ADVERTISEMENT

ಛಲವಾದಿ ಮಹಾಸಭಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:55 IST
Last Updated 12 ಫೆಬ್ರುವರಿ 2011, 6:55 IST

ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆ ಹಾಗೂ ಜಿಲ್ಲೆಯ ವಿವಿಧ ಇಲಾಖೆ ಗಳಲ್ಲಿನ ಭ್ರಷ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾ ಯಿಸಿ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ  ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ತಮಟೆ ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಮನವಿ ಸಲ್ಲಿಸಿದರು.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ಕೃಷಿ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜನ ಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಇಲ್ಲಿ ಕೇವಲ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಕೂಡಲೇ ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಯಾದಗಿರಿ ತಾಲ್ಲೂಕಿನ ಬಿಸಿಎಂ ಇಲಾಖೆಯ ವಸತಿ ನಿಲಯಗಳ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆ ಪ್ರಕಾರ ರೂ. 4182 ನಿಗದಿಪಡಿ ಸಲಾಗಿದೆ. ಆದರೆ ತಾಲ್ಲೂಕು ಬಿಸಿಎಂ ಅಧಿಕಾರಿಗಳು ಕಾರ್ಮಿಕರಿಗೆ ಕೇವಲ ರೂ.1500 ನೀಡಿ, ಉಳಿದ ಹಣವನ್ನು ದುರುಪಯೋಗ ಮಾಡಿಕೊಳ್ಳು ತ್ತಿದ್ದಾರೆ. ಅವರನ್ನು ಕೂಡಲೇ ಸೇವೆ ಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯಗಳಿಗೆ ಶನಿವಾರ ಮಧ್ಯಾಹ್ನ ಬೀಗ ಹಾಕಲಾಗುತ್ತಿದ್ದು, ಸೋಮ ವಾರ ಬೆಳಿಗ್ಗೆ ತೆರೆಯಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಬೀದಿ ಪಾಲಾಗುತ್ತಿದ್ದಾರೆ. ರಜೆ ದಿನಗಳಲ್ಲಿ ವಸತಿ ನಿಲಯಗಳು ಬಾಗಿಲು ತೆರೆ ದಿಡಲು ಅಧಿಕಾರಿಗಳಿಗೆ ಸೂಚನೆ ನೀಡ ಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ವಿವಿಧ ಕಾಲೇಜು ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳ ತಡೆ ಹಿಡಿದಿರುವ ಶಿಷ್ಯವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಳು, ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಮಕ್ಕಳನ್ನು ಹೋರಾಟಕ್ಕೆ ಬಳಸಿಕೊಳ್ಳಬೇಕು. ಅವರ ಸಮಸ್ಯೆಗಳಿದ್ದರೆ, ನೇರ ವಾಗಿ ಕಚೇರಿಗೆ ಬಂದು ತಿಳಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಸಾಯಬಣ್ಣ ಬಡಿಗೇರ, ಮಾರುತಿ ಈಟೆ, ಮಲ್ಲಿಕಾರ್ಜುನ ಬೊಮ್ಮನ್, ಮಲ್ಲಿಕಾರ್ಜುನ ಈಟೆ, ವಿದ್ಯಾಸಾಗರ, ಮಲ್ಲಿಕಾರ್ಜುನ ಹತ್ತಿಕುಣಿ, ಅನಿಲ ಸಾಗರ, ಪರಶುರಾಮ ಒಡೆಯರ್, ಸದಾಶಿವ ನಾಟೇಕರ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.