ADVERTISEMENT

ಯಾದಗಿರಿಯಲ್ಲಿ 17 ಅಕ್ಕಿ ಗಿರಣಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:58 IST
Last Updated 17 ಡಿಸೆಂಬರ್ 2013, 5:58 IST

ಯಾದಗಿರಿ: ಸರ್ಕಾರದ ಲೇವಿ ನೀತಿಯನ್ನು ಖಂಡಿಸಿ ಅಕ್ಕಿ ಗಿರಣಿ ಮಾಲೀಕರ ಸಂಘದ ವತಿಯಿಂದ ಸೋಮವಾರ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭವಾಗಿದೆ. ಅಕ್ಕಿ ಗಿರಣಿಗಳನ್ನು ಬಂದ್‌ ಮಾಡಿದ ಮಾಲೀಕರು, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಾಯಕ್‌ ಹುಸೇನ್‌ ಬಾದಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ 17 ಅಕ್ಕಿ ಗಿರಣಿ­ಗಳಿದ್ದು, ರಾಜ್ಯ ಅಕ್ಕಿ ಗಿರಣಿದಾರರ ಸಂಘ ಕರೆ ನೀಡಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನೆ ಬೆಂಬಲಿಸಿ ಜಿಲ್ಲೆಯ ಎಲ್ಲ ಅಕ್ಕಿ ಗಿರಣಿಗಳು ಮತ್ತು ಕೃಷಿ ಸಂಸ್ಕರಣ ಘಟಕಗಳು ಸೋಮವಾರದಿಂದ ಅನಿರ್ದಿ­ಷ್ಟಾವಧಿಯ ಮುಷ್ಕರ ಆರಂಭಿಸಿವೆ.

ಪ್ರತಿ ವರ್ಷ ಸರ್ಕಾರ ಅಕ್ಕಿ ಗಿರಣಿದಾರರ ಜೊತೆ ಸಭೆ ನಡೆಸಿ, ಲೇವಿ ಅಕ್ಕಿಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿತ್ತು. ಆದರೆ ಈ ಬಾರಿ ಸರ್ಕಾರ ಯಾವುದೇ ಸಭೆ ನಡೆಸದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದು­ಕೊಂಡಿದೆ. ಇದರಿಂದ ಗಿರಣಿ ಮಾಲೀಕ­ರಿಗೆ ತೀವ್ರ ಹಾನಿಯಾಗು­ತ್ತದೆ. ಗಿರಣಿ­ದಾರರ ಜೊತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಕ್ಕಿ ಗಿರಣಿ ಮಾಲೀಕರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ, ಬೇಡಿಕೆ­ಯನ್ನು ಸರ್ಕಾರಕ್ಕೆ ಕಳುಹಿಸಲಾಗು­ವುದು. ಪ್ರತಿಭಟನೆ ಶಾಂತಿಯುತವಾಗ ನಡೆಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮೌಲಾಲಿ ಅನಪುರ, ಮಹ್ಮದ್ ರಶೀದ್, ಹನುಮಾನದಾಸ ಮುಂದಡಾ, ವೀರಭದ್ರಯ್ಯ ಸ್ವಾಮಿ, ಬಸವರಾಜ ಸಜ್ಜನ್, ವಿಜಯ ದಿಗ್ಗಾಯಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT