ಶಹಾಪುರ: ಭೀಮರಾಯನಗುಡಿ ಬಾಪುಗೌಡ ಪುತ್ಥಳಿಯ ಹಿಂದುಗಡೆ ಐದು ಗುಂಟೆಯ ಮಾಲಿಕ ಕಬ್ಜಾದಾರನಿದ್ದು ಟಿನ್‌ಶೆಡ್ ಹಾಕಿಕೊಂಡು ಐದು ದಶಕಗಳಿಂದಲೂ ಜೀವಿಸುತ್ತಿರುವಾಗ ಕೂಡಾ ಕಂದಾಯ ಇಲಾಖೆಯ ಅಧಿಕಾರಿ ಶನಿವಾರ ರಾತ್ರಿ ಏಕಾಏಕಿ ಬುಲ್ಡೋಜರ್ ಮೂಲಕ ಟಿನ್‌ಶೆಡ್ ನೆಲಸಮ ಮಾಡಿದ್ದಾರೆ.
ಜೀವಿಸುವ ಹಕ್ಕನ್ನು ಕಸಿದುಕೊಂಡಿದ್ದಾರೆ. ಅಧಿಕಾರಿಯ ದೌರ್ಜನ್ಯದ ಪರಮಾವಧಿಯಾಗಿದೆ ಎಂದು ತೊಂದರೆ ಅನುಭವಿಸುತ್ತಿರುವ ಸಾಹೇಬಗೌಡ ಹಳ್ಮಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮರಾಯನಗುಡಿ ಕ್ಯಾಂಪಸ್ ಸುತ್ತಲೂ ಕಂಪೌಂಡ್ ಗೋಡೆ ನಿರ್ಮಿಸಲಾಗುತ್ತಿದೆ. ಅಂದಿನ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಭೇಟಿಯಾಗಿ ನಮ್ಮ ಜಾಗದ ಸೂಕ್ತ ದಾಖಲೆಗಳನ್ನು ನೀಡಿ ಅದರ ಮಾಲಿಕತ್ವ ಹಾಗೂ ಕಬ್ಜೆಯ ಬಗ್ಗೆ ಮನದಟ್ಟು ಮಾಡಿದಾಗ ಐದು ಗುಂಟೆ ಜಾಗವನ್ನು ಬಿಟ್ಟು ಕಂಪೌಂಡ್ ನಿರ್ಮಿಸಲು ಮೌಖಿಕವಾಗಿ ಸೂಚಿಸಿದ್ದರು.
ಕೆಲ ದಿನಗಳ ಹಿಂದೆ ಕೃಷ್ಣಾ ಕಾಡಾದ ಆಡಳಿತಾಧಿಕಾರಿಯವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಜಾಗವನ್ನು ತೆರವುಗೊಳಿಸಲು ಸೂಚಿಸಿದರು. ಅದರಂತೆ ಜಿಲ್ಲಾಧಿಕಾರಿ ತಿಳಿಸಿದಾಗ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಲು ಹತ್ತಿದಾಗ ತುರ್ತು ನೋಟಸ್ ಜಾರಿ ಮಾಡಲಾಗಿತ್ತು. ಇಂದಿಗೂ ಕೋರ್ಟ್‌ನಲ್ಲಿ ಪ್ರಕರಣ ಇತ್ಯಾರ್ಥವಾಗದೆ ಉಳಿದುಕೊಂಡಿದೆ ಎನ್ನುತ್ತಾರೆ ಸಾಹೇಬಗೌಡ.
ತಹಸೀಲ್ದಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಾನೂನು ರೀತಿ ನಿಯಮಗಳನ್ನು ಪಾಲಿಸದೆ ಏಕಾಏಕಿ ಟಿನ್‌ಶೆಟ್ ಕೆಡವಿ ನಮ್ಮ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಜೀವಿಸುವ ಹಕ್ಕು ಮೊಟಗುಗೊಳಿಸಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ತಹಸೀಲ್ದಾರ ಹೇಳಿಕೆ: ಕಾನೂನು ಪ್ರಕಾರ ಭೂಸ್ವಾಧೀನ ಪಡಿಸಿಕೊಂಡಿದೆ. ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ವಾಸಿಸುತ್ತಿದ್ದರು.
ಕಂಪೌಂಡ ನಿರ್ಮಿಸುವ ಸಲುವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಜಾಗವನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆಯಿಲ್ಲ. ಜಿಲ್ಲಾಧಿಕಾರಿಯವರ ನಿರ್ದೇಶನ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.
ಮಾನವೀಯತೆಯ ಮೇಲೆ ಭೀಮರಾಯನಗುಡಿ ಅಧಿಸೂಚಿತ ಪ್ರದೇಶದಲ್ಲಿ ಎರಡು ಮನೆಗಳನ್ನು ನೀಡಲಾಗುವುದೆಂದು ಕುಟುಂಬದ ಸದಸ್ಯರಿಗೆ ತಿಳಿಸಲಾಗಿದೆ. ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವುದು ಸರಿಯಲ್ಲವೆಂದು ತಹಸೀಲ್ದಾರ ಎಂ.ರಾಚಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.