ADVERTISEMENT

ಬಿಆರ್‌ಜಿಎಫ್: 17.21 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:34 IST
Last Updated 8 ಡಿಸೆಂಬರ್ 2012, 6:34 IST

ಯಾದಗಿರಿ: ಕೇಂದ್ರ ಸರ್ಕಾರದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಅನುದಾನ ಯೋಜನೆ (ಬಿ.ಆರ್. ಜಿ. ಎಫ್.) ಅಡಿಯಲ್ಲಿ ಜಿಲ್ಲೆಗೆ ರೂ. 17.21 ಕೋಟಿ ಅನುದಾನ ಮಂಜೂರಾಗಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸಮಿತಿ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ ಈ ವಿಷಯ ತಿಳಿಸಿದರು.

ಈ ಹಿಂದೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಾಮೂಹಿಕ ನಿಧಿಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ರೂ. 15 ಕೋಟಿ ಕೋರಿ,  ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರನ್ವಯ ಕೇಂದ್ರ ಸರ್ಕಾರವು ರೂ. 17.21 ಕೋಟಿ  ಮಂಜೂರು ಮಾಡಿದೆ. ಇದಕ್ಕೆ ಅನುಗುಣವಾದ ಪರಿಷ್ಕೃತ ಯೋಜನಾ ಪ್ರಸ್ತಾವನೆ  ಸಲ್ಲಿಸಲು ತಿಳಿಸಿದ್ದು, ಈ ಕುರಿತು ನಡೆದ ಸಭೆಯಲ್ಲಿ ಪರಿಷ್ಕೃತ ಕ್ರಿಯಾ ಯೋಜನೆ ಪ್ರಸ್ತಾವನೆ  ಸಲ್ಲಿಸಲು ಅನುಮೋದನೆ ನೀಡಲಾಯಿತು.

ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ತೋಟಗಾರಿಕೆ ಚಟುವಟಿಕೆ, ಮೂಲ ಸೌಕರ‌್ಯ ಕಲ್ಪಿಸುವುದು, ಸಾಕ್ಷರತೆ ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಯೋಜನೆಯನ್ನು ರೂಪಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಯೋಜನೆಗೆ ಅನುಮೋದನೆ ಪಡೆಯಲು ನಿರ್ಧರಿಸಲಾಯಿತು.

12 ನೇ ಪಂಚವಾರ್ಷಿಕ ಯೋಜನಾ ಅವಧಿಗೆ ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮುನ್ನೋಟ ವರದಿ ತಯಾರಿಸಲು ನಿರ್ಧರಿಸಲಾಗಿದ್ದು,  ಕೃಷಿ, ಜಲಸಂಪನ್ಮೂಲ, ಕೈಗಾರಿಕೆ, ಮೂಲ ಸೌಕರ‌್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸಾಕ್ಷರತೆ ಮತ್ತು ಶಿಕ್ಷಣ, ಸಾರ್ವಜನಿಕ ಆರೋಗ್ಯ, ಬಡತನ ನಿವಾರಣೆ, ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ನ್ಯಾಯ, ಬೃಹತ್ ಕೈಗಾರಿಕೆ ಹಾಗೂ ಪ್ರವಾಸೋದ್ಯಮ, ಮಹಿಳಾ ಅಭಿವೃದ್ಧಿ ಮತ್ತು ನಗರಾಭಿವೃದ್ಧಿ ವಲಯಗಳನ್ನು ಒಳಗೊಂಡ ಕಾರ್ಯ ತಂಡಗಳನ್ನು ರಚಿಸಲು ನಿರ್ಧರಿಸಿ, ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್, ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಯಾದಗಿರಿ ಅಭಿವೃದ್ಧಿ ಮುನ್ನೋಟ ಸಿದ್ಧಪಡಿಸಲು ಇಲಾಖಾವಾರು ಸಮಗ್ರ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನುಮೇಗೌಡ ಮರಕಲ್, ದೇವರಾಜ ನಾಯಕ, ಸದಸ್ಯರಾದ ಬಸವರಾಜ ಖಂಡ್ರೆ, ಸಿದ್ಧನಗೌಡ ಪೊಲೀಸ್‌ಪಾಟೀಲ, ಎಚ್.ಸಿ. ಪಾಟೀಲ, ನಾಗನಗೌಡ ಸುಬೇದಾರ, ಭೀಮರಾಯ, ಮಲ್ಲಮ್ಮ, ಚೆನ್ನಬಸಮ್ಮ ಸೋಮಣ್ಣೋರ, ಶ್ಯಾಮಲಾ ಕಮತಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.