ADVERTISEMENT

ಪಾಳು ಬಿದ್ದ ಐತಿಹಾಸಿಕ ಯಾದಗಿರಿ ಕೋಟೆ

ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಪೋಲು; ಕೋಟೆ ನಿರ್ವಹಣೆ ಇಲ್ಲದೆ ಕೊಳಚೆ

ನರಸಿಂಹ ಮೂರ್ತಿ ಕುಲಕರ್ಣಿ
Published 24 ಅಕ್ಟೋಬರ್ 2016, 6:57 IST
Last Updated 24 ಅಕ್ಟೋಬರ್ 2016, 6:57 IST
ಯಾದಗಿರಿ ಕೋಟೆ ಪ್ರದೇಶಕ್ಕೆ ತೆರಳುವ ಪ್ರಮುಖ ದ್ವಾರ
ಯಾದಗಿರಿ ಕೋಟೆ ಪ್ರದೇಶಕ್ಕೆ ತೆರಳುವ ಪ್ರಮುಖ ದ್ವಾರ   

ಯಾದಗಿರಿ: ಯಾದಗಿರಿ ಕೋಟೆ  ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ. ಕೋಟೆ ಪ್ರದೇಶದ ಕೆಲವಡೆ ಒತ್ತುವರಿ ಮಾಡಿಕೊಂಡು ಮನೆಕಟ್ಟಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ₹50 ಕೋಟಿ ಹಣ ಮೀಸಲಿಟ್ಟಿದೆ. ಆದರಲ್ಲಿ ₹25 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿವೆ.

ಆದರೆ ನಗರದ ಕೋಟೆ ಪ್ರದೇಶದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದ್ದು, ಅಭಿವೃದ್ಧಿಗಾಗಿ ಬಿಡುಗಡೆಯಾದ ₹2 ಕೋಟಿಯಲ್ಲಿ, ₹1 ಕೋಟಿ ಖರ್ಚಾಗಿದ್ದರೂ ಸದ್ಭಳಕೆಯಾಗಿಲ್ಲ  ಎಂದು ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಟೆಯ ಐತಿಹ್ಯ: ನಗರದ ಕೋಟೆಯಲ್ಲಿ ಕಲ್ಯಾಣಿ ಚಾಲುಕ್ಯರು, ಯಾದವರು, ಚೋಳರು, ಬಹಮನಿ ಸುಲ್ತಾನರು, ಆದಿಲ್‌ಶಾಹಿ ಹಾಗೂ ನಿಜಾಮರು ರಾಜ್ಯಭಾರ ನಡೆಸಿದ್ದಾರೆ.

ಯಾದಗಿರಿ ಕೋಟೆಯಲ್ಲಿ ಐದು ಶಾಸನಗಳು ಪತ್ತೆಯಾಗಿವೆ. ಕೋಟೆಯ ದ್ವಾರದ ಮೇಲಿರುವ ಒಂದು ಸಾಲಿನ ಶಾಸನವನ್ನು ಕೋಟೆ ಸಗರದ ಜಗನ್ನಾಥ ನಿರ್ಮಾಣ ಮಾಡಿದ್ದಾರೆಂದು ಬರೆದಿದೆ.  ಉಳಿದ ಶಾಸನಗಳನ್ನು ಒಂದನೇ ಇಬ್ರಾಹಿಂ ಆದಿಲ್ ಷಾ  ಸೇರಿದಂತೆ ವಿವಿಧ ರಾಜ ಮಹಾರಾಜರು ಬರೆಸಿದ್ದಾರೆ.

ಯಾದಗಿರಿ ಕೋಟೆಯಲ್ಲಿ ಹಿಂದೂ, ಜೈನ, ಮುಸ್ಲಿಂ ಹಾಗೂ ಶೈವ ಧರ್ಮದ ಕುರುಹುಗಳಿವೆ. ಇದರ ಜೊತೆ ಭುವನೇಶ್ವರಿ ದೇವಿ, ರಾಮಲಿಂಗೇಶ್ವರ ಎಂಬ ಶೈವ ದೇವಸ್ಥಾನ, ಈಶ್ವರ, ಕಾಳಿಕಾ ಹಾಗೂ ಆಂಜನೇಯರ ದೇವಸ್ಥಾನಗಳು, ಮಸೀದಿ, ಅಕ್ಕ- ತಂಗಿಯರ ಬಾವಿ, ಸಿಡಿಲು ಬಾವಿ, ತೋಪುಗಳು, ಕೋಟೆ ಗೋಡೆಗಳು, ಮಳೆ ನೀರಿನಿಂದ ತುಂಬಿದ ಡೋಣೆಗಳು  ಕೂಡಿದ ಸುಂದರ ತಾಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಆದರೆ ಇವೆಲ್ಲವು ನಿರ್ವಹಣೆ ಇಲ್ಲದೆ ಹಾಳಾ ಗುತ್ತಿದೆ. ಕೋಟೆಗೆ ಹೋಗುವ ಮೆಟ್ಟಲುಗಳ ಆಸುಪಾಸಿನಲ್ಲಿ ಮತ್ತು ಸ್ವಲ್ಪ ಮೇಲ್ಭಾಗದ ಸ್ಥಳವು ಸ್ಥಳೀಯ ಜನರ ಶೌಚಾಲಯದ ತಾಣವಾಗಿದೆ.

ಅನೈತಿಕ ಚಟುವಟಿಕೆಗೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕೋಟೆ ಪ್ರದೇಶದ ಕೆಲವು ಕಡೆ ಇಸ್ಪೀಟ್‌ ಆಡುತ್ತಿದ್ದಾರೆ ಎನ್ನುತ್ತಾರೆ  ಕನ್ನಡ ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ.
ಐತಿಹಾಸಿಕ ಪರಂಪರೆ ಮತ್ತು ತಾಣಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅನುದಾನ ಖರ್ಚಾದರೂ, ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ.

ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಹಣದಲ್ಲಿ ಮೆಟ್ಟಿಲುಗಳ ದುರಸ್ತಿ, ನೀರಿನ ಟ್ಯಾಂಕ ಮತ್ತು ಕೆಲವೆಡೆ ಗ್ರಿಲ್‌ ನಿರ್ಮಿಸಲಾಗಿದೆ.  ಕಾಮಗಾರಿ ಮುಗಿಯುವುದರೊಳಗೆ ಕೆಲವು ಹಾಳಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.