ADVERTISEMENT

ಮಕ್ಕಳ ಹಾಜರಾತಿ ಕಡ್ಡಾಯ: ಕೆಂಪರಂಗಯ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 8:20 IST
Last Updated 20 ಜುಲೈ 2013, 8:20 IST

ಕೆಂಭಾವಿ: ಶಾಲೆಗೆ ದಾಖಲಾಗಿರುವ ಮಗು ಕಡ್ಡಾಯವಾಗಿ ಶಾಲೆ ನಡೆಯುವ ಸಂದರ್ಭದಲ್ಲಿ ಹಾಜರಿರಬೇಕು. ಆ ಮಗು ಸರ್ಕಾರಿ ಶಾಲೆಯಲ್ಲಿ ದಾಖಲಾಗಿದ್ದು, ಖಾಸಗಿ ಶಾಲೆಗಳು ಮತ್ತು ಕೋಚಿಂಗ್ ಶಾಲೆಯಲ್ಲಿ ಕಂಡು ಬಂದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ತಿಳಿಸಿದರು.

ಪಟ್ಟಣದ ಸಮನ್ವಯ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿಯೊಬ್ಬ ಶಿಕ್ಷಕರು ಶಾಲೆಯಿಂದ ಮಗು ಹೊರಗುಳಿಯದಂತೆ ನೋಡಿಕೊಳ್ಳಬೇಕು. ಬಿಸಿಯೂಟ ಮಾಡುವಾಗ ವಿಶೇಷ ಜಾಗ್ರತೆ ವಹಿಸಬೇಕು. ಮೊದಲು ಶಿಕ್ಷಕರು ಊಟ ಮಾಡಿ ನಂತರ ಮಕ್ಕಳಿಗೆ ಊಟ ಬಡಿಸಬೇಕು. ಮಕ್ಕಳು ಬಾಲ ಕಾರ್ಮಿಕರಾಗದಂತೆ ನೋಡಿ ಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಜಿಲ್ಲಾ ಸಮನ್ವಯ ಅಧಿಕಾರಿ ಶಾಂತಗೌಡ ಪಾಟೀಲ, ಯಾವ ಶಾಲೆಗಳಲ್ಲಿ ಕಟ್ಟಡ ಕಾಮಗಾರಿ ನಡೆದಿಲ್ಲವೋ, ಅಂತಹ ಕಾಮಗಾರಿಗಳನ್ನು ಶೀಘ್ರ ಮುಗಿಸಿ ವರದಿ ಕೊಡಬೇಕು.

6 ತಿಂಗಳಿಗಿಂತ ಹೆಚ್ಚು ಕಾಲ ತೆಗೆದುಕೊಂಡರೆ ಕೆಲಸಗಳನ್ನು ನಿರ್ವಹಿಸದ ಶಾಲೆಯ ಹಣವನ್ನು ಬೇರೆ ಶಾಲೆಗೆ ವರ್ಗಾಯಿಸಲಾಗುವುದು. ಮುಖ್ಯೋಪಾಧ್ಯಾಯರು ವಿಶೇಷ ಗಮನಹರಿಸಬೇಕು. ಕಳಪೆ ಕಾಮಗಾರಿ ನಡೆಸಿದ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಂಭಾವಿ ಕನ್ಯಾ ಪ್ರಾಥಮಿಕ ಶಾಲೆಯ ಕಟ್ಟಡ ಕಟ್ಟದೇ ಹಣ ದುರುಪಯೋಗ ಪಡಿಸಿಕೊಂಡ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ. ವೇತನದಲ್ಲಿ ಹಣ ಕಡಿತ ಮಾಡಿ ಕಾಮಗಾರಿ ನಿರ್ವಹಿಸಲಾಗುವುದು. ಕಿರದಳ್ಳಿ ರಸ್ತಾ ಶಾಲೆಯ ಕಟ್ಟಡ ನಿರ್ಮಾಣ ಕಳೆದ 2 ವರ್ಷಗಳಿಂದ ಮುಗಿಯುತ್ತಿಲ್ಲ. ಈ ಹಣವನ್ನು ಬೇರೆಡೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು. ಬಿಆರ್‌ಸಿ ಚಂದ್ರು, ಸಿಆರ್‌ಸಿಗಳಾದ ಬಂದೇನವಾಜ್ ನಾಲತವಾಡ್, ಮಲ್ಲಣ್ಣ ಸುರಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.