ADVERTISEMENT

ತೆಂಗಳಿ ಗ್ರಾಮದಲ್ಲಿ ಡೆಂಗೆ ಭೀತಿ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:05 IST
Last Updated 22 ಅಕ್ಟೋಬರ್ 2012, 6:05 IST

ಕಾಳಗಿ:  ವಲಯದ ತೆಂಗಳಿ ಗ್ರಾಮದಲ್ಲಿ ಡೆಂಗೆ ಜ್ವರದ ಭೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದೊಂದು ವಾರದಿಂದ ಇದೇ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹೀರಾಬಾಯಿ ಶಿವಶರಣಪ್ಪ ಪಾಟೀಲ ಎಂಬುವರು ಅನಾರೋಗ್ಯದಿಂದ ಬಳಲುತ್ತಿರುವಾಗ ಡೆಂಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದೆ ಇದಕ್ಕೆ ಕಾರಣವಾಗಿದೆ. ಹೀರಾಬಾಯಿ ಇವರನ್ನು ಚಿಕಿತ್ಸೆಗಾಗಿ ಗುಲ್ಬರ್ಗ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಗಳು  ತಿಳಿಸಿವೆ.

ಸದರಿ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಮನೆಮಾಡಿದೆ. ಮಾಡಬೂಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶರಣಬಸಪ್ಪ ಕೋಲಾರ ನೇತೃತ್ವದ ಹಿರಿಯ ಆರೋಗ್ಯ ಸಹಾಯಕ ಮಹ್ಮದ ಮಕ್ಬೂಲ್, ಕಿರಿಯ ಸಹಾಯಕರಾದ ಶಿವಶರಣಪ್ಪ ಮಾಕಪ್ಪನೋರ, ನಾಗೇಶ್ವರರಾವ ಸಿಂಗಶೆಟ್ಟಿ, ಹಣಮಂತ ಕೋಡ್ಲಿ, ಹಣಮಂತ ಜಾಧವ ಮತ್ತು ನಿಂಬಾಜಿ ಜಾಧವ ಇತರರನ್ನೊಳಗೊಂಡ ಆರೋಗ್ಯ  ತಪಾಸಣೆಯ  ತಂಡ ಗ್ರಾಮದಲ್ಲಿ ಬೀಡುಬಿಟ್ಟು ತನ್ನ ಕಾರ್ಯ ಭರದಿಂದ ಸಾಗಿಸಿದೆ.

ಹಾಗೆಯೆ ಕಿರಿಯ ಆರೋಗ್ಯ ಸಹಾಯಕ ಅಥವಾ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಒಳಗೊಂಡಿರುವ ಮೂರು ತಂಡ ಮೊದಲ ದಿನ ಶನಿವಾರ ಮನೆ ಮನೆಗೆ ಭೇಟಿ ಕೊಟ್ಟರೆ, ಭಾನುವಾರ ಆರು ತಂಡಗಳು ರಚನೆಗೊಂಡು ಮನೆಗಳಲ್ಲಿನ ನೀರಿನ ತೊಟ್ಟೆ, ತೆರೆದಿಟ್ಟ ನೀರಲ್ಲಿ ಹುಟ್ಟಿಕೊಳ್ಳುವ ಲಾರ್ವ, ಸಣ್ಣಪುಟ್ಟ ಕಾಯಿಲೆ ಅಥವಾ ಜ್ವರದಿಂದ ಬಳಲುವವರನ್ನು ಪತ್ತೆಹಚ್ಚಿ ರಕ್ತ ಪರೀಕ್ಷೆ ಕೈಗೊಳ್ಳವಲ್ಲಿ  ನಿರತವಾಗಿವೆ.

ಕುಡಿಯುವ ನೀರು, ಮನೆಯ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನತೆಯಲ್ಲಿ ಮನವಿ ಮಾಡುತ್ತ, ಡೆಂಗೆ ಜ್ವರದ ಬಗ್ಗೆ ಅರಿವು ಮೂಡಿಸುತ್ತಿರುವ ಈ ತಂಡಗಳ ಕೆಲಸವನ್ನು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ್ದ “ಪ್ರಜಾವಾಣಿ~ಗೆ ಕಂಡುಬಂದಿದೆ. ಜತೆಗೆ ಗ್ರಾಮಾಡಳಿತವು ಚರಂಡಿ ಸ್ವಚ್ಛತೆಗೊಳಿಸುವ ಕಾರ್ಯ ಕೈಗೊಂಡಿದನ್ನು    ಕಾಣಿಸಿದೆ.

ಆರೋಪ: ಊರಲ್ಲಿ ಡೆಂಗೆ ಜ್ವರದ ಭೀತಿ ಉಂಟಾಗಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿಯವರು “ಫಾಗಿಂಗ್~ ಕಾರ್ಯ ಕೈಗೆತ್ತಿಕೊಂಡಿಲ್ಲ. ಚರಂಡಿ ಸ್ವಚ್ಛತೆ ಕೇವಲ ನೋಡುವುದಕ್ಕಷ್ಟೇ ಮಾತ್ರ ಮಾಡುತ್ತಿದ್ದಾರೆ. ಊರಿನ ಎಲ್ಲೆಂದರಲ್ಲಿ ಕೊಳಚೆ ನೀರು ಹರಿದು, ಕಸಕಡ್ಡಿ ರಸ್ತೆಯ ಮೇಲೆ ಬಿದ್ದು ಜನತೆಗೆ ತೊಂದರೆಯಾಗುತ್ತಿದ್ದರೂ ಜನನಾಯಕರು ಮಾತ್ರ ಮೌನವಹಿಸಿದ್ದಾರೆ ಎಂದು ಯುವಕ ಪ್ರಶಾಂತ ಕಡಲೆ, ದಲಿತ ಕಲಾವಿದ ಜಗದೀಶ ಬುಟ್ಟಿ, ಸಂತೋಷ ಮಹಾಗಾಂವ ಆಪಾದಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.