ADVERTISEMENT

ದೇವದಾಸಿ ಪದ್ಧತಿ ಇನ್ನೂ ಜೀವಂತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 9:45 IST
Last Updated 8 ಅಕ್ಟೋಬರ್ 2012, 9:45 IST

ಯಾದಗಿರಿ: ದೇವದಾಸಿಯಂತಹ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿರುವುದು ಕಳವಳಕಾರಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜೀವಕುಮಾರ ಹಂಚಾಟೆ ಹೇಳಿದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನವರ್ಸತಿ ಯೋಜನೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಗ್ರೇಟ್ ಫೌಂಡೇಶನ್‌ಗಳ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ದೇವದಾಸಿ ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೂಢನಂಬಿಕೆಗಳಿಂದಾಗಿ ಕೆಲವೆಡೆ ಇನ್ನೂ ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ದೂಡಲಾಗುತ್ತಿದೆ. ಇದರಿಂದಾಗಿ ಈ ಪದ್ಧತಿ ಇನ್ನೂ ಉಳಿಯುವಂತಾಗಿದೆ ಎಂದ ಅವರು, ದೇವದಾಸಿ ಪದ್ಧತಿ ನಿಷೇಧ ಕಾಯಿಗೆ ಜಾರಿಗೆ ಬಂದರೂ ಇಲ್ಲಿಯವರೆಗೆ ದೇವದಾಸಿ ಪದ್ಧತಿ ಕೇವಲ ಶೇ.70ರಷ್ಟು ಮಾತ್ರ ನಿರ್ಮೂಲನೆಯಾಗಿದೆ ಎಂದು ತಿಳಿಸಿದರು.

ದೇಶದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ. ಆದರೆ ಅವರನ್ನು ದೇವದಾಸಿ ಪದ್ಧತಿಗೆ ದೂಡುತ್ತಿರುವುದು ಆಘಾತಕಾರಿ ಬೆಳವಣಿಗೆ.

ದೇಶದಲ್ಲಿ ನಡೆಯುವ ಧರ್ಮ ಬೋಧನೆ ಯಾವ ರಾಷ್ಟ್ರದಲ್ಲೂ ನಡೆಯುವುದಿಲ್ಲ. ಇದನ್ನು ಎಲ್ಲರೂ ಮನಗಾಣಬೇಕಿದೆ. ಆದರೂ ದೇವದಾಸಿ ಪದ್ಧತಿಯಂತಹ ಅನಿಷ್ಠಗಳು ಇನ್ನೂ ಜೀವಂತವಾಗಿವೆ. ಕಾನೂನಿನ ಮೂಲಕ ಇಂತಹ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಕಾನೂನು ಅಜ್ಞಾನವು ಶೋಷಣೆಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಕಾನೂನು ಅರ್ಥ ಮಾಡಿಕೊಂಡು  ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಯುವ ಶಕ್ತಿ ಹಾಗೂ ಕಾನೂನಿನ  ಮೂಲಕ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಸುಲಭವಾಗಲಿದೆ ಎಂದರು.

ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಎಸ್.ಎನ್.ಹಿರೇಮಠ, ದೇವದಾಸಿಯರ ಪುನರ್ವಸತಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಾಸಿಕ ವೇತನ, ಮನೆ ನಿರ್ಮಾಣಕ್ಕೆ ರೂ. 40ಸಾವಿರ ಧನಸಹಾಯ ಮತ್ತು ದೇವದಾಸಿ ಸಂಘಗಳಿಗೆ ರೂ. 1 ಲಕ್ಷ ಧನ ಸಹಾಯ ನೀಡಲಾಗುತ್ತಿದೆ. ಇಂತಹ ಹಲವು ಯೋಜನೆಗಳನ್ನು ದೇವದಾಸಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕೆಲವರು ತಮ್ಮ ಅನುಕೂಲಕ್ಕಾಗಿ ದೇವದಾಸಿ ಪದ್ಧತಿ ಜಾರಿಗೆ ತರುತ್ತಿದ್ದು, ಇಂತಹ ಅನಿಷ್ಠ ಪದ್ಧತಿಯ ನಿರ್ಮೂಲನೆ ಮಾಡಬೇಕಾಗಿದೆ. ದೇವದಾಸಿ ಪದ್ಧತಿ ಜಾರಿಯಲ್ಲಿರುವುದು ಕಂಡು ಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ವಕೀಲರಾದ ದತ್ತುರಾವ ಕಾಂಬ್ಳೇಕರ, ಸಾವಿತ್ರಿ ಪಾಟೀಲ, ಮಹಿಳಾ ಹಕ್ಕುಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗರ್ಟ್ರೂಜ್ ವೇಗಾಸ್, ಪ್ರಾಂಶುಪಾಲ ಎನ್. ನಾಗರಾಜರಾವ, ಉಪನ್ಯಾಸಕ ಸಿದ್ಧರಾಜರಡ್ಡಿ ಮುಂತಾದವರು ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.