ADVERTISEMENT

ದೀಪಾವಳಿ ವೈಭವಕ್ಕೆ ಅತಿವೃಷ್ಟಿಯ ಪೆಟ್ಟು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 10:02 IST
Last Updated 20 ಅಕ್ಟೋಬರ್ 2017, 10:02 IST

ಯಾದಗಿರಿ: ದಸರಾ ಸಂಭ್ರಮದ ಬೆನ್ನಿಗೆ ಬಂದಿರುವ ಬೆಳಕಿನ ಹಬ್ಬಕ್ಕೆ ಅತಿವೃಷ್ಟಿಯ ಹೊಡೆತ ಬಿದ್ದುದ್ದರಿಂದ ಗುರುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಅಷ್ಟೊಂದು ಜನ ಸಂದಣಿ ಇರಲಿಲ್ಲ. ಸದಾ ಗ್ರಾಮೀಣ ಜನರಿಂದ ತುಂಬಿರುತ್ತಿದ್ದ ನಗರದ ಪ್ರಮುಖ ಆಕರ್ಷಣೀಯ ಕೇಂದ್ರ ಗಾಂಧಿವೃತ್ತದಲ್ಲೂ ಜನರು ವಿರಳವಾಗಿದ್ದರು.ಬುಧವಾರ ನರಕಚತು
ರ್ದಶಿ ಆಚರಿಸಿದ ನಾಗರಿಕರು ಮರುದಿನ ದರ ಏರಿಕೆ ಮಧ್ಯೆಯೂ ಮಹಾಲಕ್ಷ್ಮಿ ಪೂಜೆಗಷ್ಟೇ ಬೇಕಾಗುವ ಸಾಮಗ್ರಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. 

ಮೈಲಾಪುರ ಅಗಸಿ– ಗಾಂಧಿವೃತ್ತ ಸಂಪರ್ಕ ರಸ್ತೆಯಲ್ಲಿ ಹತ್ತಾರು ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳ ತರಕಾರಿ ಮಾರಾಟ ಕೂಡ ಮಂಕಾಗಿತ್ತು. ದೀಪಾವಳಿಗೆ ಅಗತ್ಯ ವಸ್ತುಗಳಾದ ಬೇಳೆ, ಬೆಲ್ಲ, ಸಕ್ಕರೆಯಂತಹ ಪದಾರ್ಥಗಳ ಬೆಲೆಯೂ ಗಗನಮುಖಿಯಾಗಿತ್ತು. ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದರಿಂದ ರೈತಾಪಿ ವರ್ಗದ ಜನರು ಹಬ್ಬದ
ಅಡುಗೆ ಸಾಮಗ್ರಿ ಖರೀದಿಸಲು ಸ್ವಲ್ಪ ಹಿಂದೇಟು ಹಾಕುತ್ತಿದ್ದ ದೃಶ್ಯ ಕಾಣಿಸಿತು. ದಸರಾ ಹಬ್ಬಕ್ಕೆ ಸ್ಥಿರವಾಗಿದ್ದ ಅಗತ್ಯ ವಸ್ತುಗಳ ಬೆಲೆ ದೀಪಾವಳಿಗೆ ಇರಲಿಲ್ಲ. ಕೇವಲ ಎರಡು ವಾರಗಳಲ್ಲಿ ಅಗತ್ಯ ವಸ್ತುಗಳ ಬೆಳೆ ಗಗನಕ್ಕೇರಿದ್ದರ ಪರಿಣಾಮ ಬೆಳಕಿನ ಹಬ್ಬದ ಸಂಭ್ರಮ ಇಮ್ಮಡಿಸಲಿಲ್ಲ.

ಹಸಿಮಣಸಿನ ಕಾಯಿ ಕೆ.ಜಿ.ಗೆ ₹80, ಬದನೆ ₹50, ಟೊಮೆಟೊ ₹50, ಈರುಳ್ಳಿ ಕೆ.ಜಿ.ಗೆ ₹40, ಬೇಳೆ ಕೆ.ಜಿ.ಗೆ ₹90, ಬೆಲ್ಲ ಕೆ.ಜಿ.ಗೆ ₹50 ಹೀಗೆ ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿದ್ದವು. ಕುಂಬಳ, ಕಬ್ಬು ಮಾರುಕಟ್ಟೆಯಲ್ಲಿ ಅಷ್ಟಾಗಿ ಕಾಣಿಸಲಿಲ್ಲ. ದುಪ್ಪಟ್ಟು ದರ, ಕುಸಿದ ವ್ಯಾಪಾದರಿಂದಾಗಿ ವ್ಯಾಪಾರಿಗಳು ಮಂಕಾಗಿದ್ದರು.

ADVERTISEMENT

ಮಲ್ಲಿಗೆ ಮೊಳಕ್ಕೆ ₹50 ದರ: ಒಂದು ಮೊಳ ಮಲ್ಲಿಗೆ, ಸೇವಂತಿಗೆ ಹೂವಿಗೆ ಮಾರುಕಟ್ಟೆಯಲ್ಲಿ ₹50 ಇತ್ತು. ಒಂದು ಮಾರು ಹೂವಿಗೆ ₹200 ದರ ನೀಡಬೇಕಿತ್ತು. ಚೆಂಡು ಹೂ
ಒಂದು ಕೆಜಿಗೆ ₹50 ದರ ಇತ್ತು. ಹೀಗೆ ಹೂವಿನ ದರವೂ ಗಗನಮುಖಿಯಾದ್ದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಗ್ರಾಹಕರ ಕೊರತೆ ಅನುಭವಿಸಿದರು.

ಪಟಾಕಿ ಖರೀದಿಯೂ ಕಡಿಮೆ: ‘ದಸರಾ ಮತ್ತು ದೀಪಾವಳಿ ಆಚರಣೆಗಳ ಮಧ್ಯೆ ಕನಿಷ್ಠ ಒಂದು ತಿಂಳಾದರೂ ಅಂತರ ಇರಬೇಕು. ಎರಡು ವಾರಕ್ಕೊಮ್ಮೆ ಹಬ್ಬ ಆಚರಿಸಲು ಜನರ ಬಳಿ ಹಣ ಇರಬೇಕಲ್ಲ. ಅತಿವೃಷ್ಟಿ ರೈತರನ್ನು ಹೊಲದಲ್ಲಿ ಕಟ್ಟಿ ಹಾಕಿದೆ. ಹಬ್ಬಗಳನ್ನು ಆಚರಿಸಿ ಸಂಭ್ರಮಿಸುವುದು, ಖರ್ಚು ಮಾಡುವುದು ರೈತಾಪಿ ಜನರು ಮಾತ್ರ. ದಸರಾ ಜತೆಗೆ ರೈತರನ್ನು ಅತಿವೃಷ್ಟಿ ಕಾಡಿದ್ದರಿಂದ ದೀಪಾವಳಿ ಸಂಭ್ರಮಕ್ಕೆ ಕಳೆ ಇಲ್ಲ’ ಎಂದು ಪಟಾಕಿ ಅಂಗಡಿ ವ್ಯಾಪಾರಿ ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.

‘ಪ್ರತಿವರ್ಷ ದೀಪಾವಳಿ ಕನಿಷ್ಠ ₹10 ಲಕ್ಷದಷ್ಟು ವ್ಯಾಪಾರ ಮಾಡುತ್ತಿದ್ದೆ. ಆದರೆ, ಈ ವರ್ಷ ಕನಿಷ್ಠ ₹3 ಲಕ್ಷವೂ ವ್ಯಾಪಾರ ಆಗಿಲ್ಲ. ಹಳ್ಳಿ ಜನರು ಮಾರುಕಟ್ಟೆಯತ್ತ ಹೆಜ್ಜೆ ಹಾಕಿದರೆ ಮಾತ್ರ ನಮ್ಮ ವ್ಯಾಪಾರ ಜೋರು’ ಎಂದು ಪಟಾಕಿ ವ್ಯಾಪಾರಿ ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.