ಯಾದಗಿರಿ: ಸಕ್ರಾಂತಿಯ ನಂತರ ಸೆಖೆಯ ಅಬ್ಬರ ಆರಂಭ. ಶಿವ ಶಿವ ಎನ್ನುತ್ತಲೇ ಶಿವರಾತ್ರಿಯನ್ನೂ ಆಚರಿಸಿದ್ದಾಯಿತು. ಇದೀಗ ಬೇಸಿಗೆಯ ಬವಣೆಯ ಮಧ್ಯೆಯೂ ಸ್ವಲ್ಪ ತಂಪು ನೀಡುವ ಹೋಳಿ ಹಬ್ಬದ ಆಚರಣೆ. ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರಿಗೆ, ಬಣ್ಣದ ಓಕುಳಿಯಾಟವು ಮಾನಸಿಕವಾಗಿಯೂ ಸ್ವಲ್ಪ ತಂಪೆರೆಯುತ್ತದೆ.
ಬಿಸಿಲು ನಾಡಿನಲ್ಲಿ ಬೇಸಿಗೆಯಲ್ಲಿ ಹಬ್ಬಗಳ ಆಚರಣೆ ಮಾಡುವುದೇ ಅಪರೂಪ ಎನ್ನಬಹುದು. ಆದರೆ ಹೋಳಿ ಹಬ್ಬಕ್ಕೆ ಮಾತ್ರ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಭಾನುವಾರ ಹೋಳಿ ಹುಣ್ಣಿಮೆ ನಿಮಿತ್ತ ರಾತ್ರಿ ಕಾಮದಹನ ಮಾಡಲಾಗಿದ್ದು, ಸೋಮವಾರ (ಮಾ.17) ಬಣ್ಣದ ಓಕುಳಿಯಾಟಕ್ಕೆ ವೇದಿಕೆ ಸಿದ್ಧವಾಗಿದೆ. ಮುನ್ನಾದಿನವಾದ ಭಾನುವಾರ ಅಂಗಡಿಗಳಲ್ಲಿ ಬಣ್ಣ, ಪಿಚಕಾರಿಗಳ ಖರೀದಿಯೂ ಮುಗಿದಿದ್ದು, ಇನ್ನೇನಿದ್ದರೂ, ಬಣ್ಣಗಳನ್ನು ಎರಚುವದಷ್ಟೇ ಬಾಕಿ.
ಯಾದಗಿರಿಯಲ್ಲಿ ಬಣ್ಣದ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಇಲ್ಲಿ ಎಲ್ಲ ವರ್ಗದ ಜನರೂ ಬಣ್ಣ ಆಡುವ ಮೂಲಕ ಭಾವೈಕ್ಯವನ್ನು ಸಾರುತ್ತಾರೆ. ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಭಾವೈಕ್ಯತಾ ಸಮಿತಿ ವತಿಯಿಂದ ನಡೆಯುವ ಹೋಳಿ ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಜನರೂ ಪಾಲ್ಗೊಳ್ಳುತ್ತಾರೆ. ಪರಸ್ಪರ ಬಣ್ಣ ಹಚ್ಚುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಪೊಲೀಸ್ ಠಾಣೆಯಲ್ಲಿನ ಕಾರ್ಯಕ್ರಮ ಮುಗಿದ ನಂತರವೇ ಬಣ್ಣದ ಆಟ ಆರಂಭವಾಗುತ್ತದೆ. ಹಿರಿಯರು, ಕಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲರೂ ಬಣ್ಣದಲ್ಲಿ ಮಿಂದೇಳುತ್ತಾರೆ. ಚಿಕ್ಕಮಕ್ಕಳು ಬಡಾವಣೆಗಳಲ್ಲಿಯೇ ಬಣ್ಣದ ಪಿಚಕಾರಿಗಳನ್ನು ಹಿಡಿದುಕೊಂಡು ಹಾದು ಹೋಗುವವರಿಗೆ ಬಣ್ಣ ಸಿಡಿಸಿ ಸಂಭ್ರಮಿಸಿದರೆ, ಯುವಕರ ದಂಡು ಬೈಕ್‌ಗಳನ್ನೇರಿ ಕೇಕೇ ಹಾಕುತ್ತ, ಸ್ನೇಹಿತರನ್ನು ಕರೆದುಕೊಂಡು ಬಣ್ಣದಾಟ ಆಡುತ್ತಾರೆ.
ನಗರದಾದ್ಯಂತ ಹೋಳಿ ಹಬ್ಬದ ಸಂಭ್ರಮ ಇಮ್ಮಡಿಸುತ್ತದೆ. ಮಧ್ಯಾಹ್ನದವರೆಗೂ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿರುವುದರಿಂದ ಅಲ್ಲಲ್ಲಿ ಬಂಡಿಗಳಲ್ಲಿ ಸಿಗುವ ಚಹಾ ಕುಡಿಯುವುದೇ ಒಂದು ಸಂಭ್ರಮ ಎನಿಸುತ್ತದೆ.
ವಿಶಿಷ್ಟ ಬಣ್ಣದ ಬಂಡಿ: ನಗರದಲ್ಲಿ ಓಕುಳಿಯಾಟ ಬೆಳಿಗ್ಗೆಯಿಂದ ಆರಂಭವಾಗುತ್ತಿದ್ದು, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಬಣ್ಣದ ಬಂಡಿಯ ಮೆರವಣಿಗೆ ಆರಂಭವಾಗುತ್ತದೆ. ಈ ಮೆರವಣಿಗೆ ಹಾದು ಹೋಗುತ್ತಿದ್ದಂತೆಯೇ ಬಣ್ಣದಾಟಕ್ಕೆ ತೆರೆ ಬೀಳುತ್ತದೆ.
ಬಣ್ಣದ ಬಂಡಿ ವಿಶೇಷವಾಗಿದ್ದು, ರತಿ ಕಾಮಣ್ಣರ ಮೂರ್ತಿಗಳನ್ನು ಹೊತ್ತ ಚಕ್ಕಡಿ, ಬಣ್ಣದ ಡ್ರಮ್ ಇರುವ ಚಕ್ಕಡಿಗಳು ಇದರಲ್ಲಿ ಸೇರಿವೆ. ಒಂದು ಬಂಡಿಯ ಮೆರವಣಿಗೆ ನಗರದ ಮೈಲಾಪುರ ಅಗಸಿಯಿಂದ ಆರಂಭವಾದರೆ, ಇನ್ನೊಂದು ಬಂಡಿಯ ಮೆರವಣಿಗೆ ಸ್ಟೇಶನ್ ಬಜಾರ್‌ನಲ್ಲಿ ನಡೆಯುತ್ತದೆ.
ಈ ಎರಡೂ ಬಂಡಿಗಳು ಏಕಕಾಲಕ್ಕೆ ಆರಂಭವಾಗುತ್ತಿದ್ದು, ಈ ಮೆರವಣಿಗೆ ಹಾದು ಹೋಗುವ ಪ್ರದೇಶದಲ್ಲಿ ಬಣ್ಣದ ಆಟವನ್ನು ನಿಲ್ಲಿಸಲಾಗುತ್ತದೆ. ಇದರರ್ಥ ಬಣ್ಣದ ಬಂಡಿಯ ಮೆರವಣಿಗೆ ಹಾದು ಹೋದರೆ ಹೋಳಿ ಹಬ್ಬ ಆಚರಣೆ ಮುಗಿದಂತೆ. ನಂತರ ಮನೆಗೆ ತೆರಳಿ ತಣ್ಣೀರು ಸ್ನಾನ ಮಾಡಿ, ಮನೆಯಲ್ಲಿ ಮಾಡಿದ ಹೋಳಿ, ಸಿಹಿ ತಿಂಡಿಗಳನ್ನು ತಿಂದು ಹಬ್ಬದ ಸಂಭ್ರಮವನ್ನು ಸವಿಯಲಾಗುತ್ತದೆ.
ಖರೀದಿ ಜೋರು: ಬಣ್ಣದ ಹಬ್ಬಕ್ಕೆ ಖರೀದಿಯೂ ಜೋರಾಗಿಯೇ ನಡೆದಿದೆ. ಬಣ್ಣದ ಪಿಚಕಾರಿಗಳ ಖರೀದಿ ಮಾಡಲು ಪಾಲಕರು ಭಾನುವಾರವೇ ಪೇಟೆಗೆ ಧಾವಿಸಿದ್ದರು. ಬಣ್ಣದ ಪಾಕೀಟುಗಳು ಹಾಗೂ ಪಿಚಕಾರಿಗಳನ್ನು ಖರೀದಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಬಣ್ಣದ ಪಿಚಕಾರಿಗಳಿ ಕನಿಷ್ಠ ₨ 50 ರಿಂದ ಆರಂಭವಾಗಿ, ₨ 100 ವರೆಗೂ ಮಾರಾಟ ಆಗಿವೆ. ಇನ್ನು ಬಣ್ಣದ ಪಾಕೀಟುಗಳಿಗೂ ಸಾಕಷ್ಟು ಬೇಡಿಕೆ ಇದೆ. ಸಾದಾ ಬಣ್ಣಗಳನ್ನು ಎರಚಿ ಹಬ್ಬದ ಸಂಭ್ರಮವನ್ನು ಆಚರಿಸುವಂತೆ ಜಿಲ್ಲಾಡಳಿತ ಈಗಾಗಲೇ ಮನವಿ ಮಾಡಿದೆ.
‘ಭಾವೈಕ್ಯದ ಹೋಳಿ ಹಬ್ಬ’
‘ಯಾದಗಿರಿಯಲ್ಲಿ ಹೋಳಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಎಲ್ಲ ವರ್ಗದ ಜನರೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ನಗರದಲ್ಲಿ ಬಣ್ಣದ ಆಟಕ್ಕೆ ವಿಶಿಷ್ಟ ಸಂಪ್ರದಾಯವಿದ್ದು, ಭಾವೈಕ್ಯತಾ ಸಮಿತಿಯ ಹೋಳಿ ಹಬ್ಬ, ಬಣ್ಣದ ಬಂಡಿಯ ಮೆರವಣಿಗೆಗಳು ಹೋಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಸುತ್ತವೆ’.
-–ಅಯ್ಯಣ್ಣ ಹುಂಡೇಕಾರ, ಹಿರಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.