ADVERTISEMENT

ಭವ್ಯ ಪರಂಪರೆಯ ತವರೂರು ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 10:20 IST
Last Updated 8 ಅಕ್ಟೋಬರ್ 2017, 10:20 IST

ಸುರಪುರ: ‘ಕನ್ನಡ ಭಾಷೆ ಎರಡು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, 6 ಕೋಟಿ ಕನ್ನಡಿಗರ ದೊಡ್ಡ ಆಸ್ತಿಯಾಗಿದೆ. ಕರ್ನಾಟಕಕ್ಕೆ ವಿಸ್ತಾರವಾದ ಭೂಮಿಕೆ, ಭವ್ಯ ಪರಂಪರೆಯಿದೆ’ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಬಹುತ್ವ ಭೂಮಿಕೆ  ಸಮಿತಿ ಶನಿವಾರ ಹಮ್ಮಿಕೊಂಡಿದ್ದ ‘ಸಂಸ್ಕೃತಿ ಚಿಂತನೆ ಬಹುತ್ವದ ನೆಲೆಗಳ ಮೂಲಕ’ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ‘ನಿರಾಕರಣೆಯ ಪರಂಪರೆಗೆ ಕನ್ನಡ ಸಂಸ್ಕೃತಿಯ ಪ್ರತಿರೋಧ’ ಕುರಿತು ಉಪನ್ಯಾಸ ನೀಡಿದರು.

‘ನಾಡಿನಲ್ಲಿ ವರ್ಣ ವ್ಯವಸ್ಥೆ ವಿರುದ್ಧವಾಗಿ ರಚನೆಗೊಂಡ ಕವಿರಾಜ ಮಾರ್ಗ ಮತ್ತು ವಿಕ್ರಮಾರ್ಜುನ ಚರಿತ್ರೆ ಗ್ರಂಥಗಳು ಮಾದರಿಯಾಗಿವೆ. ವಚನಕಾರರು, ದಾಸರು, ಸಾಹಿತಿಗಳು, ಕವಿಗಳು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ವಿಚಾರ, ಜ್ಞಾನ ಹಾಗೂ ಬುದ್ಧಿವಂತಿಕೆ ಇದೆ’ ಎಂದರು.

ADVERTISEMENT

‘ಸಂಸ್ಕೃತ, ತಮಿಳು, ಪರ್ಷಿಯಾ ಸೇರಿ ವಿವಿಧ ಭಾಷೆಗಳ ಸಮ್ಮಿಳಿತದಿಂದ ಕನ್ನಡ ಭಾಷೆ ಶ್ರೀಮಂತವಾಗಿದೆ. ಕನ್ನಡಿಗರು ಸದಾ ಭ್ರಾತೃತ್ವ ಹೊಂದಿದವರಾಗಿದ್ದಾರೆ. ಅನ್ಯಭಾಷಿಕರು ತಮ್ಮದಲ್ಲದ ಭಾಷೆಯನ್ನು ಸ್ಪುಟವಾಗಿ ಮಾತನಾಡುವುದಿಲ್ಲ. ಕನ್ನಡಿಗರು ಎಲ್ಲ ಭಾಷೆಗಳನ್ನು ಸ್ವಚ್ಛಂದವಾಗಿ ಮಾತನಾಡುವ ಹೃದಯ ವೈಶಾಲ್ಯತೆ ಇರುವವರು’ ಎಂದರು.

‘ಬುಡಕಟ್ಟು ಜನರ ಪ್ರೇರಣೆಯಿಂದ ಬುದ್ಧ ಸಮಾನತೆಯನ್ನು ಬೋಧಿಸಲು ಸಾಧ್ಯವಾಯಿತು. ಬುದ್ಧನ ಸಂದೇಶವನ್ನು ಮೆಚ್ಚಿದ ಅಶೋಕ ಬುದ್ಧನ ದೇಗುಲ ಕಟ್ಟಿಸಿದ. ನಂತರದಲ್ಲಿ ಬಸವಣ್ಣ ಸ್ಥಾವರ ದೇವರಲ್ಲ ವ್ಯಕ್ತಿ ತಾನೇ ದೇವರು ಎನ್ನುವುದನ್ನು ತಿಳಿಸಿದ. ಹೀಗೆ ನಮ್ಮ ನಾಡು ಬಹುತ್ವದ ಬೀಡು’ ಎಂದರು.

ದೇವಿಂದ್ರಪ್ಪ ಹೆಗಡೆ ಮಾತನಾಡಿದರು. ತತ್ವಪದಕಾರರು ಕುರಿತು ಸಾಹಿತಿ ನಟರಾಜ ಬೂದಿಹಾಳ ವಿಷಯ ಮಂಡಿಸಿದರು. ಶಿವಕುಮಾರ ಅಮ್ಮಾಪುರ, ಬಲಭೀಮ ದೇಸಾಯಿ, ಶ್ರೀನಿವಾಸ ಜಾಲವಾದಿ, ನಬಿಲಾಲ ಮಕಾನದಾರ, ಪೀರಬಾಷಾ ಗಂಗಾವತಿ, ಸಾಹೇಬಗೌಡ ಬಿರಾದಾರ, ಕನಕಪ್ಪ ವಾಗಣಗೇರಾ, ಮೂರ್ತಿ ಬೊಮ್ಮನಳ್ಳಿ, ಮೌನೇಶ ದೇಸಾಯಿ, ಬೀರಣ್ಣ ಆಲ್ದಾಳ, ಜೆ.ಅಗಸ್ಟಿನ್, ನಿಂಗಣ್ಣ ಚಿಂಚೋಡಿ, ಮಲ್ಲಿಕಾರ್ಜುನ ಹಿರೇಮಠ, ಆದಿಶೇಷ ನೀಲಗಾರ, ಕೃಷ್ಣಮೂರ್ತಿ ಕೈದಾಳ, ಉಸ್ತಾದ್ ವಜಾಹತ್ ಹುಸೇನ್, ಭೀಮಣ್ಣ ಅಂಚೆಸೂಗೂರು, ಮಲ್ಲಯ್ಯ ಕಮತಗಿ, ಡಾ.ಮಲ್ಲಿಕಾರ್ಜುನ ಕಮತಗಿ, ಡಾ.ಯಲ್ಲಪ್ಪನಾಯಕ ಗುಡ್ಡಕಾಯಿ ಇದ್ದರು. ಕನ್ನಡ ಬಹುತ್ವ ಭೂಮಿಕೆ ನಿರ್ದೇಶಕ ಸಿದ್ಧಯ್ಯ ಸ್ಥಾವರಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.