ADVERTISEMENT

ಕೆಂಭಾವಿ: ಪಾದಚಾರಿ, ವ್ಯಾಪಾರಸ್ಥರ ಪರದಾಟ:ಆಗದ ಚರಂಡಿ: ರಸ್ತೆ ಮೇಲೆ ನೀರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 9:35 IST
Last Updated 20 ಏಪ್ರಿಲ್ 2012, 9:35 IST

ಕೆಂಭಾವಿ: ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಬುಧವಾರ ಸುರಿದ ಮಳೆಯಿಂದಾಗಿ ಪಟ್ಟಣದ ಟಿಪ್ಪುಸುಲ್ತಾನ್ ವೃತ್ತದಲ್ಲಿ ರಸ್ತೆಯ ಮೇಲೆ ನೀರು ನಿಂತಿದ್ದು, ಪಾದಚಾರಿಗಳು ಹಾಗೂ ವ್ಯಾಪಾರಸ್ಥರು ಪರದಾಡುವಂತಾಗಿದೆ.

ಚರಂಡಿ ನಿರ್ಮಾಣಕ್ಕಾಗಿ ಕಳೆದ ಎರಡು ತಿಂಗಳ ಹಿಂದೆ ಭೂ ಸೇನಾ ನಿಗಮದವರು ತೆಗ್ಗು ತೋಡಿದ್ದು, ಕಾಮಗಾರಿ ಮಾತ್ರ ಪ್ರಾರಂಭಿಸಿಲ್ಲ. ತೆಗ್ಗನ್ನು ಮುಚ್ಚದೇ ಹಾಗೆಯೇ ಬಿಡಲಾಗಿದ್ದು, ಜನರು ಸಂಚರಿಸಲು ಆಗದಂತಾಗಿದೆ.

ವರ್ತುಲ ರಸ್ತೆಯಲ್ಲಿರುವ ಈ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೀಗಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಮಳೆಗಾಲದಲ್ಲಂತೂ ಈ ಬಡಾವಣೆಯ ಜನರ ಗೋಳು ಕೇಳುವಂತಿಲ್ಲ. ಇಡೀ ಬಡಾವಣೆಯ ಚರಂಡಿ ನೀರು ಈ ರಸ್ತೆಯ ಮೇಲೆ ಹರಿಯುತ್ತಿದ್ದು, ಎಲ್ಲೆಡೆ ದುರ್ವಾಸನೆ ಹರಡಿದೆ.

ರಸ್ತೆಯ ಪಕ್ಕದಲ್ಲಿ ಒಳಚರಂಡಿ ನಿರ್ಮಿಸಲು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ ಪ್ರಯತ್ನಿಸಿದ್ದು, ಯೋಜನೆ ತಯಾರಿಸಿ ಟೆಂಡರ್ ಕೂಡಾ ಮುಗಿದಿದೆ. ಈ ಕಾರ್ಯವನ್ನು ಕೈಗೆತ್ತಿಕೊಂಡ ಭೂಸೇನಾ ನಿಗಮದ ಅಧಿಕಾರಿಗಳು ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಆದರೆ ಚರಂಡಿ ನಿರ್ಮಿಸುವ ಸ್ಥಳದಲ್ಲಿ  ಕುಡಿಯುವ ನೀರಿನ ಪೈಪ್‌ಗಳು ಬಂದಿದ್ದು, ಅದನ್ನು ತೆಗೆದು ಚರಂಡಿ ನಿರ್ಮಿಸಬೇಕಾಗಿದೆ. ಅದಕ್ಕಾಗಿ ಕಾಮಗಾರಿ ನಿಲ್ಲಿಸಲಾಗಿದ್ದು, ಜನರಿಗೆ ತೊಂದರೆಯಾಗಿದೆ.

ಸ್ವಲ್ಪ ಮಳೆ ಬಂದರೂ ರಸ್ತೆಯ ತುಂಬ ನೀರು ನಿಲ್ಲುತ್ತಿದೆ. ಇದರಿಂದ ಈ ಬಡಾವಣೆಯ ಜನ  ಮೂಗು ಮುಚ್ಚಿಕೊಂಡೇ ಓಡಾಡಬೇಕಾಗಿದೆ, ಮಳೆಗಾಲದಲ್ಲಿ ಅಂಗಡಿಗಳಿಗೆ ನೀರು ನುಗ್ಗಿದ ಉದಾಹರಣೆಗಳೂ ಇವೆ. ಜನಪ್ರತಿನಿಧಿಗಳು ಪ್ರಯತ್ನಿಸಿ, ಯೋಜನೆ ರೂಪಿಸಿದರೂ ಅಧಿಕಾರಿಗಳು ಕಾಮಗಾರಿ ಮಾಡಲು ಹಿಂದೇಟು ಹಾಕುತ್ತಿರುವುದಕ್ಕೆ ಕರವೇ ಅಧ್ಯಕ್ಷ ಅಕ್ಬರ್ ನಾಲತ್ವಾಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೀಘ್ರ ಚರಂಡಿ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ಪ್ರಾರಂಭ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಈಗಾಗಲೇ ಭೂಸೇನಾ ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಈ ಬಡಾವಣೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಚರಂಡಿ ನಿರ್ಮಾಣ ಯೋಜನೆಗೆ ಬಹು ಪ್ರಯತ್ನ ಮಾಡಿ ಹಣ ಬಿಡುಗಡೆ ಮಾಡಿಸಿದ್ದು, ಯಾವುದೇ ಅಭಿವೃದ್ಧಿ ಕೆಲಸ ಆಗಬೇಕಾದರೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.