ADVERTISEMENT

ಪರಮಾತ್ಮನ ಚಿಂತನೆಯಲ್ಲಿ ಅಗಾಧ ಶಕ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 9:00 IST
Last Updated 15 ಫೆಬ್ರುವರಿ 2012, 9:00 IST

ಸುರಪುರ: ಸ್ಪರ್ಧಾತ್ಮಕ ಮತ್ತು ಆಧುನಿಕ ಜೀವನ ಶೈಲಿಯ ಸುಳಿಗೆ ಸಿಲುಕಿರುವ ಮಾನವ ಒತ್ತಡಗಳಿಂದ ಒದ್ದಾಡುವಂತಾಗಿದೆ. ಶಾಂತಿ, ನೆಮ್ಮದಿಗಾಗಿ ಪರದಾಡುತ್ತಿದ್ದಾನೆ. ದುರಾಸೆ, ಅಸೂಯೆ, ಹಣ ಗಳಿಕೆಯ ವ್ಯಾಮೋಹ ಇದಕ್ಕೆ ಕಾರಣ. ಪರಲೋಕಕ್ಕೆ ಹೋಗುವ ಸಮಯದಲ್ಲಿ ನಾವು ಏನನ್ನೂ ಜೊತೆಗೆ ಒಯ್ಯುವುದಿಲ್ಲ ಎಂಬ ಸಿದ್ಧಾಂತ ಗೊತ್ತಿದ್ದರೂ ಹೀಗೆ ಅತಿ ಆಸೆ ಮಾಡುತ್ತಿರುವುದು ದುರಂತ ಎಂದು ನಿಷ್ಠಿ ಕಡ್ಲೆಪ್ಪ ವಿರಕ್ತ ಮಠದ ಪ್ರಭುಲಿಂಗ ಸ್ವಾಮಿಗಳು ವಿಷಾದಿಸಿದರು.

ಮಹಾ ಶಿವರಾತ್ರಿ ಪ್ರಯುಕ್ತ ತಿಮ್ಮಾಪುರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಗುಮ್ಮಾ ಪರಿವಾರ ಏರ್ಪಡಿಸಿರುವ ಶರಣಬಸವೇಶ್ವರ ಪುರಾಣ ಪ್ರವಚನ ಮತ್ತು ಸದ್ಭಾವನಾ ಚಿಂತನಾ ಗೋಷ್ಠಿಯನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪರಮಾತ್ಮನ ಚಿಂತನೆಯಲ್ಲಿ ಅಗಾಧ ಶಕ್ತಿಯಿದೆ. ಪ್ರತಿನಿತ್ಯ  ಸ್ವಲ್ಪ ಕಾಲವಾದರೂ ಭಗವಂತನ ಸ್ಮರಣೆಯಲ್ಲಿ ತೊಡಗಿರಿ. ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೆ ಕಂಡು ಕೊಳ್ಳುವಿರಿ. ಆಧ್ಯಾತ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿರಿ. ಪುರಾಣ ಶ್ರವಣ ಮಾಡಿರಿ. ದೇವರು, ಹಿರಿಯರಲ್ಲಿ ಭಯ, ಭಕ್ತಿಯಿಡಿ ಎಂದು ಉಪದೇಶಿಸಿದರು.

ಸದಾ ಒತ್ತಡದಲ್ಲಿರುವ ಜನರಿಗೆ ಈಗ ಗುರುವಿನ ಮಾರ್ಗದರ್ಶನ ಅಗತ್ಯವಿದೆ. ಗುರುವಿನ ಮೊರೆ ಹೋಗಿ. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿರಿ. ಜೀವನದ ಜಂಜಡದಿಂದ ಹೊರಬನ್ನಿ, ರೋಗಮುಕ್ತ ಜೀವನ ನಡೆಸಿರಿ. ಎಲ್ಲ ಸಮಸ್ಯೆಗಳಿಗೂ ಅಧ್ಯಾತ್ಮ ದಿವ್ಯ ಔಷಧಿ ಇದ್ದ ಹಾಗೆ ಎಂದು ಹಿತವಚನ ಹೇಳಿದರು.

ಹಸಮಕಲ್ ಬ್ರಹನ್ಮಠದ ಮಲ್ಲಿಕಾರ್ಜುನ ಶಾಸ್ತ್ರಿ ಅವರು ಶರಣಬಸವೇಶ್ವರ ಪುರಾಣ ಆರಂಭಿಸಿದರು. 9 ದಿನಗಳ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಜ್ದಾದರು ಭಾಗವಹಿಸಲಿದ್ದಾರೆ. ದಿನವೂ ಭೋಜನದ ವ್ಯವಸ್ಥೆ ಮಾಡಲಾಗಿದೆ.ಶಿವಶರಣಪ್ಪ ಗುಮ್ಮಾ ಸ್ವಾಗತಿಸಿದರು. ಶಿಕ್ಷಕ ಶ್ರೀಶೈಲ ಅವರು ನಿರೂಪಿಸಿದರು. ಚನ್ನಬಸಪ್ಪ ಚಟ್ಟಿ ಅವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.