ADVERTISEMENT

ನೀರಿನ ಹಕ್ಕು: ಸಾಂಘಿಕ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:50 IST
Last Updated 15 ಅಕ್ಟೋಬರ್ 2012, 8:50 IST

ಶಹಾಪುರ: ಕನ್ನಡ ನಾಡ ನುಡಿಗೆ ತೊಂದರೆಯಾದರೆ ಕನ್ನಡಿಗರೆಲ್ಲರು ಒಗ್ಗೂಡಿ ಹೋರಾಟ ನಡೆಸುವುದು ಅಗತ್ಯವಾಗಿದೆ. ಕಾವೇರಿ ನೀರಿನ ಸಮಸ್ಯೆ ಎದುರಾದಾಗ ನಾವು ಸಾಂಘಿಕ ಹೋರಾಟ ನಡೆಸಬೇಕು. ಕೃಷ್ಣೆಯ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಕನ್ನಡದ ನಾಡ ನುಡಿಯ ಹೋರಾಟ ನಡೆಸುವ ಬಸವರಾಜ ಪಡಕೋಟೆ ನಮ್ಮೆಲ್ಲರ ಶಕ್ತಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಚಂದ್ರಶೇಖರ ಸುಬೇದಾರ ಹೇಳಿದರು.

ಪಟ್ಟಣದ ಸರ್ಕಾರಿ ಸಿಪಿಎಸ್ ಶಾಲಾ ಮೈದಾನದಲ್ಲಿ ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆಯ 44ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬರುವ ದಿನಗಳಲ್ಲಿ ತಮಿಳುನಾಡು ಕ್ಯಾತೆ ತೆಗೆದಂತೆ ಆಂಧ್ರಪ್ರದೇಶವು ಕೂಡಾ ಕೃಷ್ಣಾ ನದಿ ನೀರಿನ ಹಂಚಿಕೆಯಲ್ಲಿ ತಲೆನೋವು ಉಂಟು ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಾವೆಲ್ಲರು ನೀರಿನ ಹಕ್ಕಿನ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ರೈತರನ್ನು ಜಾಗೃತಿಗೊಳಿಸಬೇಕು ಹಾಗೂ ನೀರಿನ ಮಹತ್ವವನ್ನು ಪ್ರಚುರಪಡಿಸಬೇಕೆಂದು ಬಿಎಸ್‌ಆರ್ ಕಾಂಗ್ರೆಸ್ ಜಿಲ್ಲಾ ಸಂಚಾಲಕ ಆರ್. ಚನ್ನಬಸು ವನದುರ್ಗ ಹೇಳಿದರು.

ಪುರಸಭೆ ಅಧ್ಯಕ್ಷ ಸಣ್ಣ ನಿಂಗಪ್ಪ ನಾಯ್ಕೋಡಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಟಿ.ಎನ್.ಭೀಮುನಾಯಕ, ಸ್ಟ್ಯಾಲಿನ್ ವರದರಾಜ, ವಿಜಯಕುಮಾರ ಸಾಲಿಮನಿ, ಕರಬಸಪ್ಪ ಬಿರಾಳ, ಸದಾಶಿವ ಮುಧೋಳ, ಗುರುರಾಜ ಪಡುಕೋಟೆ, ಭೀಮಣ್ಣ ಶಖಾಪೂರ ಉಪಸ್ಥಿತರಿದ್ದರು. ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 46 ಶಿಕ್ಷಕರನ್ನು ಸನ್ಮಾನಿಸಲಾಯಿತು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.