ADVERTISEMENT

`ಧರ್ಮ ಮನಸ್ಸುಗಳನ್ನು ಬೆಸೆಯಲಿ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 10:04 IST
Last Updated 24 ಜೂನ್ 2013, 10:04 IST

ಶಹಾಪುರ:  ಇತಿಹಾಸ ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾವೈಕ್ಯತೆಯ ಕೇಂದ್ರವಾಗಿರುವ ಚಂದಾಹುಸೇನಿ ದರ್ಗಾವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಅಳಿವಿನ ಅಂಚಿನಲ್ಲಿರುವ ಸಮಾಧಿಗಳಿಗೆ ಪುನರುಸ್ಥಾನ ನೀಡಲಾಗುವುದು ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಗುರು ಪಾಟೀಲ್ ಸಿರವಾಳ ಹೇಳಿದರು.

ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಭಾನುವಾರ ಸಯ್ಯದ್ ಚಂದಾಹುಸೇನಿ ದರ್ಗಾದ 576ನೇ ಉರುಸ್ (ಪುಣ್ಯಸ್ಮರಣೆ) ಅಂಗವಾಗಿ ಸರ್ವಧರ್ಮ ಸಮ್ಮೇಳನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಾಮರಸ್ಯ ಹಾಗೂ ಸಹಬಾಳ್ವೆಗೆ ಹೊಸದೊಂದು ನಾಂದಿ ಹಾಡಿದ್ದ  ಚಂದಾಹುಸೇನಿಯವರ ಜಾತ್ಯಾತೀತ ತತ್ವಗಳನ್ನು ನಾವೆಲ್ಲರು   ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪ್ರೊ.ಡಾ.ದಿಲ್‌ಶಾದ್, ಅಣ್ಣ ಬಸವಣ್ಣ, ಡಾ.ಅಂಬೇಡ್ಕರ, ಬುದ್ಧನಂತೆ ಸೂಫಿ  ತತ್ವಗಳು ಹೊಸ ಬೆಳಕು ಚೆಲ್ಲುತ್ತವೆ.
“ಇತಿಹಾಸದ ಬೇರುಗಳನ್ನು ಕೆದಕಿ ಗಮನಿಸಿದಾಗ ರಾಜರು ಸಂತರಿಗೆ ಆಶ್ರಯ ನೀಡುತ್ತಿದ್ದರು. ಆದರೆ ರಾಜರಿಗೆ ಆಶ್ರಯ ನೀಡಿದ್ದು ಮಾತ್ರ ಚಂದಾಹುಸೇನಿಯವರಾಗಿದ್ದಾರೆ. ಜಾತಿ ಮತಗಳನ್ನು ದಾಟಿ ಸಾಗಬೇಕಾಗಿದೆ. ಯಾವ ಧರ್ಮದಲ್ಲಿ ದ್ವೇಷ, ಭಯೋತ್ಪಾದನೆಗೆ ಅವಕಾಶವಿಲ್ಲ.
ಧರ್ಮವು  ಮನಸ್ಸುಗಳನ್ನು ಬೆಸೆದು ಪ್ರೇಮದ ಹಂದರವಾಗಬೇಕು. ನಮ್ಮ ನೆಲವನ್ನು ನಾವೆಲ್ಲರೂ ಗೌರವಿಸಿ ಪ್ರೀತಿಸುವ ಜೊತೆಯಲ್ಲಿ ರಕ್ಷಿಸುವ ಕಾಯಕವಾಗಲಿ ಎಂದರು.

ಹಲವರು ವರ್ಷಗಳಿಂದ ಚಂದಾಹುಸೇನಿಯ ಉರುಸ್ ಅಂಗವಾಗಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಾತಿ ಮೀರಿ ನಾವೆಲ್ಲರೂ ಕೂಡಿ ಮನುಜ ಪಥದಲ್ಲಿ ಸಾಗೋಣ. ನಮ್ಮಲಿನ ಸಣ್ಣತನವನ್ನು ತೊಡೆದುಹಾಕಿ ಉತ್ತಮ ನಾಗರಿಕ ಸಮಾಜವನ್ನು ನಿರ್ಮಾಣಕ್ಕೆ ಮುಂದಾಗೋಣವೆಂದು ದರ್ಗಾದ ಪ್ರೊ.ಮೌಲಾನ್ ಸೈಯ್ಯದ್ ಷಾ ಯೂಸೂಫ್ ಹುಸೇನಿ ಹೇಳಿದರು.
ತಕದ್ದುಸ್ ಮಾಬ್ ಹಜರತ್ ಸಯ್ಯದ್ ಷಾ ಮಹಮ್ಮದ ಹುಸೇಅಧ್ಯಕ್ಷತೆ ವಹಿಸಿದ್ದರು.

ದೇವೀಂದ್ರಪ್ಪಗೌಡ ಗೋನಾಲ, ಚಂದಪ್ಪ ತಾಯಮ್ಮಗೋಳ, ಮಲ್ಲಣ್ಣಗೌಡ ಪಾಟೀಲ್, ಮೋನಯ್ಯ ಹೊಸ್ಮನಿ, ವೈದ್ಯರಾದ ಡಾ, ಗುರುರಾಜ ಅರಿಕೇರಿ, ಡಾ.ಜಗದೀಶ ಉಪ್ಪಿನ, ಡಾ.ಬಸವರಾಜ ಇಜೇರಿ, ಡಾ.ಶಾಂತಿಲಾಲ್ ಮತ್ತಿತರರು ಉಪಸ್ಥಿತರಿದ್ದರು. ನಂತರ ದರ್ಗಾದ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.