ADVERTISEMENT

ಕೀರ್ತಿ ಹೆಚ್ಚಿಸುವ ಮಕ್ಕಳನ್ನು ರೂಪಿಸಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:17 IST
Last Updated 20 ಸೆಪ್ಟೆಂಬರ್ 2013, 8:17 IST

ಯಾದಗಿರಿ: ಮಕ್ಕಳು ದೇಶದ ಸಂಪತ್ತು. ಸಂಪದ್ಭರಿತ ದೇಶದ ನಿರ್ಮಾಣಕ್ಕಾಗಿ ಕೀರ್ತಿ ಹೆಚ್ಚಿಸುವಂತಹ ವಿದ್ಯಾರ್ಥಿ­ಗಳನ್ನು ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಹೇಳಿದರು.

ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪ­ದಲ್ಲಿ ಗುರುವಾರ ಆಯೋ­ಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ–ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ  ಮಾತನಾಡಿದರು,
ಮಕ್ಕಳಿಗೆ ಜ್ಞಾನ ನೀಡುವ ಗೌರವದ ವೃತ್ತಿ ಶಿಕ್ಷಕರದ್ದು. ವಿದ್ಯಾರ್ಥಿಗಳು ಭವಿಷ್ಯತ್ತಿನ ಉತ್ತಮ ಪ್ರಜೆ­ಯಾಗಬೇಕು. ಈ ದಿಸೆಯಲ್ಲಿ ಕೀರ್ತಿ ಹೆಚ್ಚಿಸುವಂತಹ ವಿದ್ಯಾರ್ಥಿಗಳನ್ನು ರೂಪಿಸಲು ಶಿಕ್ಷಕರು ಗಮನ ನೀಡಬೇಕು ಎಂದು ಹೇಳಿದರು.

ಕಲಿಯುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರ ಬಗ್ಗೆ ತೀಕ್ಷ್ಣ ಅವಲೋಕನ ಮಾಡುತ್ತಿರುತ್ತಾರೆ. ಅದರಂತೆ ಅವರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತಲೂ  ಉತ್ಸುಕರಾಗಿ­ರು­ತ್ತಾರೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವುದರ ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ಅವರನ್ನು ಸದೃಢ­ಗೊಳಿಸಬೇಕು. ಉತ್ತಮ ಪ್ರಜೆಯನ್ನಾಗಿ­ಸಲು ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಹಾಲಬಾವಿಯ ಶಿಕ್ಷಕಿ ಚಂದ್ರಕಲಾ, ಬುದನೂರನ ಶಿಕ್ಷಕ ಶಿವಲಿಂಗಪ್ಪ, ಸುರಪುರ ತಾಲ್ಲೂಕಿನ ಕೂಡಲಗಿಯ ಶಾಲೆಯ ಭೀಮರಾಯ ಮತ್ತು ಯಾದಗಿರಿ ತಾಲ್ಲೂಕಿನ ಲಿಂಗೇರಿ ಸ್ಟೇಶನ್‌ನ ಶಿಕ್ಷಕ ಶಂಕರಪ್ಪ,  ಪ್ರೌಢಶಾಲಾ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ರುದ್ರಪ್ಪ, ಸುರಪುರ ತಾಲ್ಲೂಕಿನ ನಾರಾಯಣಪೂರದ ಜಯಶ್ರೀ, ಯಾದಗಿರಿ ತಾಲ್ಲೂಕಿನ ಹೊನಗೇರಾ ಶಿಕ್ಷಕ ಮಲ್ಲಿಕಾರ್ಜುನ ಮತ್ತು ಯಾದಗಿರಿಯ ಮೆಹಬೂಬ್‌ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಯಾದಗಿರಿ ತಾಲ್ಲೂಕಿನ ಲಿಂಗೇರಿ ಸ್ಟೇಶನ್‌ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸೂರ್ಯಪ್ರಕಾಶ ಘನಾತೆ ಮತ್ತು ಯಾದಗಿರಿ ತಾಲ್ಲೂಕಿನ 25 ಜನ ನಿವೃತ್ತ ಶಿಕ್ಷಕರನ್ನು  ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಮಹ್ಮದ್ ಇಸಾಕ್ ಜಮಖಂಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಚಂಡ್ರಿಕಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ  ಭೀಮರಾಯ ಕಂದಕೂರ, ಡಯಟ್ ಪ್ರಾಂಶುಪಾಲ ಟಿ.ಜಿ. ಸಯೀದಾ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಡಿ.ಎಂ. ಹೊಸಮನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಕಿಷ್ಟಪ್ಪ, ಕೃಷ್ಣ ಚಪೇಟ್ಲಾ, ನಿವೃತ್ತ ಶಿಕ್ಷಕ ಸಿದ್ದಲಿಂಗಪ್ಪ,­ನಿವೃತ್ತ ಶಿಕ್ಷಕರು, ಶಿಕ್ಷಕರ ಸಂಘದ ಪದಾಧಿ­ಕಾರಿಗಳು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.