ADVERTISEMENT

ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಮಳೆ: ಕೇಂದ್ರ ಸ್ಥಾನ ಬಿಡದಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 8:40 IST
Last Updated 9 ಜೂನ್ 2018, 8:40 IST
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಕೆರೆ ತುಂಬಿರುವುದು
ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ ಕೆರೆ ತುಂಬಿರುವುದು   

ಶಹಾಪುರ: ಮುಂಗಾರು ಮಳೆ ಆರಂಭವಾಗಿದ್ದು, ಕಂದಾಯ ಇಲಾಖೆಯು ಸಕಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

ತಾಲ್ಲೂಕಿನ ಕೃಷ್ಣಾ ನದಿ 32 ಹಾಗೂ ಭೀಮಾ ನದಿ ಪಾತ್ರದಲ್ಲಿ 28 ಹಳ್ಳಿಗಳು ಬರುತ್ತವೆ. ಸದ್ಯಕ್ಕೆ ಅವಘಡ ತರುವಂತಹ ಮಳೆಯಾಗಿಲ್ಲ. ನದಿಯಲ್ಲಿಯೂ ನೀರಿನ ಹರಿವು ಪ್ರಮಾಣ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ನದಿ ಪಾತ್ರದ ಹಳ್ಳಿಯ ಗ್ರಾಮಸ್ಥರು ಜಾಗೃತರಾಗಿರುವಂತೆ ಸೂಚಿಸಲಾಗಿದೆ ಎಂದರು.

ತಾಲ್ಲೂಕಿನ ಕೊಳ್ಳೂರ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಹೆಚ್ಚಿನ ನಿಗಾ ಇಡಲಾಗಿದೆ. ಕೃಷ್ಣಾ ನದಿಗೆ ನೀರಿನ ಹರಿವು ಹೆಚ್ಚಾದಂತೆ ಸೇತುವೆ ಮೇಲೆ ನೀರು ಬರುವುದು ಪ್ರತಿ ವರ್ಷ ಸಾಮಾನ್ಯವಾಗಿದೆ. ಅದರಂತೆ ತಾಲ್ಲೂಕಿನ ಹುರುಸಗುಂಡಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸನ್ನತಿ ಬ್ರೀಜ್ ಕಂ ಬ್ಯಾರೇಜ್‌ನ ಹಿನ್ನೀರು ಸಂಗ್ರಹವಾದರೆ ಗ್ರಾಮದ ಒಳಗಡೆ ನುಗ್ಗುವ ಭೀತಿ ಇದೆ. ಇದರ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಹೆಚ್ಚುವರಿ ನೀರು ನದಿಗೆ ಬಂದರೆ ಬ್ಯಾರೇಜ್ ಗೇಟ್ ಎತ್ತರಿಸುವ ಬಗ್ಗೆ ಕಂದಾಯ ನಿರೀಕ್ಷಕ ಅಧಿಕಾರಿಗೆ ಸೂಚಿಸಿದೆ ಎಂದರು.

ADVERTISEMENT

ತಾಲ್ಲೂಕಿನ ಸಗರ ಗ್ರಾಮದ ಶಂಕರನಾರಾಯಣ ಕೆರೆ, ಗುಂಡಳ್ಳಿ ಕೆರೆ, ರಸ್ತಾಪುರ ಕೆರೆಯಲ್ಲಿ ಕಾಲುವೆ ಹೆಚ್ಚುವರಿ ನೀರು ಇನ್ನೂ ಇದೆ. ಮಳೆಯಿಂದ ನಿರೀಕ್ಷಿತಮಟ್ಟದಲ್ಲಿ ನೀರು ಸಂಗ್ರಹವಾಗಿಲ್ಲ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಆದರೆ, ತಾಲ್ಲೂಕಿನ ಮುಡಬೂಳ ಗ್ರಾಮದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಿದೆ. ಹೆಚ್ಚುವರಿ ನೀರು ಸಾಗಲು ವ್ಯವಸ್ಥೆ ಕಲ್ಪಿಸಬೇಕು. ಕೆರೆ ನೀರು ಯಾವುದೇ ಸಂದರ್ಭದಲ್ಲಿ ಅಪಾಯಮಟ್ಟಕ್ಕೆ ತಲುಪುವ ಭೀತಿ ಇದೆ. ಇಲ್ಲದೆ ಹೋದರೆ ಮಹಾಂತ ನಗರ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ನೀರು ನುಗ್ಗುವ ಅಪಾಯವಿದೆ ಎಂದು ಗ್ರಾಮದ ಮುಖಂಡ ಅಶೋಕ ಮಲ್ಲಾಬಾದಿ ತಿಳಿಸಿದರು.

ಉತ್ತಮ ಮಳೆ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆಯ ಕಾರ್ಯ ಚುರುಕುಗೊಂಡಿದೆ. ಜೂನ್ ತಿಂಗಳಲ್ಲಿ ವಾಡಿಕೆಯಂತೆ 123 ಮಿ.ಮೀ ಮಳೆ ನಿರೀಕ್ಷಿಸಲಾಗಿದೆ. ಈಗಾಗಲೇ ಜೂನ್ 8ವರೆಗೆ 81 ಮಿ.ಮೀ ಮಳೆ ಬಂದಿದೆ. ಅಲ್ಲದೆ ಜುಲೈ ತಿಂಗಳಲ್ಲಿ 163 ಮಿ.ಮೀ ಮಳೆ ನಿರೀಕ್ಷೆ ಮಾಡಲಾಗಿದೆ. ಮಳೆಯಿಂದ ಯಾವುದೇ ಹಾನಿ ಉಂಟಾಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ದಾನಪ್ಪ ಕತ್ನಳ್ಳಿ ತಿಳಿಸಿದ್ದಾರೆ.

ನಗರದ 23 ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಹೂಳು ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯ ಸಾಗಿದೆ. ಅಲ್ಲದೆ ತರಕಾರಿ ಮಾರುಕಟ್ಟೆ, ಬಸವೇಶ್ವರ ವೃತ್ತದ ಬಳಿಯ ರಾಜಕಾಲುವೆ ಮತ್ತು ಹಳೆ ಬಸ್ ನಿಲ್ದಾಣದ ಹಿಂದುಗಡೆ ಹರಿಯುವ ಹಳ್ಳವನ್ನು ಸ್ವಚ್ಛಗೊಳಿಸಲಾಗಿದೆ. ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಬಸವರಾಜ ಶಿವಪೂಜೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.