ADVERTISEMENT

ಫೆ.25ರ ವರೆಗೆ ಕಾಲುವೆಗೆ ನೀರು?

ನೀರಾವರಿ ಸಲಹಾ ಸಮಿತಿ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2013, 9:17 IST
Last Updated 18 ನವೆಂಬರ್ 2013, 9:17 IST
ಕೆಂಭಾವಿ ಸಮೀಪ ಬೇಸಿಗೆ ಬೆಳೆಗೆ ಭತ್ತದ ಸಸಿಗಳನ್ನು ತಯಾರಿಸುತ್ತಿರುವುದು
ಕೆಂಭಾವಿ ಸಮೀಪ ಬೇಸಿಗೆ ಬೆಳೆಗೆ ಭತ್ತದ ಸಸಿಗಳನ್ನು ತಯಾರಿಸುತ್ತಿರುವುದು   

ಕೆಂಭಾವಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆಯಾಗಿರುವ ಎರಡನೇ ಬೆಳೆಗೆ ನೀರು ಹರಿಸುವ ಮಹತ್ವದ ನಿರ್ಣಯವು ಸೋಮವಾರ (ನ.18) ಆಲಮಟ್ಟಿಯಲ್ಲಿ ನಡೆಯುವ ನೀರಾ­ವರಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ.

ಆಲಿಮಟ್ಟಿ ಹಾಗೂ ನಾರಾಯಣ­ಪುರ ಜಲಾಶಯಗಳಲ್ಲಿ ಸದ್ಯ ಲಭ್ಯ­ವಿರುವ ನೀರು ನಿತ್ಯ ಫೆ. 25ರವರೆಗೆ ಮಾತ್ರ ಕಾಲುವೆಯಲ್ಲಿ ಹರಿಸಬಹುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳಿಂದ ತಿಳಿದು ಬಂದಿದೆ. ವಾರಾ ಬಂದಿ ಮೂಲಕ ನೀರು ಹರಿಸಿ­ದರೆ ಮಾರ್ಚ್‌ ಅಂತ್ಯದವರೆಗೆ ನೀರು ಕೊಡಬಹುದು ಎಂದು ನಿಗಮದ ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ.

ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಬೇಸಿಗೆ ಬೆಳೆಗೆ ಕನಿಷ್ಠ ಮಾರ್ಚ್‌ ಅಂತ್ಯದವರೆಗಾದರೂ ನೀರು ಹರಿಸಲೇಬೇಕು ಎನ್ನುತ್ತಾರೆ ರೈತರು.

ಈ ಪ್ರದೆೇಶದಲ್ಲಿ ಹತ್ತಿ, ಮೆಣಸಿನ­ಕಾಯಿ, ಶೇಂಗಾ, ಸಜ್ಜೆ, ಬಿಳಿಜೋಳ ಹಾಗೂ ಅತಿಹೆಚ್ಚು ಭತ್ತ ಬೆಳೆಯಲಾ­ಗುತ್ತದೆ. ಶೇಂಗಾ ಕೂಡಾ ಹೆಚ್ಚಾಗಿ ಬೆಳೆಯುತ್ತಿದ್ದು, ಭತ್ತ ಹಾಗೂ ಶೇಂಗಾ ಬೆಳೆಗೆ ಮಾರ್ಚ್‌ ಅಂತ್ಯದವರೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾ­ಗುತ್ತದೆ. ಫೆ. 25 ರ ವರೆಗೆ ನೀರು ಹರಿ­ಸಿದರೆ, ಯಾವುದೇ ಬೆಳೆ ಬರುವುದು ಎಂದು ಹೇಳುತ್ತಾರೆ ರೈತ ಭೀಮಣ್ಣ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡಲು ಮಾರ್ಚ್‌ ಅಂತ್ಯದ­ವರೆಗಾದರೂ ನೀರು ಹರಿಸಬೇಕು. ಈ ಸಭೆ ರೈತರ ಹಿತ ಕಾಪಾಡುವ ಮಹ­ತ್ವದ ಸಭೆಯಾಗಬೇಕಾಗಿದೆ. ಜನಪ್ರತಿ­ನಿಧಿಗಳು ಹಾಗೂ ಅಧಿಕಾರಿಗಳು ಕಾಲುವೆ ನವೀಕರಣಕ್ಕಿಂತ ರೈತರ ಪರಿ­ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕಾಲು­ವೆಗೆ ಸಮರ್ಪಕ ನೀರು ಕೊಟ್ಟು ರೈತನನ್ನು ಸಬಲರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಈ ಭಾಗದ ಬಹುತೇಕ ಜನ ಕೆಲಸ ಅರಸಿ ಗುಳೆ ಹೋಗಬೇಕಾಗುತ್ತದೆ ಎಂದು ಕೆಜೆಪಿ ಮುಖಂಡ ವಿಕಾಸ ಸೊನ್ನದ ಹೇಳುತ್ತಾರೆ.

ಭತ್ತದ ಎರಡನೇ ಬೆಳೆಗೆ ನೀರು ಕೊಡುವಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇ­ಶದ ಶಾಸಕರು ಮತ್ತು ಸಚಿವರು ಮುತವರ್ಜಿ ವಹಿಸಿ, ನೀರಾವರಿ ಸಚಿ­ವರು ಹಾಗೂ ಅಧಿಕಾರಿಗಳಿಗೆ ಮನ­ವರಿಕೆ ಮಾಡಿಕೊಡಬೇಕು. ಎರಡನೇ ಬೆಳೆಗೆ ನೀರು ಹರಿಸಲು ಕ್ರಮ ಕೈಗೊ­ಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.