ADVERTISEMENT

ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:15 IST
Last Updated 7 ಫೆಬ್ರುವರಿ 2012, 9:15 IST

ಯಾದಗಿರಿ:  ಶಹಾಪುರ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ವಡಿಗೇರಾ ಹಲವಾರು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮದ ಜನರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಶೌಚಾಲಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವಡಿಗೇರ ವಿಶೇಷ ತಹಸೀಲ್ದಾರ ಕಚೇರಿ ಹೊಂದಿದೆ. ಆದರೆ ಶೌಚಾಲಯಗಳಿಲ್ಲದೇ ನಿತ್ಯವೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಬೇಕಾದ ಅತ್ಯಂತ ಕನಿಷ್ಠ ಸೌಲಭ್ಯಗಳನ್ನೂ ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ಮನೆಗಳಲ್ಲಿ ಮಾತ್ರ ಲಕ್ಷ ಲಕ್ಷ ಖರ್ಚು ಮಾಡಿ ಹೊರದೇಶದ ರೀತಿಯ ಶೌಚಾಲಯ ನಿರ್ಮಿಸಿಕೊಂಡು ಒಳ್ಳೆಯ ಬದುಕು ನಡೆಸುತ್ತಿರುವ ಜನಪ್ರತಿನಿಧಿಗಳು, ಗ್ರಾಮೀಣ ಮಹಿಳೆಯರ ಕಷ್ಟಗಳನ್ನುಅರಿತುಕೊಳ್ಳಬೇಕು. ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದು. ಅಧಿಕಾರಿಗಳು ಮಾತ್ರ ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದೆ.

ಹಳೆಯ ಕಾಲದ ಅಲ್ಲೊಂದು, ಇಲ್ಲೊಂದು ಶೌಚಾಲಯವಿದ್ದು, ಸುತ್ತಲೂ ಜಾಲಿಗಿಡ ಬೆಳೆದು ನಿಂತಿವೆ. ಹೊಸ ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳನ್ನು ಕೇಳಿದರೆ, ಜಾಗವಿಲ್ಲ ಎಂಬ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಕೂಡಲೇ ಹೊಸ ಶೌಚಾಲಯ ನಿರ್ಮಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧ್ಯಕ್ಷ ನಿಂಗಣ್ಣ ಜಡಿ, ಬಸ್ಸುಗೌಡ ತೆಗ್ಗಿನಮನಿ, ದೇವಿಂದ್ರ ಗೊರೂರ, ಗಂಗಾಧರ ವಿಶ್ವಕರ್ಮ, ದೇವಿಂದ್ರ ಜಡಿ, ಲಕ್ಷ್ಮಣ ಟೇಲರ್, ದೇವರಾಜ ವರ್ಕನಳ್ಳಿ, ಶಿವುಕುಮಾರ ಬಾಗೂರ, ಜಂಬಣ್ಣ ಸುಂಕೆಶರಾಳ, ಸೋಮನಾಥ ಕೊಡಲ್, ವಿದ್ಯಾಧರ ಎಸ್, ಮಲ್ಲಿಕಾರ್ಜುನ ಜಡಿ, ಅಪ್ಪಣ್ಣ ಎಚ್. ಮುಂತಾದವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.