ADVERTISEMENT

ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:38 IST
Last Updated 2 ಏಪ್ರಿಲ್ 2013, 8:38 IST

ಯಾದಗಿರಿ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಶಹಾಪುರ ತಾಲ್ಲೂಕಿನ ಬೀರನಕಲ್ ತಾಂಡಾದಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗುತ್ತದೆ. ಕಳೆದ ವರ್ಷದಂತೆ ಈ ಬಾರಿಯೂ ನೀರಿಗಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ಕಳೆದ ವರ್ಷ ಬೇಸಿಗೆಯಲ್ಲಿ ಬಿರನಕಲ್ ತಾಂಡಾದ ಜನರು ಚಕ್ಕಡಿಯನ್ನು ಕಟ್ಟಿಕೊಂಡು ತೆರೆದ ಬಾವಿಯಿಂದ ಕುಡಿಯುವ ನೀರು ತರುವ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಆಗಿನ ಜಿಲ್ಲಾಧಿಕಾರಿಗಳು, ಗ್ರಾಮಕ್ಕೆ ಕೊಳವೆಬಾವಿ ಕೊರೆಸಲು ಆದೇಶಿಸಿದ್ದರು. ಆದರೆ ಕಳೆದ ವರ್ಷ ಕೊರೆಸಿದ ಕೊಳವೆಬಾವಿಗಳು ಹಾಳಾಗಿದ್ದು, ಮತ್ತೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ಅಧಿಕಾರಿಗಳು ತಾಂಡಾದಲ್ಲಿ ಒಂದೆರೆಡು ಕೊಳವೆ ಬಾವಿಗಳನ್ನು ಹಾಕಿದ್ದರು. ಕಳೆದ ವರ್ಷ ಹಾಕಿದ ಕೊಳವೆಬಾವಿಗಳು ಸಂಪೂರ್ಣ ಹಾಳಾಗಿವೆ. ತಾಂಡಾದಲ್ಲಿ ಒಟ್ಟು ನಾಲ್ಕು ಕೊಳವೆಬಾವಿಗಳಿದ್ದು, ಅದರಲ್ಲಿ ಮೂರು ಕೆಟ್ಟಿವೆ. ಕೇವಲ ಒಂದು ಕೊಳವೆಬಾವಿ ಮಾತ್ರ ಉತ್ತಮ ಸ್ಥಿತಿಯಲ್ಲಿದೆ. ಸುಮಾರು ಎರಡು ಸಾವಿರದಷ್ಟು ಜನಸಂಖ್ಯೆ ಇರುವ ಈ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂದು ತಾಂಡಾದ ನಿವಾಸಿಗಳು ಆರೋಪಿಸುತ್ತಾರೆ.

ಕುಡಿಯುವ ನೀರನ್ನು ತರಬೇಕಾದರೆ ಈ ಬಿಸಿಲಿನಲ್ಲಿ ಎರಡು ಕಿ.ಮೀ. ಅಂತರದಲ್ಲಿರುವ ಕೋಲ್ಕರ ಬಡಾವಣೆಗೆ ಹೋಗಬೇಕು. ಉಳ್ಳವರು ಬಂಡಿಯಲ್ಲಿ ಬ್ಯಾರಲ್‌ಗಳನ್ನಿಟ್ಟು ಕುಡಿಯುವ ನೀರನ್ನು ತರುತ್ತಾರೆ ಎಂದು ಸೋನಿಬಾಯಿ ಹೇಳುತ್ತಾರೆ. ಈಗಾಗಲೇ ತಾಂಡಾದಲ್ಲಿರುವ ಅಂಬರೇಶ ಮುತ್ಯಾನ ಗುಡಿಯ ಹತ್ತಿರ ಒಂದು ಕಿರು ನೀರು ಪೂರೈಕೆ ಘಟಕವಿದೆ.

ಅದಕ್ಕೆ ಒಂದು ಎಚ್‌ಪಿ ಮೋಟಾರ್ ಅಳವಡಿಸಿರುವುದರಿಂದ ಹೆಚ್ಚಿನ ನೀರು ತಾಂಡಾಕ್ಕೆ ಸರಬರಾಜು ಆಗುವುದಿಲ್ಲ. ಅದಕ್ಕಾಗಿ ಐದು ಎಚ್‌ಪಿ ಸಾಮರ್ಥ್ಯವುಳ್ಳ ಮೋಟಾರ್ ಅಳವಡಿಸಿದರೆ ತಾಂಡಾವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಬೀರನಕಲ್ ತಾಂಡಾದ ಗ್ರಾಮ ಪಂಚಾಯಿತಿ ಸದಸ್ಯ ಕಿಶನ್ ರಾಠೊಡ ನಾಯಕ ಹೇಳುತ್ತಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT