ADVERTISEMENT

ನನ್ನ ಸೋಲಿಗೆ ನಾನೇ ಹೊಣೆಗಾರ

ಚಿಂತನ–ಮಂಥನ ಸಭೆಯಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 27 ಮೇ 2018, 11:09 IST
Last Updated 27 ಮೇ 2018, 11:09 IST

ಯಾದಗಿರಿ:  ‘ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಅಭ್ಯರ್ಥಿಗಳಿಗೆ ಸೋಲು, ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಯತ್ನಿಸುತ್ತೇನೆ’ ಎಂದು ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಚಿಂತನ ಮಂಥನ ಸಭೆಯಲ್ಲಿ ಅವರು ಮಾತನಾಡಿದರು. ‘ಈ ಬಾರಿ ಗೆಲುವಿನ ವಿಶ್ವಾಸ ಹೊಂದಿದ್ದೆ. ಆದರೆ, ನಾನು ಸೋಲು ಅನುಭವಿಸಿದರೂ ಕಾರ್ಯಕರ್ತರಲ್ಲಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವುದರ ಜತೆಯಲ್ಲಿ ಪಕ್ಷವನ್ನು ಸಂಘಟಿತಗೊಳಿಸೋಣ’ ಎಂದರು.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಆದರೆ, ಕ್ಷೇತ್ರದ ಮತದಾರರು ಅರ್ಥೈಸಿಕೊಳ್ಳುವಲ್ಲಿ ಎಡವಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್ ಮಾತನಾಡಿ, ‘ಡಾ.ಮಾಲಕರಡ್ಡಿ ಅವರ ಸೋಲು ನೋವುಂಟು ಮಾಡಿದೆ. ಸಾಕಷ್ಟು ರಾಜಕೀಯ ಅನುಭವದ ಜೊತೆಯಲ್ಲಿ ಕ್ಷೇತ್ರದ ಬಗ್ಗೆ ಇರುವ ಕಾಳಜಿಯನ್ನು ಯಾರು ಮರೆಯುವಂತಿಲ್ಲ. ಈಗ ಮತ್ತೊಂದು ಆಶಾದಾಯಕ ಬೆಳವಣಿಗೆ ನಮ್ಮಲ್ಲಿ ಭರವಸೆ ಮೂಡಿಸಿದೆ. ಸಮ್ಮಿಶ್ರ ಸರ್ಕಾರ ಇರುವುದರಿಂದ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶವಿದೆ. ಯಾರೂ ನಿರಾಶೆಯಾಗಬಾರದು’ ಎಂದರು.

ನಗರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಮಲ್ಹಾರ, ಮಲ್ಲಿಕಾರ್ಜುನ ಪೂಜಾರಿ, ಹನುಮೇಗೌಡ ಮರಕಲ್, ಶಶಿಧರ ಹೊಸಳ್ಳಿ, ಮರೆಪ್ಪ ಬಿಳ್ಹಾರ, ಶ್ರೀನಿವಾಸರಡ್ಡಿ ಕಂದಕೂರ, ಬಸವರಾಜಪ್ಪಗೌಡ ವಡಗೇರಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಮರಡ್ಡಿಗೌಡ ತಂಗಡಗಿ, ಮಹಮ್ಮದ್‌ ಜಿಲಾನಿ, ವಿಜಯಕುಮಾರ ಶಿರಗೋಳ, ಶಂಕರ ರಾಠೋಡ, ಬಸವರಾಜಪ್ಪಗೌಡ ದಳಪತಿ, ಸಾಯಿಬಣ್ಣ ಗೊಂದೆನೂರ, ರಾಘವೇಂದ್ರ ಮಾನಸಗಲ್, ಮಲ್ಲಣ್ಣ ದಾಸನಕೇರಿ, ನಿಂಗಯ್ಯ ಗುತ್ತೇದಾರ ಇದ್ದರು.
**
ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದು ನಮಗೆ ವರವಾಗಿದೆ. ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಯತ್ನಿಸೋಣ
– ಮರಿಗೌಡ ಹುಲಕಲ್, ಅಧ್ಯಕ್ಷ , ಕಾಂಗ್ರೆಸ್ ಜಿಲ್ಲಾ ಘಟಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.