ADVERTISEMENT

ತಳ್ಳು ಬಂಡಿ ವ್ಯಾಪಾರಿಗಳ ಸೇವಾ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:20 IST
Last Updated 2 ಜನವರಿ 2012, 8:20 IST

ಶಹಾಪುರ: ಶ್ರಮಜೀವಿಗಳಿಗೆ  ಬದುಕು ಒಂದು ಹೋರಾಟದ ಕತೆಯಾಗಿದೆ. ಬೆಳಕಾದರೆ ಸಾಕು ಶ್ರಮವಹಿಸಿ ದುಡಿಯುವ ಕೆಲಸಕ್ಕೆ ಮೈಯೊಡ್ಡಬೇಕು, ಅಸಂಘಟಿತವಾಗಿರುವ ಬೀದಿಬದಿ ಹಾಗೂ ತಳ್ಳು ಬಂಡಿ ವ್ಯಾಪಾರಿಗಳು ಸಂಘಟಿತರಾಗಿ ನ್ಯಾಯಬದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು  ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಹೇಳಿದರು.

ಪಟ್ಟಣದ ಜಿಹ್ವೇಶ್ವರ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಬೀದಿಬದಿ ಹಾಗೂ ತಳ್ಳು ಬಂಡಿ ವ್ಯಾಪಾರಿಗಳ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ರೈತ ಹಾಗೂ ಶ್ರಮ ಜೀವಿಗಳಿಗೆ ಮಾತ್ರ ಜೀವನದ ಯಾವುದೇ ಭದ್ರತೆಯಿಲ್ಲ. ಸರ್ಕಾರವು ಸಂಘಟಿತ ವ್ಯಾಪಾರಿಗಳಿಗೆ ಬ್ಯಾಂಕಿನ ಮೂಲಕ ಸಾಲಸೌಲಭ್ಯವನ್ನು ನೀಡಿದರೆ ಒಂದಿಷ್ಟು ಸಹಾಯವಾಗುವುದು.

ಅನಾವಶ್ಯಕವಾಗಿ ಪುರಸಭೆ ಹಾಗೂ ಪೊಲೀಸರು ಶ್ರಮಜೀವಿಗಳಿಗೆ ತೊಂದರೆ ನೀಡಬಾರದು. ತಳ್ಳು ಬಂಡಿ ವ್ಯಾಪಾರಿ ಒಬ್ಬರ ದುಡಿಮೆಯಿಂದಲೇ ಇಡೀ ಕುಟುಂಬ ನಿರ್ವಹಣೆ ಮಾಡುತ್ತಾರೆ. ನೆರವಿನ ಅಭಯವನ್ನು ನಾವೆಲ್ಲರು ನೀಡಬೇಕಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಶರಣಪ್ಪ ಸಲಾದಪೂರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ಮಡ್ಡಿ ಹೇಳಿದರು.

ಬೀದಿ ವ್ಯಾಪಾರಿಗಳಿಗೆ ಪುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಟೋಕನ್ ನೀಡಿ ಬೀದಿ ವ್ಯಾಪಾರಿಗಳ ನೀತಿ ಸಂಹಿತೆ ಜಾರಿ ಆಗಲಿ. ಶ್ರಮ ಜೀವಿಗಳಿಗೆ ಪುರಸಭೆಯಿಂದ ಕರ, ತೆರಿಗೆ  ನಿಗದಿ ಮಾಡಿ ಟೋಕನ್ ವ್ಯವಸ್ಥೆ ಮಾಡಿ ವ್ಯಾಪಾರಕ್ಕೆ ಅನುಕೂಲ ಮಾಡಬೇಕು. ಸ್ಲಂ, ಆಶ್ರಯ ಯೋಜನೆ ಅಡಿಯಲ್ಲಿ ಸೂರು ನೀಡಿ. ದೇವರಾಜ ಅರಸು ನಿಗಮದ ವತಿಯಿಂದ ಸುಲಭವಾಗಿ ಸಾಲ ಸೌಕರ್ಯ ನೀಡಬೇಕೆಂದು ಸಂಘದ ಅಧ್ಯಕ್ಷರಾದ ಅಮೃತ ಹೂಗಾರ ಹಾಗೂ ಮಹಿಳಾ ಅಧ್ಯಕ್ಷೆ ಭೀಮಬಾಯಿ ಹೆಮ್ಮಡಗಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬಿಜೆಪಿಯ ಹಿರಿಯ ಮುಖಂಡ ಡಾ.ಮಲ್ಲಣ್ಣಗೌಡ ಉಕ್ಕನಾಳ, ರಕ್ಷಣಾ ವೇದಿಕೆಯ ಮುಖಂಡ ಶರಣು ಗದ್ದುಗೆ, ನೀಲಖಂಠ ಬಡಿಗೇರ, ರಾಜು ಹೊಸೂರ, ನಾಗರಾಜ ಹೆಮ್ಮಡಗಿ, ಭೀಮರಾಯ ಹೊಸೂರ, ಶಾಂತರಡ್ಡಿ ಬೈಚಬಾಳ, ಬಸವರಾಜ ಮುನಮುಟಗಿ, ಅಸ್ರತ ಅಲಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.