ಯಾದಗಿರಿ: ಜ್ಞಾನದ ಹಸಿವನ್ನು ನೀಗಿಸುವ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶವನ್ನು ನೀಡುವ ಮೂಲಕ ಅತಿ ಹೆಚ್ಚು ಪುಸ್ತಕದ ಜೊತೆ ಕಂಪ್ಯೂಟರ್ ಮತ್ತು ಇಂಟರನೆಟ್ ಸೌಲಭ್ಯವನ್ನು ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದಾಗಿ ನಗರದ ನೂತನ ಗ್ರಂಥಾಲಯವು ಓದುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ನಗರದ ಸಿ.ಎಂ ಪಾಟೀಲ್ ಆಸ್ಪತ್ರೆ ಎದುರು ಕರ್ನಾಟಕ ಗೃಹ ಮಂಡಳಿಯ ವತಿಯಿಂದ ₹ 50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ಬೆಳಿಗ್ಗೆ 8.30ಕ್ಕೆ ಆರಂಭವಾಗಿ ಸಂಜೆ 7.45ರವರೆಗೂ ಸಾರ್ವಜನಿಕರ ಸೇವೆಯಲ್ಲಿ ಈ ಗ್ರಂಥಾಲಯ ಲಭ್ಯವಿರಲಿದೆ. ವಿದ್ಯಾರ್ಥಿಗಳಿಗಾಗಿ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಇಲ್ಲಿವೆ. ಇದರ ಜೊತೆ ಸಾಮಾನ್ಯ ಓದುಗರಿಗಾಗಿ ಸಾಹಿತ್ಯಿಕ, ಜನಪದ, ವಚನ ಸಾಹಿತ್ಯ ಸೇರಿದಂತೆ ಸಾವಿರಾರು ಪುಸ್ತಕಗಳಿದ್ದು, ಇಲ್ಲಿ ನಿತ್ಯ ನೂರಾರು ಜನ ಓದುಗರು ತಮ್ಮ ಜ್ಞಾನಾರ್ಜನೆಗೆ ಬರುತ್ತಿದ್ದಾರೆ.
ಗ್ರಂಥಾಲಯದಲ್ಲಿ ಮಹಿಳೆ ಮತ್ತು ಪುರುಷರಿಗಾಗಿ ಓದಲು ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ. ಇದರ ಜತೆಗೆ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಓದುಗರಿಗೆ ಯಾವುದೇ ತೊಂದರೆಯಿಲ್ಲದೆ ಅಧ್ಯಯನ ಮಾಡಬಹುದಾಗಿದೆ.
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯದಿಂದ ಸಾಕಷ್ಟು ಸಹಕಾರಿಯಾಗಿದೆ. ಎಲ್ಲ ಪುಸ್ತಕಗಳು ಇಲ್ಲಿ ಸಿಗುವುದರ ಜೊತೆ ಬೆಳಿಗ್ಗೆಯಿಂದ ಸಂಜೆಯವರೆಗೂ ಓದಲು ಅವಕಾಶ ಇರುವುದರಿಂದ ಬಡವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಹತ್ತಿಕುಣಿ ಗ್ರಾಮದ ವಿದ್ಯಾರ್ಥಿ ರಾಕೇಶ ಪೂಜಾರಿ.
ಹೈಟೆಕ್ ಸ್ಪರ್ಶ: ಆಧುನಿಕ ಯುಗದಲ್ಲಿ ಎಲ್ಲವೂ ಕಂಪ್ಯೂಟರ್ ಇಂಟರ್‌ನೆಟ್ ಮೂಲಕವೇ ನಡೆಯುತ್ತದೆ. ಹೀಗಾಗಿ ಈ ಗ್ರಂಥಾಲಯಕ್ಕೆ ಹೆಚ್‌ಕೆ ಆರ್‌ಡಿಬಿ ವತಿಯಿಂದ 6 ಕಂಪ್ಯೂಟರ್ ಮತ್ತು ಇಂಟರ್‌ನೆಟ್ ವ್ಯವಸ್ಥೆಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಗ್ರಂಥಾಲಯದಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗುವುದು ಎಂದು ಗ್ರಂಥಾಲಯ ಸಹಾಯಕ ಪಾಟೀಲ್ ಬಸವನ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣವನ್ನು ಮತ್ತು ಓದುಗರಿಗೆ ಬೇಕಾದ ಎಲ್ಲ ಸೌಕರ್ಯವನ್ನು ಇಲ್ಲಿ ಒದಗಿಸಲಾಗಿದೆ.
ಅದರಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ. ಇದರ ಸದ್ಭಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.
ಹಳೇ ಗ್ರಂಥಾಲಯ ದುರಸ್ತಿ ಮಾಡಿ: ನಗರದ ಅಂಬೇಡ್ಕರ್ ವೃತ್ತದ ಬಳಿ ಇರುವ ಹಳೇ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡ ಯಾವಾಗ ಕುಸಿಯುತ್ತದೆ ಎನ್ನುವ ಭೀತಿಯಲ್ಲಿ ಓದುಗರು ಗ್ರಂಥಾಲಯಕ್ಕೆ ಬರುವಂತಾಗಿದೆ. ನೂತನ ಗ್ರಂಥಾಲಯದಂತೆ ಹಳೇ ಗ್ರಂಥಾಲಯಕ್ಕೂ ಶೌಚಾಲಯ ಮತ್ತು ಕುಡಿಯುವ ನೀರು ಸೇರಿದಂತೆ ಇತರ ವ್ಯವಸ್ಥೆ ಮಾಡಿದರೆ, ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಿದ್ದು ಹತ್ತಿಕುಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.