ADVERTISEMENT

‘ನಿಂದನೆ’ಯೇ ‘ಆನಂದ’ ತಂದಾಗ!

ಮಲ್ಲೇಶ್ ನಾಯಕನಹಟ್ಟಿ
Published 2 ಡಿಸೆಂಬರ್ 2017, 6:34 IST
Last Updated 2 ಡಿಸೆಂಬರ್ 2017, 6:34 IST
ಯಾದಗಿರಿ ಜಿಲ್ಲೆ ಸುರಪುರದಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಗೂಲಿ ಬಟವಾಡೆ ಮಾಡುತ್ತಿರುವ ರಂಗಪ್ಪ
ಯಾದಗಿರಿ ಜಿಲ್ಲೆ ಸುರಪುರದಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಗೂಲಿ ಬಟವಾಡೆ ಮಾಡುತ್ತಿರುವ ರಂಗಪ್ಪ   

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರದ ರಂಗಪ್ಪನಿಗೆ ಎರಡೂ ಕಣ್ಣುಗಳು ಕಾಣುವುದಿಲ್ಲ. ಹಾಗಂತ, ಇವರು ಭಿಕ್ಷೆ ಬೇಡಲು ಬಸ್‌ ನಿಲ್ದಾಣ ಆಯ್ದುಕೊಳ್ಳಲಿಲ್ಲ. ಮತ್ತೊಬ್ಬರಿಗೂ ಹೊರೆಯಾಗಲಿಲ್ಲ. ಸಂಸಾರದ ನೊಗ ಹೊರುವ ಜತೆಗೆ ಕಟ್ಟಡ ನಿರ್ಮಾಣದ ಗುತ್ತಿಗೆ ಕೆಲಸ ಹಿಡಿದು ಊರಲ್ಲಿ 10 ಜನ ಕಾರ್ಮಿಕರಿಗೆ ದಿನಗೂಲಿಯನ್ನು ತಾವೇ ನೀಡುವ ಮೇಸ್ತ್ರಿಯಾಗಿ ಬೆಳೆದಿದ್ದಾರೆ.

ರಂಗಪ್ಪ ಮೂರು ವರ್ಷದವರಿದ್ದಾಗ ಕಣ್ಣಿಗೆ ಸೋಂಕು ತಗುಲಿತ್ತು. ಸೋಂಕು ಹೆಚ್ಚಾದರೂ ಚಿಕಿತ್ಸೆ ಪಡೆಯದೇ ಇದ್ದರಿಂದ ದೃಷ್ಟಿ ಕಳೆದುಕೊಳ್ಳಬೇಕಾಯಿತು. ದೃಷ್ಟಿ ಕಳೆದುಕೊಂಡಿದ್ದ ರಂಗಪ್ಪ ಅವರು ನಿತ್ಯ ಯಾರನ್ನಾದರೂ ಅವಲಂಬಿಸಬೇಕಾಗಿತ್ತು. ಇದರಿಂದ ನಿಂದನೆಗೂ ಒಳಗಾಗಬೇಕಾಯಿತು. ಇದರಿಂದ ನೊಂದು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಶುರುಮಾಡಿದರು. ಸಾಲು ಸಾಲು ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಾಣಕ್ಕೆ ಎರವಾಗುವ ಘಟನೆಗಳೂ ನಡೆದವು. ‘ಈ ಕುರುಡನಿಗೇನು ಬೇಕು? ಸುಮ್ಮನೆ ಒಂದೆಡೆ ಕೂರಲು ಆಗುವುದಿಲ್ಲವೇ?’ ಎಂದು ಮೂದಲಿಸಿದವರ ಸಂಖ್ಯೆ ಕಡಿಮೆ ಏನು ಇಲ್ಲ. ರಂಗಪ್ಪ ಛಲ ಬಿಡಲಿಲ್ಲ. ಕೆಲಸ ಕ್ರಮೇಣ ರೂಢಿಗತವಾಯಿತು.

ಕಟ್ಟಡ ನಿರ್ಮಿಸುವ ಕಾರ್ಮಿಕರ ಬಳಿ ರಂಗಪ್ಪ ಕೆಲಸ ಬೇಡಿದರು. ‘ದೃಷ್ಟಿ ಇಲ್ಲದೇ ಕೆಲಸ ಮಾಡುವುದಾದರೂ ಹೇಗೆ’ ಎಂದು ಮೇಸ್ತ್ರಿ ಪ್ರಶ್ನಿಸಿದರು. ಅನುಕಂಪದಿಂದ ಚಿಕ್ಕಪುಟ್ಟ ಕೆಲಸಕ್ಕೆ ಹಚ್ಚಿದರು. ಆಮೇಲೆ ದಿನಗೂಲಿ ನಿಗದಿ ಮಾಡಿದರು. ಮಣ್ಣು, ಸಿಮೆಂಟ್ ಮಿಶ್ರಣ ಮಾಡಿ ಕಟ್ಟಡ ಕಾರ್ಮಿಕರಿಗೆ ತಲುಪಿಸುವ ಜವಾಬ್ದಾರಿ ಬಿತ್ತು. ಅದಕ್ಕೆ ದಿನಕ್ಕೆ ₹100 ದಿನಗೂಲಿ ಸಿಗುತ್ತಿತ್ತು. ಆಗಲೂ ಕಾರ್ಮಿಕರಿಂದ, ಮೇಸ್ತ್ರಿಗಳಿಂದ ಬೈಗುಳ ತಪ್ಪುತ್ತಿರಲಿಲ್ಲ. ಸ್ವಾಭಿಮಾನಿಯಾದ ಇವರಿಗೆ ಬೈಗುಳ ಇಷ್ಟವಾಗಲಿಲ್ಲ.

ADVERTISEMENT

‘ಒಮ್ಮೆ ಸಿಮೆಂಟ್ ಚೀಲದ ಮೇಲೆ ನೀರು ಚೆಲ್ಲಿ ರಾಡಿಯಾಗಿತ್ತು. ಅಂದೇ ಮೇಸ್ತ್ರಿ ಕೆಲಸ ಬಿಡಿಸಿದರು. ಆಮೇಲೆ ನಾನೇ ಏಕೆ ಕಟ್ಟಡ ನಿರ್ಮಾಣ ಮಾಡಿಸುವ ಮೇಸ್ತ್ರಿ ಆಗಬಾರದು ಅನ್ನಿಸಿತು. ಅವರಿವರನ್ನು ಕಾಡಿ–ಬೇಡಿ ಚಿಕ್ಕ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಪಡೆದೆ. ಅದೂವರೆಗೂ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕಟ್ಟಡ ಕಾರ್ಮಿಕರಿಗೆ ಮುಂಗಡ ಕೊಟ್ಟು ಕರೆತಂದು ಕೆಲಸ ಆರಂಭಿಸಿದೆ’ ಎಂದು ರಂಗಪ್ಪ ಹೇಳುತ್ತಾರೆ.

ಇವರ ಬಳಿ 10ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ದಿನವೂ ಕನಿಷ್ಠ ಆರು ಸಾವಿರದವರೆಗೆ ದಿನಗೂಲಿ ಬಟವಾಡೆ ಮಾಡುತ್ತಾರೆ. ಈಗ ಕಟ್ಟಡ ನಿರ್ಮಾಣ, ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗಳಿಗಾಗಿ ರಂಗಪ್ಪ ಅವರಿಗೆ ಕರೆ ಬರುತ್ತಿರುತ್ತವೆ. ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಇವರಿಗೆ ಬೇಡಿಕೆಯೂ ಹೆಚ್ಚು. ಇಬ್ಬರು ಮಕ್ಕಳ ತಂದೆಯಾದ ರಂಗಪ್ಪ ಹತ್ತಾರು ಕಾರ್ಮಿಕರ ಬದುಕಿಗೂ ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.