ಗುರುಮಠಕಲ್: ನಂದೇಪಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್‌ನ್ನು ಸುಮಾರು 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಗ್ರಾಮದ ಹಿರಿಯರು ಹೇಳುವಂತೆ ಹಲವು ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿಲ್ಲ!
ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳಿಗಾಗಿ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ರಾಜಕೀಯ ಮುಖಂಡರುಗಳ ಇಚ್ಛಾ ಶಕ್ತಿಯ ಕೊರತೆ, ಅಧಿಕಾರಿಗಳ ಬೇಜವಾಬ್ದಾರಿ ಯಿಂದಾಗಿ ನಿರೀಕ್ಷಿತ ಗುರಿ ತಲುಪಿಲ್ಲ.
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜಿಗೋಸ್ಕರ ಕೊಳವೆ ಬಾವಿಯಿಂದ ನೀರು ಎತ್ತಲಾಗುತ್ತದೆ ಆಗ ಸ್ವಚ್ಛವಾಗಿರುವ ನೀರು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಮನೆಗಳಿಗೆ ಬಿಡಲಾಗುತ್ತದೆ. ಈ ಹಂತದಲ್ಲಿ ಟ್ಯಾಂಕ್‌ಗೆ ಬಂದ ನೀರು ಕಲುಶಿತ ಗೊಳ್ಳುತ್ತದೆ.
ನೀರು ಪೂರೈಸಲು ಅಳವಡಿಸಿದ ಪೈಪ್‌ಗಳು ಚರಂಡಿ ಮೂಲಕ ಹಾದು ಹೋಗಿವೆ. ಕೊಳಕು ನೀರು ಹರಿಯುವಲ್ಲಿ ಕುಡಿವ ನೀರಿನ ಪೈಪ್‌ಗಳು ಒಡೆದು ಚರಂಡಿಯ ಕೊಳಕು ನೀರು ಮಿಶ್ರಣಗೊಂಡು ಬರುತ್ತಿದೆ. ಈ ಪೈಪ್‌ಗಳ ಬದಲಾವಣೆಗಾಗಿ ಕೊಂಕಲ್ ಪಂಚಾಯಿತಿಗೆ ತಿಳಿಸಿದರೂ ಯವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಟ್ಯಾಂಕ್ ಸ್ವಚ್ಛಗೊಳಿಸುವಂತೆ ಪಂಪ್ ಆಪರೇಟರ್ಗೆ ಕೇಳಿದರೆ ಟ್ಯಾಂಕ್‌ನಲ್ಲಿ ಇಳಿದು ಸ್ವಚ್ಛಗೊಳಿಸಲು ವ್ಯವಸ್ಥೆ ಇಲ್ಲ, ಟ್ಯಾಂಕ್‌ನ ಸಿಮೆಂಟ್ ಕಿತ್ತು ಹೋಗಿದ್ದು ಶಿಥಿಲಾವಸ್ಥೆಯಲ್ಲಿದೆ. ಅಧಿಕಾರಿಗಳಿಗೆ ಹಾಗೂ ಜಿಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂಬ ಉತ್ತರ ಲಭಿಸುತ್ತದೆ.
ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ವರ್ಷಗಳೇ ಕಳೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಕೊಳಕು ನೀರು ಸೇವನೆಯಿಂದ ಗ್ರಾಮಸ್ಥರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ರೋಗಗಳು ಉಲ್ಬಣಗೊಳ್ಳುತ್ತಿವೆ. ಇದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ನಂದೇಪಲ್ಲಿ ಗ್ರಾಮದ ಹೆಸರು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರ ಕೇಂದ್ರವಾಗಿದೆ. ಆದರೆ, ಪ್ರವಾಸಿ ಮಂದಿರದಲ್ಲಿ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಆಗರವಾಗಿದೆ.
ಇಲ್ಲಿರುವ ಮೂರು ಅಂಗನವಾಡಿ ಕೇಂದ್ರಗಳೂ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಒಂದೇ ಕೇಂದ್ರದಲ್ಲಿ ನಡೆಯುತ್ತಿವೆ. ಪ್ರತ್ಯೇಕ ಕಟ್ಟಡ ದೂರದಲ್ಲಿರುವುದರಿಂದ ಬಳಕೆ ಇಲ್ಲದೆ ಹಾಳಾಗುತ್ತಿವೆ. ಆಶ್ರಯ ಬಡಾವಣೆಗೆ ಹೋಗಲು ರಸ್ತೆ ಇಲ್ಲ. ಮಳೆ ಬಂದರೆ ಕಚ್ಛಾ ರಸ್ತೆಯಲ್ಲಿ ನೀರು ತುಂಬಿ ಕೆಸರು ಗದ್ದೆಯಾಗುತ್ತದೆ. ಸಂಚರಿಸಲು ಪರದಾಡಬೇಕಾಗುತ್ತದೆ.
ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಚರಂಡಿಗಳು, ಸಿಸಿ ರಸ್ತೆ, ಪೈಪ್ ಲೈನ್ ದುರಸ್ತಿ ಮಾಡಬೇಕು. ಅಂಗನವಾಡಿ ನೂತನ ಕಟ್ಟಡದ ಸದ್ಬಳಕೆ ಮಾಡಬೇಕು ಎಂದು ಅಧಿಕಾರಿಗಳಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಕೆಲಸ ಮಾತ್ರ ಆಗುತ್ತಿಲ್ಲ’
‘ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್‌ಗಳು ಹಾಳಾಗಿವೆ. ಚರಂಡಿ ವ್ಯವಸ್ಥೆ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಾಣ ಕುರಿತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗಿದೆ. ಈ ಬಾರಿ ಕಾಮಗಾರಿಗಳು ಪ್ರಾರಂಭವಾಗುತ್ತವೆ ಎಂಬ ಮಾತು ಹೇಳುತ್ತಾರೆ ಹೊರತು, ಕೆಲಸ ಮಾತ್ರ ಆಗುತ್ತಿಲ್ಲ’.
–ವಿದ್ಯಾವತಿ ಚಂದ್ರಶೇಖರ, ಗ್ರಾ.ಪಂ. ಸದಸ್ಯೆ
‘ಟ್ಯಾಂಕ್ ದುರಸ್ತಿ ಮಾಡಿ’
‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕ್‌ನಿಂದ ಕೊಳಕು ಹಾಗೂ ಕಬ್ಬಿಣದ ತುಕ್ಕು ಬೆರೆತು ಕೆಂಪು ಬಣ್ಣವಾಗಿ ನೀರು ಬರುತ್ತವೆ. ಈ ಟ್ಯಾಂಕ್ ಸ್ವಚ್ಛಗೊಳಿಸಿರುವುದನ್ನು ನಾನು ನೋಡಿಲ್ಲ. ಇದರ ನೀರಿನಿಂದ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ಸರಿಪಡಿಸಬೇಕಾಗಿದೆ’.
–ನರಸಪ್ಪ ಮ್ಯಾಕಲ್, ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.