ADVERTISEMENT

ಮಳೆಗೆ ಮುದುಡಿದ ಹತ್ತಿ; ನೆಲಕಚ್ಚಿದ ಭತ್ತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 10:15 IST
Last Updated 15 ಅಕ್ಟೋಬರ್ 2017, 10:15 IST
ಗುರಸಣಗಿ ಸಮೀಪದ ಹತ್ತಿ ಹೊಲದಲ್ಲಿ ಮೊಳಕಾಲುಮಟ್ಟ ನೀರು ಸಂಗ್ರಹಗೊಂಡಿದೆ
ಗುರಸಣಗಿ ಸಮೀಪದ ಹತ್ತಿ ಹೊಲದಲ್ಲಿ ಮೊಳಕಾಲುಮಟ್ಟ ನೀರು ಸಂಗ್ರಹಗೊಂಡಿದೆ   

ಯಾದಗಿರಿ: ನಿರಂತರ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಕೆರೆಕಟ್ಟೆಗಳು ತುಂಬಿದ್ದು, ಶಹಾಪುರ ತಾಲ್ಲೂಕಿನ ಖಾನಾಪುರ ಕೆರೆ ಕೋಡಿ ಬಿದ್ದಿದೆ. ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ಯಾದಗಿರಿ ತಾಲ್ಲೂಕಿನ ಗುರಸಣಗಿ, ನಾಯ್ಕಲ್, ಚಟ್ನಳ್ಳಿ, ಮಗನಾಲ ಸೇರಿದಂತೆ ಭೀಮಾ ನದಿ ಪಾತ್ರದಲ್ಲಿ ರೈತರು ಬೆಳೆದಿರುವ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೊಯ್ಲು ಹಂತ ತಲುಪಿದ್ದ ಭತ್ತದ ಬೆಳೆ ನೆಲಕಚ್ಚಿದೆ.

ನಿರಂತರ ಮಳೆ ಕಾರಣ ಜಿಲ್ಲೆಯಲ್ಲಿ ಬಹುತೇಕ ಹತ್ತಿ ಹೊಲಗಳಲ್ಲಿ ಮೊಳಕಾಲುಮಟ್ಟ ನೀರು ಸಂಗ್ರಹಗೊಂಡಿದೆ. ಅರಳಿದ್ದ ಹತ್ತಿ ಮಳೆಗೆ ಮುದುಡಿಕೊಂಡಿದ್ದು, ಹತ್ತಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

‘ಒಂದು ವಾರ ಮಳೆ ಬರದಿದ್ದರೆ ಹತ್ತಿ ಬಿಡಿಸಿಟ್ಟುಕೊಳ್ಳುತ್ತಿದ್ದೆವು. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ’ ಎಂದು ಗುರಸಣಗಿ ಗ್ರಾಮದ ರೈತರು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಜಿ.ರಮೇಶ್ 20 ಎಕರೆ, ಎ.ಎನ್.ನಾಗೇಶ್ವರರಾವ್ 25 ಎಕರೆ, ಎ.ವೆಂಕಟೇಶ್ವರರಾವ್ 20 ಎಕರೆ, ಶ್ರೀನಿವಾಸ್ 50 ಎಕರೆ, ವಿ.ನಾಗೇಶ್ವರರಾವ್ 25 ಎಕರೆ, ಗೋಪಿ 30 ಎಕರೆ, ವೆಂಕಟರಾಜು 60 ಎಕರೆ, ರಾಜಾಸಾಬ್ 3 ಎಕರೆ, ನರಸಪ್ಪ 6 ಎಕರೆ ಹಾಗೂ ಯಾದಗಿರಿ ಕಸಬದ ಶ್ರೀನಿವಾಸ 40 ಎಕರೆ, ರೆಡ್ಡಿಸೀನ 40 ಎಕರೆ, ಬಿ. ಪರಮೇಶ್ವರರಾವ್ 50 ಎಕರೆಯಷ್ಟು ಭತ್ತದ ಬೆಳೆ ಮಳೆಗಾಳಿಗೆ ನೆಲಕಚ್ಚಿದ್ದು, ಲಕ್ಷಾಂತರ ಬೆಳೆಹಾನಿ ಸಂಭವಿಸಿದೆ.

131 ಮನೆಗಳು ಕುಸಿತ: ನಿರಂತರ ಮಳೆಗೆ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 131 ಮನೆಗಳು ಕುಸಿದಿವೆ. ಪ್ರಕೃತಿ ವಿಕೋಪ ಹಾನಿ ಕುರಿತು ಜಿಲ್ಲೆಯಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿದ್ದು, ಕುಸಿದಿರುವ ಮನೆಗಳ ಸಂಖ್ಯೆ ಮತ್ತಷ್ಟೂ ಹೆಚ್ಚುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾದಗಿರಿ ತಾಲ್ಲೂಕಿನಲ್ಲಿ 20, ಶಹಾಪುರ ತಾಲ್ಲೂಕಿನಲ್ಲಿ 61, ಸುರಪುರ ತಾಲ್ಲೂಕಿನಲ್ಲಿ 35, ಹುಣಸಗಿ ನೂತನ ತಾಲ್ಲೂಕಿನಲ್ಲಿ 15 ಮನೆಗಳು ಕುಸಿದಿರುವುದಾಗಿ ಕಂದಾಯ ಇಲಾಖೆ ನಡೆಸಿರುವ ಸರ್ವೆ ವರದಿ ತಿಳಿಸಿದೆ. ಬೆಳೆಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸರ್ವೆ ಕಾರ್ಯ ಮುಂದುವರಿದಿದೆ. ಜಿಲ್ಲೆಯಲ್ಲಿ ಭೀಮಾ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗುರಸಣಗಿ ಬ್ಯಾರೇಜ್, ಗೂಗಲ್, ಸನ್ನತಿ, ಜೋಳದಡಗಿ ಬಾರೇಜುಗಳು ತುಂಬಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.