ADVERTISEMENT

`ಕ್ರೀಡಾ ಮನೋಭಾವ ಇರಲಿ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:30 IST
Last Updated 5 ಸೆಪ್ಟೆಂಬರ್ 2013, 6:30 IST

ಸುರಪುರ: ಕ್ರೀಡೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕ್ರೀಡೆ ಇಲ್ಲದ ಜೀವನ ಕೀಟ ಹತ್ತಿದ ಗಿಡದಂತೆ. ಆಟಗಳು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತವೆ. ಆಟ ಓದಿಗೆ ಪೂರಕವಾಗಿರುತ್ತದೆ. ಕ್ರೀಡಾಪಟು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ವಿಕಸನ ಹೊಂದುತ್ತಾನೆ. ಉತ್ತಮ ಕ್ರೀಡಾಪಟು ಖಂಡಿತ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಂಕ್ರಪ್ಪ ಗುಳಬಾಳ ಪ್ರತಿಪಾದಿಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಆಟಗಾರರಲ್ಲಿ ಕ್ರೀಡಾ ಮನೋಭಾವ ಬಹಳ ಮುಖ್ಯ. ಇಂತಹ ಕ್ರೀಡಾಪಟು ಖಂಡಿತ ಉತ್ತುಂಗ ಸ್ಥಾನಕ್ಕೆ ಏರುತ್ತಾನೆ. ಸೋಲೇ ಗೆಲುವಿನ ಸೋಪಾನ ಎಂಬುದು ಸತ್ಯ. ಸೋಲು ಇರದಿದ್ದರೆ ಗೆಲುವು ಎಂಬ ಶಬ್ದವೂ ಇರುತ್ತಿರಲಿಲ್ಲ. ಇಂದು ಸೋತ ಕ್ರೀಡಾಪಟು ಮುಂದೆ ಗೆಲ್ಲುತ್ತಾನೆ. ಛಲ ಇರಬೇಕು. ಸಾಧಿಸುವ ಹುಮ್ಮಸ್ಸು ಇರಬೇಕು. ಸಾಧನೆ ಮಾಡಿದ ಆಟಗಾರರನ್ನು ಮಾದರಿಯನ್ನಾಗಿಟ್ಟುಕೊಂಡು ಪರಿಶ್ರಮ ಪಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್. ಆರ್. ಕುಲಕರ್ಣಿ ಮಾತನಾಡಿ, ಒಂದು ಕಾಲದಲ್ಲಿ ಸುರಪುರ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿತ್ತು. ಇಲ್ಲಿನ ವಿದ್ಯಾರ್ಥಿಗಳು ಸದಾ ಒಂದಿಲ್ಲೊಂದು ಆಟದಲ್ಲಿ ತೊಡಗಿರುತ್ತಿದ್ದರು. ಆದರೆ ಈಚೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದು ಕಳವಳಕಾರಿ. ಈ ಬಗ್ಗೆ ದ್ಯೆಹಿಕ ಶಿಕ್ಷಕರು, ಕ್ರೀಡಾಪ್ರೇಮಿಗಳು ಕಾಳಜಿ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ಭೋಸ್ಗಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಇನಾಮದಾರ, ಉಪಪ್ರಾಚಾರ್ಯೆ ಸಂಗಮ್ಮ ನಾಗಾವಿ ಮಾತನಾಡಿದರು.

ಬಿ. ಬಿ. ಸಲೆಗಾರ ಸ್ವಾಗತಿಸಿದರು. ಲಿಂಗರಾಜ ನಿರೂಪಿಸಿದರು. ಲಕ್ಷ್ಮಣ ಬಿರೆದಾರ ವಂದಿಸಿದರು. ತಾಲ್ಲೂಕಿನ ಒಟ್ಟು 11 ಕಾಲೇಜುಗಳ 300 ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಆಟಗಳಲ್ಲಿ ಭಾಗವಹಿಸಿದ್ದರು.

ನಾರಾಯಣಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.