ADVERTISEMENT

ಬರ ಅಧ್ಯಯನ: ಮೇವು ನೀರುಪಾಲು

ಕೊಳೆಯುತ್ತಿರುವ ಭತ್ತದ ಮೇವು– ಜಿಲ್ಲಾಡಳಿತದ ನಿರ್ಲಕ್ಷ್ಯ

ನರಸಿಂಹ ಮೂರ್ತಿ ಕುಲಕರ್ಣಿ
Published 18 ಅಕ್ಟೋಬರ್ 2016, 7:13 IST
Last Updated 18 ಅಕ್ಟೋಬರ್ 2016, 7:13 IST

ಯಾದಗಿರಿ: ಬರ ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಿದಾಗ ಶಹಾಪುರ ತಾಲ್ಲೂಕಿನ ನಾಯ್ಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ  ಸಂಗ್ರಹಿಸಿದ್ದ ಭತ್ತದ ಮೇವು ಹಾಳಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಭತ್ತದ ಮೇವನ್ನು ಸಮರ್ಪಕವಾಗಿ ಬಳಸದ ಕಾರಣ ಈಚೆಗೆ ಸುರಿದ ಮಳೆಯಿಂದ ಮೇವು ಕೊಳೆತು ಹೋಗಿ ದುರ್ವಾಸನೆ ಬೀರುತ್ತಿದೆ.
ಬರ ಅಧ್ಯಯನಕ್ಕೆ ಮುಖ್ಯಮಂತ್ರಿ ಬರುತ್ತಾರೆಂದು  ರಾತ್ರೋರಾತ್ರಿ  ನಾಯ್ಕಲ್, ಬಳಿಚಕ್ರ, ಹಯ್ಯಾಳ (ಬಿ), ಹತ್ತಿಕುಣಿ, ಸೈದಾಪುರಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ ಭತ್ತದ ಮೇವು ಸಂಗ್ರಹಿಸಿಡಲಾಗಿತ್ತು. ಕೆಲವು ಕಡೆಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಅಧಿಕಾರಿಗಳು ಮೇವನ್ನು ಪರಿಶೀಲಿಸಿದರು. ಆದರೆ, ನಂತರ ಇದರ ಬಳಕೆಯನ್ನು ಮಾಡಲಿಲ್ಲ.  ಬೇರೆ ಕಡೆಗೆ ಸ್ಥಳಾಂತರವನ್ನು ಮಾಡಲಿಲ್ಲ. ಹೀಗಾಗಿ ಶಹಾಪುರ ತಾಲ್ಲೂಕಿನ ನಾಯ್ಕಲ್‌ ಗ್ರಾಮದಲ್ಲಿರುವ ಮೇವು ಕೊಳೆತು ಹೋಗಿದೆ.

‘ಭತ್ತದ ಮೇವು ಸಂಗ್ರಹಿಸಿರುವ  ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿಯೇ ಪಶು ಚಿಕಿತ್ಸೆ ಕೇಂದ್ರ, ಹೋಮಿಯೋಪಥಿಕ್ ಚಿಕಿತ್ಸಾಲಯ ಇದೆ. ಮೇವು ಕೊಳೆತು ಅಲ್ಲಿಂದ ಬರುವ ದುರ್ವಾಸನೆ ಮತ್ತು ಸೊಳ್ಳೆಗಳಿಂದಾಗಿ ರೋಗ  ಹರಡುವ ಸಾಧ್ಯತೆ ಇದ್ದು, ಕೂಡಲೇ ಇದನ್ನು ಬೇರೆಡೆ ಸ್ಥಳಾಂತರ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಮೇವು ಸಂಗ್ರಹಿಸಿರುವ ಸ್ಥಳ ಇಕ್ಕಟ್ಟಾಗಿದ್ದು, ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇಲ್ಲಿರುವ ಮೇವನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ನಾಯ್ಕಲ್‌ ಗ್ರಾಮದ ನಾಗಣ್ಣ.

ಮೇವು ಸಂಗ್ರಹ :  ನಾಯ್ಕಲ್ ಗ್ರಾಮದಲ್ಲಿ 20 ಮೆಟ್ರಿಕ್‌ ಟನ್ ಮೇವು ಹಾಗೂ ಹಯ್ಯಾಳ (ಬಿ) ಗ್ರಾಮದಲ್ಲಿ 30 ಮೆಟ್ರಿಕ್ ಟನ್ ಮೇವು ಸಂಗ್ರಹಿಸಿಡಲಾಗಿತ್ತು. ಸದ್ಯ  ನಾಯ್ಕಲ್‌ನಲ್ಲಿ 15 ಮೆಟ್ರಿಕ್‌ ಟನ್ ಮತ್ತು ಹಯ್ಯಾಳ (ಬಿ) ಗ್ರಾಮದಲ್ಲಿ 25 ಮೆಟ್ರಿಕ್‌ ಟನ್ ಮೇವು ಸಂಗ್ರಹವಿದೆ.

ಒಂದು ಕೆಜಿಗೆ ₹3ರಂತೆ ಮೇವು ಖರೀದಿಸಲು ರೈತರು ಮುಂದೆ ಬರುತ್ತಿಲ್ಲ.  ಸರ್ಕಾರದ ಆದೇಶದ ಪ್ರಕಾರ ಉಚಿತವಾಗಿ ರೈತರಿಗೆ ಮೇವು ವಿತರಣೆ ಮಾಡುವಂತಿಲ್ಲ. ಹೀಗಾಗಿ ಮೇವು ಹಾಗೆಯೇ ಉಳಿದಿದೆ.

ಮೇವು ಕೊಳೆಯದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆಯಾದರೂ, ಈಚೆಗೆ ಸುರಿದ ಮಳೆಯಿಂದಾಗಿ ನಾಯ್ಕಲ್ ಗ್ರಾಮದಲ್ಲಿನ ಮೇವು ಒಂದಿಷ್ಟು ತೋಯ್ದು  ಹೋಗಿದೆ ಎಂದು  ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಾಜಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಯ್ಕಲ್‌ ಮತ್ತು ಹಯ್ಯಾಳ (ಬಿ)ಗ್ರಾಮದ ಮೇವು ಒಂದು ವಾರದಲ್ಲಿ ಸ್ಥಳಾಂತರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.