ADVERTISEMENT

ಗುಣಮಟ್ಟದ ಕಲಿಕೆಗೆ ಹೆಸರಾದ ವಿದ್ಯಾಲಕ್ಷ್ಮಿ ಶಾಲೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:39 IST
Last Updated 11 ಡಿಸೆಂಬರ್ 2013, 8:39 IST
ಕೆಂಭಾವಿಯ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರಯೋಗ ಮಾಡಿ ತೋರಿಸುತ್ತಿರುವುದು (ಎಡಚಿತ್ರ) ಯೋಗಾಭ್ಯಾಸದಲ್ಲಿ ತೊಡಗಿರುವ ಶಾಲೆಯ ವಿದ್ಯಾರ್ಥಿಗಳು
ಕೆಂಭಾವಿಯ ವಿದ್ಯಾಲಕ್ಷ್ಮಿ ಶಾಲೆಯಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರಯೋಗ ಮಾಡಿ ತೋರಿಸುತ್ತಿರುವುದು (ಎಡಚಿತ್ರ) ಯೋಗಾಭ್ಯಾಸದಲ್ಲಿ ತೊಡಗಿರುವ ಶಾಲೆಯ ವಿದ್ಯಾರ್ಥಿಗಳು   

ಕೆಂಭಾವಿ: ಗ್ರಾಮೀಣ ಪ್ರದೇಶದಲ್ಲಿ ಗುಣ­ಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಅಂತಹ ಶಾಲೆಗಳಲ್ಲಿ ಪಟ್ಟಣದ ವಿದ್ಯಾಲಕ್ಷ್ಮಿ ಪಬ್ಲಿಕ್ ಪ್ರಾಥಮಿಕ ಶಾಲೆಯೂ ಒಂದು.

ಈ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಮಕ್ಕಳಿಗೆ ಅವುಗಳ ಮಹತ್ವವನ್ನು ತಿಳಿ ಹೇಳಲಾಗುತ್ತದೆ. ರಾಷ್ಟ್ರದ ಮಹಾನ್‌ ನಾಯಕರ ಜೀವನ ಚರಿತ್ರೆಯನ್ನು ತಿಳಿಸುವ ಮೂಲಕ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬೆಳೆಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.

ಈಚೆಗೆ ನಡೆದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ವಿಜ್ಞಾನ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ. ಈ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯ ಜಿಲ್ಲಾಮಟ್ಟದ ಸ್ಪರ್ಧೆ­ಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಶಾಲೆಯ ಇನ್ನೊಂದು ವಿಶೇಷವೆಂದರೆ, ಇಲ್ಲಿ ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಡಿಜಿಟಲ್(ಸ್ಮಾರ್ಟ್‌)ಕ್ಲಾಸ್ ಮೂಲಕ ಪಾಠ ಮಾಡಲಾಗುತ್ತಿದೆ. 1 ರಿಂದ 7ನೇ ತರಗತಿವರೆಗೆ ಒಟ್ಟು 360 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಗ್ರಾಮಿಣ ಪ್ರದೇಶದ ವಿದ್ಯಾರ್ಥಿ­ಗಳಿಗೆ ಹೊಸ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಶಾಲೆಯಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲಾಗಿದ್ದು, ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಸ್ಪರ್ಧಾ­ತ್ಮಕ ಪರೀಕ್ಷೆಗಳು, ರಸಪ್ರಶ್ನೆ, ಓದುವ ಹವ್ಯಾಸ ಬೆಳೆಸಿಕೊಳ್ಳುವುದು, ದಿನಪತ್ರಿಕೆಗಳಲ್ಲಿ ಬರುವ ಶಿಕ್ಷಣ ಪುರವಣಿಯನ್ನು ಮಕ್ಕಳಿಗೆ ನಿತ್ಯ ಬೋಧಿಸಲಾಗುತ್ತದೆ.

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಲೆಯ ಶಿಕ್ಷಕರು ಶ್ರಮಿಸುತ್ತಿದ್ದು, ಪಾಲಕರ ಸಹಕಾರವೂ ಸಿಕ್ಕಿದೆ. ಇದರಿಂದಾಗಿ ಈ ಶಾಲೆಯ ಮಕ್ಕಳು ಪಾಠದ ಜೊತೆಗೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಅಗ್ರಸ್ಥಾನ ಪಡೆಯುತ್ತಲೇ ಬಂದಿದ್ದಾರೆ.

ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿ’
‘ಶಾಲೆ ಎಂದರೆ ಕೇವಲ ಪಾಠ ಹೇಳಿ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವಂತೆ ತಯಾರಿಸುವ ಕಾರ್ಖಾನೆಯಲ್ಲ. ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಹಾಕುತ್ತಾ, ವಿದ್ಯೆಯೊಂದಿಗೆ ಉತ್ತಮ ಭೌತಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ವಾತಾವರಣ ಸೃಷ್ಟಿಸುವುದು ಶಾಲೆ ಹಾಗೂ ಶಿಕ್ಷಕರ ಕೆಲಸ. ಅಂತಹ ಒಂದು ಉತ್ತಮ ವಾತಾವರಣ ಸೃಷ್ಟಿಸಲು ನಾವು ಇಲ್ಲಿ ಪ್ರಯತ್ನಿಸುತ್ತಿದ್ದೇವೆ’.
–ನಾಗವೇಣಿ, ಮುಖ್ಯಶಿಕ್ಷಕಿ

‘ಶಿಕ್ಷಕರ ಉತ್ತಮ ಕಾರ್ಯ’

‘ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಿದ್ಯಾಭಾಸ ನೀಡುವಲ್ಲಿ ಶಾಲೆಯ ಶಿಕ್ಷಕ ವೃಂದ ಉತ್ತಮ ಕೆಲಸ ಮಾಡುತ್ತಿದೆ. ಜೊತೆಗೆ ಎಲ್ಲ ರೀತಿಯ ಚಟುವಟಿಕೆಗಳನ್ನು ಮಾಡಿಸುತ್ತಿರುವುದು ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸುವಂತಾಗಿದೆ’.
–ಯಮನಪ್ಪ, ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT