ADVERTISEMENT

ನಾಲ್ಕು ವಿಧಾನಸಭಾ ಕ್ಷೇತ್ರಗಳ ರ‍್ಯಾಂಡಮೈಜೇಷನ್

ಚುನಾವಣಾ ವೀಕ್ಷಕರು, ರಾಜಕೀಯ ನಾಯಕರ ಸಮ್ಮುಖದಲ್ಲಿ ಮತಯಂತ್ರಗಳ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:50 IST
Last Updated 4 ಮೇ 2018, 12:50 IST

ಯಾದಗಿರಿ: ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಲ್ಲಿ ಗುರುವಾರ ಚುನಾವಣಾ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಎರಡನೇ ಹಂತದ ರ‍್ಯಾಂಡಮೈಜೇಷನ್ (ಯಾದೃಚ್ಛೀಕರಣ) ನಡೆಸಲಾಯಿತು.

ಕಳೆದ ತಿಂಗಳು ಮೊದಲನೇ ಹಂತದ ರ‍್ಯಾಂಡಮೈಜೇಷನ್ ಕೈಗೊಂಡು ಲಭ್ಯವಿದ್ದ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಹಾಗೂ ವಿಎಸ್‌ಡಿಯುಗಳನ್ನು ಮತಕ್ಷೇತ್ರವಾರು ಹಂಚಿಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ ಮತಕ್ಷೇತ್ರವಾರು ಹಂಚಿಕೆಯಾಗಿದ್ದ ಮತಯಂತ್ರಗಳನ್ನು ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಯಿತು.

ಯಾದಗಿರಿ ಮತ್ತು ಗುರುಮಠಕಲ್ ವಿಧಾನಸಭಾ ಮತಕ್ಷೇತ್ರಗಳಿಗೆ ಮತಗಟ್ಟೆ ವಾರು ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ ಸಂಬಂಧ ಯಾದಗಿರಿ ಜಿಲ್ಲಾಡಳಿತ ಭವನದ ಚುನಾವಣಾ ಶಾಖೆಯಲ್ಲಿ ರ‍್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ADVERTISEMENT

ಈ ಸಂದರ್ಭದಲ್ಲಿ ಜಿಲ್ಲಾ ಚುನಾ ವಣಾಧಿಕಾರಿ ಜೆ.ಮಂಜುನಾಥ್ ಜೆ. ಮಾತನಾಡಿ, ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಎಂಜಿನಿಯರ್‌ಗಳು ಯಾದಗಿರಿ ಜಿಲ್ಲೆಗೆ ಆಗಮಿಸಿದ್ದು, ಮತಯಂತ್ರಗಳಲ್ಲಿ ಮತಪತ್ರ ಅಳವಡಿಸುವ ಕಾರ್ಯ ಈಗಾಗಲೇ ಪ್ರಾರಂಭಿಸಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಪತ್ರ ಅಳವಡಿಸುವ ಕಾರ್ಯ ಹಂತಹಂತವಾಗಿ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ರ‍್ಯಾಂಡಮೈಜೇಷನ್ ಮಾಡುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿನಿಧಿಗಳು ಹಾಜರಿರುವ ಹಾಗೆಯೇ ವಿದ್ಯುನ್ಮಾನ ಮತಯಂತ್ರಗಳನ್ನು ಸಿದ್ಧಪಡಿಸು ವಲ್ಲಿಯೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಥವಾ ಪ್ರತಿನಿಧಿಗಳು ಹಾಜರಿರಲು ಅವಕಾಶ ಇದೆ’ ಎಂದರು.

ಯಾದಗಿರಿ ವಿಧಾನಸಭಾ ಮತ ಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ.ಶಕೀಲ್ ಪಿ.ಅಹ್ಮದ್, ಗುರುಮಠಕಲ್ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಕೆ.ಶಾರದಾ ದೇವಿ, ಹೆಚ್ಚುವರಿ ಪ್ರಕಾಶ ಜಿ.ರಜಪೂತ, ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಯಾದಗಿರಿ ಕ್ಷೇತ್ರದ ಚುನಾವಣಾಧಿಕಾರಿ ಮಂಜುನಾಥ್ ಜಿ.ಎನ್., ಗುರುಮಠಕಲ್ ಕ್ಷೇತ್ರದ ಚುನಾವಣಾಧಿಕಾರಿ ಡಾ.ಪರಮೇಶ್ವರ ನಾಯ್ಕ್, ತಹಶೀಲ್ದಾರ್ ಮಲ್ಲೇಶ್ ತಂಗಾ, ವಿಶೇಷ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಗ್ರೇಡ್-2 ತಹಶೀಲ್ದಾರ್ ಸಂಗಮೇಶ ಜಿಡಗೆ ಇದ್ದರು.

ಸುರಪುರ ಮತ್ತು ಶಹಾಪುರ ಕ್ಷೇತ್ರ: ಸುರಪುರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎರಡನೇ ಹಂತದ ರ‍್ಯಾಂಡಮೈಜೇಷನ್ ಪ್ರಕ್ರಿಯೆಯಲ್ಲಿ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಬೀರೇಂದ್ರ ಭೂಷಣ್, ಚುನಾವಣಾಧಿಕಾರಿ ಪ್ರವೀಣಾ ಪ್ರಿಯಾ ಎನ್.ಡೇವಿಡ್, ತಹಶೀಲ್ದಾರ್ ಸುರೇಶ ಆರ್.ಅಂಕಲಗಿ ಹಾಗೂ ರಾಜಕೀಯ ಪಕ್ಷಗಳ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಹಾಪುರದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಎರಡನೇ ಹಂತದ ರ‍್ಯಾಂಡಮೈಜೇಷನ್ ಪ್ರಕ್ರಿಯೆಯಲ್ಲಿ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಬೀರೇಂದ್ರ ಭೂಷಣ್, ಚುನಾವಣಾಧಿಕಾರಿ ನವೀನ್ ಜೋಸೆಫ್, ತಹಶೀಲ್ದಾರ್ ಸುಬ್ಬಣ್ಣ ಎಂ.ಜಮಖಂಡಿ ಹಾಗೂ ರಾಜಕೀಯ ಪಕ್ಷಗಳ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.