಸಿಕ ಹೆಜ್ಜೆ ಗುರುತಿನಂತೆ ಕಾಣುತ್ತಿದೆ.ಯಾವುದೇ ಸಭೆ ಸಮಾರಂಭಗಳಲ್ಲಿ ನೆನಪಿನ ಕಾಣಿಕೆ ನೀಡುವಾಗ ಬುದ್ಧ ಮಲಗಿದ ಚಿತ್ರ ಒಕ್ಕಣಿಗೆ ಬರೆದು ಭಾವಚಿತ್ರವನ್ನು ನೀಡುವುದು ಸಾಮಾನ್ಯವಾಗಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಅಂದಿನ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಆಸಕ್ತಿಯಿಂದ ಕೇಂದ್ರ ಸರ್ಕಾರದಿಂದ ₹4 ಕೋಟಿ ಅನುದಾನ ಜಿಲ್ಲಾಧಿಕಾರಿಯ ಖಾತೆಗೆ ಜಮಾ ಆಗಿದೆ. ಅಲ್ಲಿನ ಬೆಟ್ಟಕ್ಕೆ ಸಾಗಲು ರಸ್ತೆ, ಸೂಚನಾಫಲಕ, ವೀಕ್ಷಣಾ ಗೋಪುರ ನಿರ್ಮಾಣ, ಉದ್ಯಾನ ಹೀಗೆ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಅನುಷ್ಠಾನ ಮಾತ್ರ ಶೂನ್ಯವಾಗಿದೆ.
ರಾಜ್ಯ ಹೆದ್ದಾರಿಯಿಂದ ಅನತಿ ದೂರದ ಬೆಟ್ಟದ ಬಳಿ ಸಾಗಲು ರಸ್ತೆ ಇಲ್ಲ. ಖಾಸಗಿ ವ್ಯಕ್ತಿಗಳ ಜಮೀನು ಇವೆ. ವೀಕ್ಷಣಾ ಗೋಪುರ, ರಸ್ತೆ ಹಾಗೂ ಇನ್ನಿತರ ಅಗತ್ಯ ಕಟ್ಟಡ ಕಾಮಗಾರಿ ನಿರ್ಮಿಸಲು ಮೂರು ಎಕರೆ ಜಮೀನು ಅವಶ್ಯವಾಗಿದೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆ ಆಮೇಗತಿಯಲಿದೆ.
ಪ್ರವಾಸೋದ್ಯಮದ ಮೇಲ್ವಚಾರಣೆ ಹೊಣೆ ಹೊತ್ತ ಜಿಲ್ಲಾಧಿಕಾರಿಗಳು ಹೆಚ್ಚಿನ ಆಸಕ್ತಿ ತೋರಿಸದೆ ಇರುವುದು ವಿಳಂಬಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.
ವಿಶಾಲವಾದ ಬುದ್ಧ ವಿಹಾರ ನಿರ್ಮಾಣ ಮಾಡಿರುವುದು ಮೆಚ್ಚುಗೆ ಸಂಗತಿ. ಇನ್ನೂ ಒಂದಿಷ್ಟು ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದು ತುರ್ತು ಕೆಲಸವಾಗಿದೆ. ಅಲ್ಲದೆ ಬುದ್ಧ ವಿಹಾರ ಪಕ್ಕದಲ್ಲಿಯೇ ವಿಶಾಲವಾದ ಮಾವಿನ ಕೆರೆ ಇದೆ.
ಕೆರೆ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ನಿರೀಕ್ಷಿದಷ್ಟು ಕೆಲಸ ಮಾತ್ರ ಸಾಗಿಲ್ಲ. ಕೆರೆಯ ಸುತ್ತಲು ಜಾಲಿ ಗಿಡ ತೆಗೆದು, ಸ್ವಚ್ಛತೆ ಮಾಡಿ ಮರ, ಹಾಸು ಬಂಡೆ, ವಿಕ್ಷಣಾ ಗೋಪುರ ನಿರ್ಮಿಸಿದ್ದಾರೆ. ಆದರೆ ನಿರ್ವಹಣೆಯ ಸಮಸ್ಯೆಯಿಂದ ನಲುಗುತ್ತಿದೆ.
ಕೆರೆ ಸಂರಕ್ಷಣೆ ಮತ್ತು ಉದ್ಯಾನ ನಿರ್ವಹಣೆಗಾಗಿ ಪ್ರತ್ಯೇಕವಾದ ಸಿಬ್ಬಂದಿಯನ್ನು ನೇಮಿಸಬೇಕು. ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಕಲ್ಪಿಸುವುದರಿಂದ ಇದೊಂದು ಅತ್ಯುತ್ತಮ ಪ್ರವಾಸಿ ತಾಣವಾಗುತ್ತದೆ ಎನ್ನುವುದು ಇಲ್ಲಿನ ಜನತೆ ಆಶಯವಾಗಿದೆ.
-ಟಿ.ನಾಗೇಂದ್ರ, ಶಹಾಪುರ
***
ಬಸವಸಾಗರ ವ್ಹಾ!
ಹುಣಸಗಿ: ನಾರಾಯಣಪುರ ಬಸವಸಾಗರ ಜಲಾಶಯವು ಪ್ರತಿವರ್ಷವು ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಬರುವಂತೆ ಮಾಡಿದೆ. ಮಳೆಗಾಲದಲ್ಲಿ ಹಾಲಿನಂತೆ ಕೃಷ್ಣೆಯು ಮೈದುಂಬಿ ಹರಿಯುವ ದೃಶ್ಯವನ್ನು ನೋಡಲು ಜನರು ಬರುತ್ತಾರೆ. ಆದರೆ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಹಾಗೂ ಮಾಹಿತಿ ವ್ಯವಸ್ಥೆ ಮಾಡಬೇಕಿದೆ.
ಬಸವಸಾಗರದ ತಟದಲ್ಲಿರುವ ಉದ್ಯಾನವನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಲ್ಲಿ ನಿತ್ಯ ನೂರಾರು ಜನರು ತಮ್ಮ ಮಕ್ಕಳೊಂದಿಗೆ ಬರುತ್ತಾರೆ. ಸುಮಾರು 20ವರ್ಷಗಳಿಂದಲೂ ಇಲ್ಲಿರುವ ಉದ್ಯಾನವನ ಯಾವುದೇ ಹೊಸತನ ಕಂಡಿಲ್ಲ.
ಏಷ್ಯಾದಲ್ಲೇ ಉದ್ದದ ಅಕ್ವಾಡೆಕ್ಟ್: ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಮರ್ಥದ ಕಾಲುವೆ ನಿರ್ಮಿಸಲಾಗಿದೆ. ಆದರೆ ಹಗರಟಗಿ ಗ್ರಾಮದ ಬಳಿ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾದ ಡೋಣಾ ಅಕ್ವಾಡೆಕ್ಟ್ ನಿರ್ಮಿಸಲಾಗಿದ್ದು, ಇದು ಕೂಡಾ ನೋಡಲು ಅತ್ಯಂತ ಸುಂದರವಾಗಿದೆ.
ಡೋಣಿ ನದಿ ಕೆಳಗೆ ಹರಿಯುತ್ತಿದ್ದರೇ ಆ ನದಿಯ ಮೇಲೆ ನೂರಾರು ಕಮಾನುಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಮರ್ಥದ ನಾಲೆ ನಿರ್ಮಿಸಲಾಗಿದ್ದು, 6 ಲಕ್ಷ ಎಕರೆ ಪ್ರದೇಶದ ರೈತರಿಗೆ ಈ ಅಕ್ವಾಡೆಕ್ಟ್ ಮೂಲಕ ನೀರು ಹರಿದುಹೋಗುತ್ತಿರುವುದು ವಿಶೇಷ.
ನಾರಾಯಣಪುರ ಇತಿಹಾಸ ಪ್ರಸಿದ್ಧ ತಾಣವಾಗಿದ್ದು, ಇಲ್ಲಿನ ಕೃಷ್ಣಾ ತಟದಲ್ಲಿರುವ ಛಾಯಾ ಭಗವತಿ ದೇವಸ್ಥಾನ ನೋಡುಗರಿಗೆ ಹೊಸತನ ನೀಡುತ್ತದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸುಮಾರು ₹ 60 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು, ಸ್ನಾನ ಹಾಗೂ ಶೌಚ ಗೃಹ ನಿರ್ಮಿಸಲಾಗಿದೆ.
ಆದರೆ ಅವು ಕಳೆದ ನಾಲ್ಕು ವರ್ಷಗಳಿಂದಲೂ ನಿರ್ಮಾಣ ಹಂತದಲ್ಲಿಯೇ ಇವೆ. ಕಟ್ಟಡ ಪೂರ್ಣಗೊಂಡರೂ ಅವುಗಳಿಗೆ ನೀರು, ಹಾಗೂ ವಿದ್ಯುತ್ ಸೌಲಭ್ಯ ಒದಗಿಸುವಲ್ಲಿ ಯಾವುದೇ ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ಕ್ಷೇತ್ರದ ಅರ್ಚಕರಾದ ಶ್ಯಾಮಸುಂದರ ಜೋಶಿ ಹೇಳುತ್ತಾರೆ.
ಬುಡ್ಡರ ಮನೆಗಳು: ನಾರಾಯಣಪುರದಿಂದ ಹುಣಸಗಿಗೆ ಹೋಗುವ ಮಾರ್ಗದಲ್ಲಿ ರಾಜನಕೋಳುರನ ಬುಡ್ಡರ ಮನೆಗಳು ತನ್ನದೇ ಆದ ಇತಿಹಾಸ ತಿಳಿಸುತ್ತವೆ. ಅಲ್ಲದೇ ಸಮಾಜನತೆ ತತ್ವ ಬೋಧಿಸಿದ ಕಾಲಜ್ಞಾನಿ ಕೊಡೇಕಲ್ಲ ಬಸವೇಶ್ವರ ದೇವಸ್ಥಾನದಲ್ಲಿನ ಅಭಿವೃದ್ಧಿಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನ್ನುವ ಆರೋಪವು ಇದೆ.
***
ಔರಂಗಜೇಬನಿಗೆ ಜಗ್ಗದ ವಾಗಣಗೇರಿ ಕೋಟೆ
ಸುರಪುರ: ಪೇಠಅಮ್ಮಾಪುರ ಮಾರ್ಗದಲ್ಲಿ ಸಂಚರಿಸಿದರೆ ಸುಂದರವಾದ ಕೋಟೆ ಕಣ್ಮನ ಸೆಳೆಯುತ್ತದೆ. ಎತ್ತರ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಆವೃತವಾದ ಈ ಪ್ರದೇಶ ನೈಸರ್ಗಿಕ ಕೋಟೆಯಾಗಿದೆ. 260 ರಿಂದ 270 ಅಡಿ ಎತ್ತರದ ಗುಡ್ಡದ ಮೇಲೆ 6 ಮೀಟರ್ ಕೋಟೆ ಗೋಡೆ ಕಟ್ಟಲಾಗಿದೆ. ವಾಗಣಗೇರಿ ಸುರಪುರ ಸಂಸ್ಥಾನಿಕರ ಮೊದಲನೇ ರಾಜಧಾನಿಯಾಗಿತ್ತು.
ದಿಲ್ಲಿಯ ಸಾಮ್ರಾಟ್ ಮೊಗಲ್ ಬಾದಶಹ ಔರಂಗಜೇಬನು ಆರೇಳು ತಿಂಗಳು ದಾಳಿ ಮಾಡಿದರೂ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಲ್ಲಿನ ಅರಸರು ವೀರ ಬೇಡರ ಪಡೆಯಿಂದ ಸುಭದ್ರವಾಗಿತ್ತು. ಗುಡ್ಡದಲ್ಲಿಯೇ ಅಡಗಿಕೊಂಡು ಒಮ್ಮಿಂದೊಮ್ಮೆಲೆ ವೈರಿ ಮೇಲೆ ಆಕ್ರಮಣ ಮಾಡುವ ಗೆರಿಲ್ಲಾ ಮಾದರಿಯ ಯುದ್ಧಕ್ಕೆ ಈ ಕೋಟೆ ಸೂಕ್ತವಾಗಿತ್ತು.
ಇಡೀ ಭರತ ವರ್ಷವನ್ನು ಗೆದ್ದು ಬೀಗಬೇಕಿಂದಿದ್ದ ಔರಂಗಜೇಬ ಇಲ್ಲಿನ ದೊರೆಗಳ ಕೈಯಲ್ಲಿ ಸೋತು ಸುಣ್ಣವಾಗಿದ್ದ. ಔರಂಗಜೇಬ ಇಲ್ಲಿನ ಶೂರ ದೊರೆಗಳನ್ನು ಸ್ತುತಿಸಿ ಬರೆದುಕೊಟ್ಟ ಸನ್ನದು ಈಗಲೂ ಸುರಪುರದ ಅರಮನೆಯಲ್ಲಿ ನೋಡಲು ಸಿಗುತ್ತದೆ. ಈ ಮೂಲಕ ಇಲ್ಲಿನ ಅರಸರು ಕರ್ನಾಟಕ, ಅಂಧ್ರ, ತಮಿಳುನಾಡು, ಕೇರಳದ ದೇವಸ್ಥಾನಗಳನ್ನು ರಕ್ಷಿಸಲು ಕಾರಣರಾದರು ಎಂದು ಅನೇಕ ಲೇಖಕರು ಉಲ್ಲೇಖಿಸಿದ್ದಾರೆ.
ಈ ಕೋಟೆಗೆ ಹೋಗಲು ಗ್ರಾಮದ ವಾಯುವ್ಯ ದಿಕ್ಕಿಗೆ ಕೆರೆಯ ಪಶ್ಚಿಮದಿಂದ ನೂರಾರು ಅಗಲವಾದ, ಸುಂದರವಾದ ಪಾವಟಿಗೆಗಳಿವೆ. ಮೊದಲಿಗೆ ಸುಂದರ ಮುಖ ಮಂಟಪ ಸ್ವಾಗತಿಸುತ್ತದೆ. ಈ ಮಂಟಪದ ಮುಂದೆಯೇ ಅಗಸಿಯನ್ನು ನಿರ್ಮಿಸಲಾಗಿದೆ.
ಬಾಗಿಲ ಚೌಕಟ್ಟು ಅಲಂಕಾರ ರಹಿತವಾಗಿದೆ. ಒಳ ಪಾರ್ಶ್ವಗಳಲ್ಲಿ ಕಟ್ಟೆಗಳಿವೆ, ಒಳಭಾಗದ ಕೋಟೆ ಗೋಡೆಗೆ ಹೊಂದಿಕೊಂಡು ದ್ವಾರಬಾಗಿಲು ಹಾಗೂ ಕೋಟೆಗೋಡೆ ಮೇಲೆ ಹೋಗಲು ಮೆಟ್ಟಲುಗಳಿವೆ. ಕೋಟೆಯ ಒಳ ಪ್ರವೇಶಿಸುತ್ತಿದ್ದಂತೆಯೇ ನಾಲ್ಕು ದಿಕ್ಕಿಗೂ ಮೆಟ್ಟಿಲುಗಳಿರುವ ಸಿಹಿ ನೀರಿನ ಚೌಕಾಕಾರದ ಪುಷ್ಕರಣಿ ಗಮನ ಸೆಳೆಯುತ್ತದೆ.
ಈ ಕೋಟೆಯ ಆಗ್ನೇಯ ಮೂಲೆಯಲ್ಲಿ ವೇಣುಗೋಪಾಲ ಸ್ವಾಮಿ ಮಂದಿರದ ಇದೆ. ಗರ್ಭಗೃಹ, ಸಭಾಮಂಟಪದ ಚೌಕಾಕಾರದ ಜಗುಲಿ ಹಂಪೆಯ ಮಹಾನವಮಿ ದಿಬ್ಬದಂತೆ ಎದ್ದುಕಾಣುತ್ತದೆ. ದೇವಾಲಯದ ಸುತ್ತಲೂ ಕಂಬಗಳ ಮೇಲಿನ ಉಬ್ಬು ಶಿಲ್ಪಗಳು ಎದ್ದು ಕಾಣುತ್ತೇವೆ.
ಇವುಗಳಲ್ಲಿ ಪ್ರಮುಖವಾಗಿ ವಿಷ್ಣುವಿನ ಅವತಾರಗಳಾದ ಉಗ್ರನರಸಿಂಹ, ವಾಮನ, ಶ್ರೀಕೃಷ್ಣ, ಶ್ರೀರಾಮ, ತಿಮ್ಮಪ್ಪನ ಶಿಲ್ಪಗಳು, ಮಾಳಿಗೆಕಲ್ಲುಗಳ ಮೇಲೆ ಪರ್ವತಾರೋಹಣ ಆಂಜನೇಯ ಶಿಲ್ಪಗಳು, ಚಕ್ರಾಕೃತಿಯ ಮೇಲ್ಛಾವಣೆಯ ಕಲ್ಲುಗಳು ಕಾಣುತ್ತವೆ.
ಈ ಮೂರು ಕೋಟೆಗಳ ದಕ್ಷಿಣಕ್ಕೆ ಕೆಳಗಿನ ನೆಲದ ಮೇಲೆ ಆಳವಾದ ಕಂದಕವನ್ನು ಮಾಡಲಾಗಿದೆ. ವೈರಿಗಳು ದಾಳಿ ಮಾಡಲು ಸಾಧ್ಯವಾಗದಂತೆ ಈ ಕಂದಕದಲ್ಲಿ ಯಾವಾಗಲೂ ನೀರು ತುಂಬಿಸಲಾಗುತ್ತಿತ್ತು. ಆದರೆ ಈಗ ಈ ಕಂದಕ ಹಾಳಾಗಿದೆ.
ಬೆಳಿಗ್ಗೆಯಿಂದ ಸಂಜೆವರೆಗೂ ಸುತ್ತಾಡಿದರೂ ಕೋಟೆಯ ಸಂಪೂರ್ಣ ಪ್ರದೇಶವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ವಾರಾಂತ್ಯದ ಪ್ರವಾಸ ಮುದ ನೀಡುತ್ತದೆ.
ಈ ಕೋಟೆಯನ್ನು ಪುರಾತತ್ವ ಇಲಾಖೆಯ ಸುಪರ್ದಿಗೆ ವಹಿಸಬೇಕು. ಸಿಬ್ಬಂದಿಯನ್ನು ನೇಮಿಸಿ ಅಲ್ಲಲ್ಲಿ ಫಲಕಗಳನ್ನು ಹಾಕಿ ಕೋಟೆಯಲ್ಲಿರುವ ಐತಿಹಾಸಿಕ ಪಳಯುಳಿಕೆಗಳನ್ನು ರಕ್ಷಿಸಬೇಕು ಎಂದು ಇತಿಹಾಸಕಾರರು ಆಗ್ರಹಿಸುತ್ತಾರೆ.
ಮಾರ್ಗ: ಯಾದಗಿರಿ ಜಿಲ್ಲಾ ಕೇಂದ್ರದಿಂದ 65 ಕಿಮಿ ಅಂತರದಲ್ಲಿದೆ. ಸುರಪುರದಿಂದ ಸರ್ಕಾರಿ ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ. ತಿಂಡಿ, ನೀರು ಜೊತೆಗೆ ತೆಗೆದುಕೊಂಡು ಹೋಗಬೇಕು. ಕೋಟೆಯನ್ನು ಸುತ್ತಾಡಲು ಸ್ಥಳೀಯರ ಸಹಾಯ ಅಗತ್ಯ.
–ಅಶೋಕ ಸಾಲವಾಡಗಿ
***
ಧಬ್ ಧಬಿ ಜಲಪಾತ: ಪ್ರವಾಸಿಗರಲ್ಲಿ ಮೂಡದ ಜಾಗೃತಿ
ಗುರುಮಠಕಲ್: ಧಬ್ ಧಬಿ ಜಲಪಾತವು ಸುತ್ತಲಿನ ಹಸಿರು ಪರಿಸರ ಹಾಗೂ ಪ್ರಶಾಂತತೆಯಿಂದ ಮನಸೆಳೆಯುತ್ತದೆ. ಸುಮಾರು 150 ಅಡಿಗಳಷ್ಟು ಎತ್ತರದಿಂದ ಕೆಳಗೆ ಧುಮ್ಮಿಕ್ಕುವ ಜಲರಾಶಿಯಿಂದಾಗಿ ಮಿನಿ ಜೋಗ ಎನ್ನುವ ಹೆರಸನ್ನು ಪಡೆದಿದೆ.
ಇದನ್ನು ಅಭಿವೃದ್ಧಿಗೊಳಿಸಿದರೆ ಈ ಭಾಗದ ಮನಮೋಹಕ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳು ಇವೆ. ಸುತ್ತಲಿನ ಹಸಿರು ಮರಗಳು, ಕುರುಚಲು ಗಿಡಗಳನ್ನು ಹೊಂದಿರುವ ವನಸಿರಿಯು ಮನಸ್ಸನ್ನು ಸೆಳೆದುಕೊಳ್ಳುತ್ತವೆ ಎನ್ನುತ್ತಾರೆ ಪ್ರವಾಸಿಗರಾದ ಶ್ರುತಿ, ಧನಶ್ರೀ, ಅಭಿಷೇಕ್.
ಸೌಲಭ್ಯಗಳಿಂದ ವಂಚಿತ: ನಜರಾಪುರದ ಮುಖ್ಯರಸ್ತೆಯಿಂದ ಜಲಪಾತಕ್ಕೆ ತೆರಳಲು ಮಣ್ಣಿನ ರಸ್ತೆ ಇದೆ. ಈ ಪ್ರದೇಶವನ್ನು ನೋಡಲು ರಜೆ ದಿನಗಳಲ್ಲಿ ಹಲವು ಜನ ಬರುತ್ತಾರೆ. ಆದರೆ ಪ್ರವಾಸಿಗರಿಗೆ ಯಾವುದೇ ಸೌಲಭ್ಯಗಳು ಇಲ್ಲ ಎನ್ನುತ್ತಾರೆ ಸ್ಥಳೀಯರಾದ ದೇಸಾಯಿರೆಡ್ಡಿ ಹಾಗೂ ಸಾಯಿರೆಡ್ಡಿ.
ಜಾಗೃತಿ ಅಗತ್ಯ: ನಿಸರ್ಗದ ಮಡಿಲಲ್ಲಿ ಮನಸ್ಸಿಗೆ ನೆಮ್ಮದಿ ಹಾಗೂ ಉಲ್ಲಾಸಗೊಳ್ಳಲೆಂದು ಇಲ್ಲಿಗೆ ಬರುವ ಪ್ರವಾಸಿಗರು ತಾವು ತಂದ ತಿಂಡಿಯನ್ನು ತಿಂದು ಗಲೀಜು ಮಾಡುತ್ತಾರೆ. ಇದರಿಂದ ಜಲಪಾತದ ಸುತ್ತಲಿನ ಪ್ರದೇಶ ಕಲುಷಿತಗೊಳ್ಳುವುದರ ಜೊತೆಗೆ ಜಲಚರಗಳ ಪ್ರಾಣಕ್ಕೂ ಅಪಾಯ ಉಂಟು ಮಾಡುತ್ತದೆ.
ಕೆಲವರು ಕುಡಿದು ಬಾಟಲಿಗಳನ್ನು ಬಿಸಾಡುತ್ತಾರೆ. ಇದ ಪುಂಡ ಪೋಕರಿಗಳ ತಾಣ ಎನ್ನುವ ಕುಖ್ಯಾತಿಗೂ ಒಳಗಾಗುತ್ತಿದೆ.
ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಎಚ್ಚತ್ತುಕೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.
ಅಭಿವೃದ್ಧಿಯ ನಿರೀಕ್ಷೆ: ಪ್ರಕೃತಿಯ ರುದ್ರರಮಣೀಯತೆಯನ್ನು, ನಿಸರ್ಗದ ಸೌಂದರ್ಯವನ್ನು ಹೊಂದಿರುವ ಜಲಪಾತವನ್ನು ಅಭಿವೃದ್ಧಿಗೊಳಿಸಬೇಕು ಎನ್ನುವುದು ಪ್ರವಾಸಿಗರ ಒತ್ತಾಯ. ರಸ್ತೆ, ಶೌಚಾಲಯ, ಸೂಚನಾ ಫಲಕಗಳು ಸೇರಿದಂತೆ ಇತರೆ ಮೂಲ ಸೌಲಭ್ಯ ಒದಗಿಸಿದಲ್ಲಿ ಬಿಸಿಲನಾಡಿ ಜಲಪಾತಕ್ಕೆ ಮತ್ತಷ್ಟು ಮೆರಗು ಬರುತ್ತದೆ.
-ಮಲ್ಲಿಕಾರ್ಜುನ ಪಾಟೀಲ ಚಪೆಟ್ಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.