ADVERTISEMENT

ಚರಂಡಿಯಲ್ಲಿ ಶೌಚಾಲಯದ ನೀರು: ಪರದಾಟ

ಸಾರ್ವಜನಿಕ ಶೌಚಾಲಯಗಳಲ್ಲಿ ನೀರು, ನಿರ್ವಹಣೆ ಕೊರತೆ: ಗ್ರಾಮಸ್ಥರ ಆರೋಪ

ನರಸಿಂಹ ಮೂರ್ತಿ ಕುಲಕರ್ಣಿ
Published 17 ಅಕ್ಟೋಬರ್ 2016, 8:57 IST
Last Updated 17 ಅಕ್ಟೋಬರ್ 2016, 8:57 IST
ನೀರಿಲ್ಲದ ಕಾರಣ ಪಾಳು ಬಿದ್ದಿರುವ ಯಾದಗಿರಿಯ ಹನುಮಾನ ನಗರದ ಸಾರ್ವಜನಿಕ ಶೌಚಾಲಯ
ನೀರಿಲ್ಲದ ಕಾರಣ ಪಾಳು ಬಿದ್ದಿರುವ ಯಾದಗಿರಿಯ ಹನುಮಾನ ನಗರದ ಸಾರ್ವಜನಿಕ ಶೌಚಾಲಯ   

ಯಾದಗಿರಿ:  ಒಂದು ಕಡೆ ಶೌಚಾಲಯವಿದ್ದರೂ, ನೀರಿಲ್ಲದ ಕಾರಣ ಹಾಳು ಬಿದ್ದಿದೆ. ಇನ್ನೊಂದೆಡೆ ಇರುವ ಸಾರ್ವಜನಿಕ ಶೌಚಾಲಯದ ಹೊಲಸು ನೀರು ತೆರೆದ ಚರಂಡಿಯಲ್ಲಿ ಹರಿ ಬಿಡಲಾಗಿದೆ. ಇದರಿಂದ ದುರ್ವಾಸನೆ ಹೆಚ್ಚಿದ್ದು, ಸುತ್ತಲಿನ ನಿವಾಸಿಗಳು ಪರದಾಡುವಂತಾಗಿದೆ.

ನಗರದ 5ನೇ ಮತ್ತು 6ನೇ  ವಾರ್ಡ್‌ನ ಗೋಗಿ ಮೊಹಲ್ಲಾ ಮತ್ತು ಹನುಮಾನ ನಗರದ ನಿವಾಸಿಗಳು ಗೋಳು ಹೇಳತೀರದು. ಎರಡು ವಾರ್ಡಿನ ಮಧ್ಯೆ ಬರುವ ಇಲ್ಲಿನ ಚರಂಡಿಯಲ್ಲಿ  ವಾರ್ಡಿನ ಕೆಲ ಮನೆಗಳು ಸೇರಿದಂತೆ ಸಾರ್ವಜನಿಕ ಶೌಚಾಲಯದ ಹೊಲಸು ನೀರನ್ನು ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದೆ. ಇಲ್ಲಿನ ಸಮಸ್ಯೆ ಬಗ್ಗೆ  ಎರಡು ವಾರ್ಡಿನ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿರುವ ಈ ಪ್ರದೇಶದಲ್ಲಿ  ಕೆಲವರು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಾರೆ. ಇನ್ನೂ ಕೆಲ ಮನೆಯಲ್ಲಿ  ಚರಂಡಿ ಸಂಪರ್ಕವಿಲ್ಲದ ಶೌಚಾಲಯ ಬಳಸುವುದರಿಂದ ಶೌಚಾಲಯದ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ತಮಗರಿವಿಲ್ಲದೇ ಇಲ್ಲಿನ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ  ಶೌಚಾಲಯದಲ್ಲಿ ಪುರುಷ ಮತ್ತು ಸ್ತ್ರೀಯರಿಗಾಗಿ ತಲಾ ಐದು ಕೋಣೆಗಳನ್ನು ನಿರ್ಮಿಸಲಾಗಿದೆ.  ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುವ ಪ್ರದೇಶದಲ್ಲಿ ಇದು ಸಾಲುವುದಿಲ್ಲ. ಇನ್ನೂ ಒಳಗಡೆ ಇರುವ ಮತ್ತೊಂದು ಶೌಚಾಲಯವು ನೀರಿಲ್ಲದ ಕಾರಣ ಹಾಳು ಬಿದ್ದಿದೆ. ಹೀಗಾಗಿ  ಬಯಲು ಶೌಚ ಅನಿವಾರ್ಯವಾಗಿದೆ. ಈ ಬಗ್ಗೆ ಹತ್ತಾರು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. 

ಸ್ವಚ್ಛಭಾರತ ಯೋಜನೆಯಲ್ಲಿ ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸುವಂತೆ ಹಣ ಬಿಡುಗಡೆ ಮಾಡಿದರೂ, ಇಲ್ಲಿ ಅದು ಅನುಷ್ಠಾನಕ್ಕೆ ಬಂದಿಲ್ಲ.
ರೋಗಗಳ ತಾಣ: ಶೌಚಾಲಯದ ನೀರು ಹರಿಯುವ  ಕಾಲುವೆ ಶುಚಿಗೊಳಿಸದ ಕಾರಣ ಇಲ್ಲಿನ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸ್ವಚ್ಛತಾ ಆಂದೋಲನದ ಹೆಸರಲ್ಲಿ ಆರೋಗ್ಯ ಇಲಾಖೆ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ ಇಂತಹ ಪ್ರದೇಶಗಳಿಗೆ ಬಂದು ಸ್ವಚ್ಛತೆ ಕಾರ್ಯಕ್ರಮದ ಜೊತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎನ್ನುವುದು ನಿವಾಸಿಗಳ ಆಗ್ರಹ. 

‘ಈ ಬಗ್ಗೆ ಮನವಿ ಸಲ್ಲಿಸಿದರೂ. ಈ ಪ್ರದೇಶಗಳ ಸ್ವಚ್ಛತೆಗೆ ನಗರಸಭೆ ಆಡಳಿತ ಮಂಡಳಿ ಗಮನಹರಿಸಿಲ್ಲ. ಇದು ಆಡಳಿತದ ವೈಫಲ್ಯ’ ಎಂದು  ನಿವೃತ್ತ ಶಿಕ್ಷಕ  ವಿಶ್ವನಾಥ ಕರ್ಲಿ ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.