ADVERTISEMENT

ಜಿಲ್ಲೆಯಲ್ಲಿ ಶೀಘ್ರ ಹೈನುಗಾರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 6:20 IST
Last Updated 7 ಜುಲೈ 2012, 6:20 IST

ಯಾದಗಿರಿ:  ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸಲು ವೇದಿಕೆ ಸಿದ್ಧವಾಗಿದ್ದು, ಶೀಘ್ರದಲ್ಲಿಯೇ ಜಿಲ್ಲೆಯಾದ್ಯಂತ ಹೈನೋದ್ಯಮ ಆರಂಭವಾಗಲಿದೆ ಎಂದು ಬೀದರ್-ಗುಲ್ಬರ್ಗ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ತಿಳಿಸಿದರು.

ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಾಲು ಒಕ್ಕೂಟದ ಹಾಲಿನ ಮಳಿಗೆ ಉದ್ಘಾಟನೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.ಈಗಾಗಲೇ ರೂ.3.58 ಕೋಟಿ ಮೊತ್ತದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಲ್ಲಿ ರೂ.1.60 ಕೋಟಿ ಬಿಡುಗಡೆ ಆಗಿದ್ದು, ದೋರನಳ್ಳಿ ಹಾಲು ಶಿಥಲೀಕರಣ ಘಟಕವನ್ನು ಪುನಶ್ಚೇತನ ಮಾಡಲಾಗುವುದು.

ದೋರನಳ್ಳಿಯಲ್ಲಿ 10 ಸಾವಿರ, ಹುಣಸಗಿಯಲ್ಲಿ 5 ಸಾವಿರ ಹಾಗೂ ಗುರುಮಠಕಲ್‌ನಲ್ಲಿ 5 ಸಾವಿರ ಲೀಟರ್ ಹಾಲು ಶೇಖರಣ ಮಾಡಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ವಿಕಾಸ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸುವ ಕುರಿತು ಸಮೀಕ್ಷೆ ಮಾಡಲಾಗಿದೆ. ಡಿಸಿಸಿ ಬ್ಯಾಂಕ್‌ನಿಂದ ನಬಾರ್ಡ್ ಯೋಜನೆಯಡಿ ರೈತರಿಗೆ ಸಾಲ ಒದಗಿಸಲಾಗುವುದು.

 ಕಾಮಧೇನು ಯೋಜನೆಯನ್ನು ಜಾರಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸಲಾಗುವುದು ಎಂದು ಹೇಳಿದರು.ಸಹಾಯಕ ಆಯುಕ್ತ ಬಿ.ಪಿ. ವಿಜಯ, ಹಾಲಿನ ಮಳಿಗೆಯನ್ನು ಉದ್ಘಾಟಿಸಿದರು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬುಕ್ಕಾ, ಒಕ್ಕೂಟ ಮಾಜಿ ಅಧ್ಯಕ್ಷ ಸಿದ್ಧನಗೌಡ ಕಾಡಂನೋರ್, ಒಕ್ಕೂಟ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.