ADVERTISEMENT

ಮೂಲಸೌಕರ್ಯ ಚಿಗುರದ ‘ಚಿಗರಿ’ಹಾಳ

​ಪ್ರಜಾವಾಣಿ ವಾರ್ತೆ
Published 20 ಮೇ 2014, 11:30 IST
Last Updated 20 ಮೇ 2014, 11:30 IST
ಸುರಪುರ ತಾಲ್ಲೂಕಿನ ಚಿಗರಿಹಾಳ ಗ್ರಾಮದಲ್ಲಿನ ನೀರಿನ ಟ್ಯಾಂಕ್‌ ಉಪಯೋಗವಿಲ್ಲದೇ ಹಾಳಾಗಿರುವುದು
ಸುರಪುರ ತಾಲ್ಲೂಕಿನ ಚಿಗರಿಹಾಳ ಗ್ರಾಮದಲ್ಲಿನ ನೀರಿನ ಟ್ಯಾಂಕ್‌ ಉಪಯೋಗವಿಲ್ಲದೇ ಹಾಳಾಗಿರುವುದು   

ಸುರಪುರ: ಈ ಗ್ರಾಮ ಒಂದು ಕಾಲದಲ್ಲಿ ದಟ್ಟಾರಣ್ಯವಾಗಿತ್ತು. ಚಿಗರೆ (ಜಿಂಕೆ)ಗಳು ಇಲ್ಲಿ ಹೇರಳವಾಗಿ ವಾಸಿಸುತ್ತಿದ್ದವು. ಅಂತೆಯೇ ಈ ಗ್ರಾಮಕ್ಕೆ ಚಿಗರಿಹಾಳ ಎಂಬ ಹೆಸರು ಬಂತು. ಕ್ರಮೇಣ ನಾಗರಿಕತೆ ಬೆಳೆಯುತ್ತಿದ್ದಂತೆ ಕಾಡು ಗ್ರಾಮ ಆಗಿ ಬದಲಾಯಿತು. ಜಿಂಕೆಗಳು ಈಗ ಹುಡುಕಿದರೂ ಸಿಗುವುದಿಲ್ಲ.

ಮಾಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದ ಜನಸಂಖ್ಯೆ 1500ಕ್ಕೂ ಹೆಚ್ಚು ಇದೆ. ಇಬ್ಬರು ಸದಸ್ಯರಿದ್ದಾರೆ. ವಿವಿಧ ಜಾತಿಯ ಜನಾಂಗದವರು ಇಲ್ಲಿ ವಾಸಿಸುತ್ತಾರೆ. ಸೌಹಾರ್ದತೆ, ಭ್ರಾತೃತ್ವ ಕಾಪಾಡಿಕೊಂಡು ಬಂದಿದ್ದಾರೆ. ಮಾದರಿ ಗ್ರಾಮವಾಗಿರುವ ಇದಕ್ಕೆ ಮೂಲಸೌಕರ್ಯಗಳು ಮಾತ್ರ ಗಗನ ಕುಸುಮ.

ಗ್ರಾಮದ ಜನ ಬಯಲು ಶೌಚವನ್ನೇ ಅವಲಂಬಿಸಿದ್ದಾರೆ. ಕನಿಷ್ಠ ಮಹಿಳಾ ಶೌಚಾಲಯ ನಿರ್ಮಿಸಬೇಕೆಂಬ ಸೌಜನ್ಯ ಪಂಚಾಯಿತಿಗೆ ಇಲ್ಲ. ಇದರಿಂದ ಎಲ್ಲೆಂದರಲ್ಲಿ ಮಲಮೂತ್ರವೇ ಕಾಣಿಸುತ್ತದೆ. ಸಾಲದ್ದಕ್ಕೆ ಗ್ರಾಮದ ತುಂಬೆಲ್ಲ ತಿಪ್ಪೆಗುಂಡಿಗಳು. ಸಿ.ಸಿ. ರಸ್ತೆ, ಚರಂಡಿ ಗ್ರಾಮಕ್ಕೆ ಸುಳಿದಿಲ್ಲ. ಇದರಿಂದ ಮಲೀನತೆ ಇಲ್ಲಿ ಸಾಮಾನ್ಯ. ಮಳೆ ಬಂದರಂತೂ ಜನರ ಪರದಾಟ ಹೇಳತೀರದು. ಸೊಳ್ಳೆಗಳ ಕಾಟ ಅಧಿಕ. ಸಂಜೆ ಹೊತ್ತು ಸೊಳ್ಳೆಗಳು ಜೇನುನೋಣಗಳಂತೆ ಮುತ್ತಿಕೊಳ್ಳುತ್ತವೆ.

ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟುವ ಅನಿವಾರ್ಯತೆ. ಫಾಗಿಂಗ್ ಎಂದರೆ ಏನೆಂದು ಜನರಿಗೆ ಗೊತ್ತಿಲ್ಲ.

ಗ್ರಾಮ ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ತಗ್ಗು ಪ್ರದೇಶದಲ್ಲಿ ಇರುವುದರಿಂದ ಜೌಗು ಇರುತ್ತದೆ. ತಗ್ಗು– ದಿನ್ನೆಗಳಲ್ಲಿ ನೀರು ನಿಲ್ಲುವುದರಿಂದ ಅವು ರೋಗ ಹರಡುವ ತಾಣಗಳಾಗಿವೆ.

ಆಶ್ರಯ ಯೋಜನೆ ಇಲ್ಲಿ ವಿಫಲವಾಗಿದೆ. ಗುಡಿಸಲುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಯೋಜನೆಯ ಹಣವನ್ನು ಗುಳುಂ ಮಾಡಲಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಅಂಗನವಾಡಿ ಕೇಂದ್ರ ಹಳೆಯ ಕಟ್ಟಡದಲ್ಲಿ ನಡೆಯುತ್ತದೆ. ಮಕ್ಕಳು ಅಪಾಯ ಎದುರಿಸು­ವಂತಾಗಿದೆ. ವಿದ್ಯುತ್ ಸಮಸ್ಯೆ ಗಂಭೀರವಾಗಿದೆ. ರಾತ್ರಿ ಸಮಯದಲ್ಲಿ ಹಾವು ಚೇಳುಗಳ ಕಾಟದಿಂದ ಜನ ಭಯ ಭೀತಿಯಲ್ಲಿ ಬದುಕುವಂತಾಗಿದೆ.

ಕಿರು ನೀರು ಸರಬರಾಜು ಇದ್ದರೂ ಇಲ್ಲದಂತಿದೆ. ಆಗಾಗ ಅರ್ಧ ಗ್ರಾಮಕ್ಕೆ ಮಾತ್ರ ನೀರು ಸರಬರಾಜು ಆಗುತ್ತದೆ. ಕೊಳವೆಬಾವಿ ಕೆಟ್ಟು ಹೋಗಿವೆ. ಇರುವ ಏಕೈಕ ಬಾವಿಯ ನೀರು ಮಲೀನವಾಗಿದೆ. ಜನ ಕುಡಿವ ನೀರಿಗೆ ಪರದಾಡುವಂತಾಗಿದೆ.

ಗ್ರಾಮದ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವುದರಿಂದ ಜನ ನೀರು ಕುಡಿಯಲು ಭಯ ಪಡುವಂತಾಗಿದೆ. ಪುಣ್ಯಕ್ಕೆ ನೀರು ಶುದ್ಧೀಕರಣ ಘಟಕ ಕೆಲ ದಿನಗಳ ಹಿಂದೆ ಆರಂಭವಾಗಿದೆ. ಈ ನೀರನ್ನು ನೀರು ಮಾರಾಟ ಮಾಡುವ ವ್ಯಾಪಾರಿಗಳಿಗೆ ಮಾರಲಾಗುತ್ತದೆ ಎಂಬ ಆರೋಪಗಳು ಕೇಳಿ ಬರುತ್ತವೆ.

ಗ್ರಾಮದ ಎಲ್ಲ ರಸ್ತೆಗಳು ಕೆಟ್ಟು ಹೋಗಿವೆ. ಮುಖ್ಯ ರಸ್ತೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಜನ ತಿರುಗಾಡಲು ತೊಂದರೆ ಅನುಭವಿಸುವಂತಾಗಿದೆ. ವಾಹನಗಳನ್ನು ಇಲ್ಲಿ ಓಡಿಸಲು ಸಾಧ್ಯವಿಲ್ಲ. ವಿದ್ಯುತ್‌ ಪರಿವರ್ತಕ (ಟಿ.ಸಿ.) ಮನೆಗಳಿಗೆ ಹತ್ತಿಕೊಂಡೆ ಇದೆ. ಅಪಾಯಕಾರಿಯಾಗಿರುವ ಇದನ್ನು ಸ್ಥಳಾಂತರಿಸಬೇಕು ಮತ್ತು ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

‘ನರಕದ ಜೀವನ ನಮ್ಮದು’
‘ಚಿಗರಿಹಾಳ ಗ್ರಾಮ ಸೌಕರ್ಯಗಳಿಲ್ಲದೆ ನರಳು­ತ್ತಿದೆ. ಸಾಕಷ್ಟು ಅನುದಾನ ಬಂದರೂ ಸದ್ಬಳಕೆ ಆಗಿಲ್ಲ. ಗ್ರಾಮದಲ್ಲಿ ವಾಸಿಸಲೂ ಮನಸ್ಸಾಗುತ್ತಿಲ್ಲ. ನರಕದ ಜೀವನ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿ ಕಡೆ ಮನಸ್ಸು ಮಾಡದಿರುವುದು ನಮ್ಮ ದುರಂತ’.
–ಚಂದ್ರಶೇಖರ ದೊರೆ, ಗ್ರಾಮದ ಯುವಕ

‘ಮೂಲಸೌಕರ್ಯ ಒದಗಿಸಲು ಯತ್ನ’
‘ಗ್ರಾಮಕ್ಕೆ ಸಿ.ಸಿ. ರಸ್ತೆ, ಚರಂಡಿ, ಕುಡಿವ ನೀರು ಒದಗಿಸಬೇಕೆಂದು ಸಭೆಯಲ್ಲಿ ಹಲವು ಬಾರಿ ಒತ್ತಾಯಿಸಿದ್ದೇನೆ. ಆದರೂ ಅಧಿಕಾರಿಗಳು ಕ್ಯಾರೆ ಅಂದಿಲ್ಲ. ಪ್ರಭಾವಿ ಜನಪ್ರತಿನಿಧಿಗಳಿಗೆ ಮಾತ್ರ ಬೆಲೆ ಕೊಡುತ್ತಾರೆ. ಆದರೂ ಮೂಲಸೌಕರ್ಯ ಒದಗಿಸಲು ಪ್ರಯತ್ನ ಮುಂದುವರೆಸುವೆ’.    
–ಹಣಮಂತ್ರಾಯ, ಗ್ರಾಮ ಪಂ ಸದಸ್ಯ

‘ಶೌಚಾಲಯ ನಿರ್ಮಿಸಲು ಒತ್ತಾಯ’
ಗ್ರಾಮದ  ಮಹಿಳೆಯರು ಶೌಚಕ್ಕೆ ಹೊರಗಡೆ ಹೋಗುವುದು ನಮಗೆ ನಾಚಿಕೆಗೇಡು. ಮಹಿಳಾ ಶೌಚಾಲಯ ಶೀಘ್ರದಲ್ಲಿ ನಿರ್ಮಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಹಿರಿಯ ಅಧಿಕಾರಿಗಳನ್ನು ಕಂಡು ಈ ಬಗ್ಗೆ ಮಾತನಾಡುತ್ತೇನೆ.
–ದೇವಕೆಮ್ಮ ಗೋಸಿ, ಗ್ರಾಮ ಪಂ ಸದಸ್ಯೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.