ADVERTISEMENT

ಯಾದಗಿರಿ: ಕುಸಿಯುತ್ತಿರುವ ಬಸ್ ನಿಲ್ದಾಣ

ನಗರ ಸಂಚಾರ

ಚಿದಂಬರಪ್ರಸಾದ್
Published 8 ಜುಲೈ 2013, 10:16 IST
Last Updated 8 ಜುಲೈ 2013, 10:16 IST
ಯಾದಗಿರಿಯ ಗಾಂಧಿ ವೃತ್ತದಲ್ಲಿರುವ ಬಸ್ ನಿಲ್ದಾಣದ ಛಾವಣಿ ಕುಸಿಯುತ್ತಿದೆ
ಯಾದಗಿರಿಯ ಗಾಂಧಿ ವೃತ್ತದಲ್ಲಿರುವ ಬಸ್ ನಿಲ್ದಾಣದ ಛಾವಣಿ ಕುಸಿಯುತ್ತಿದೆ   

ಯಾದಗಿರಿ: ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಮಳೆ, ಬಿಸಿಲುಗಳಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ನಿರ್ಮಿಸಲಾಗಿರುವ ಬಸ್ ನಿಲ್ದಾಣಗಳು, ಇದೀಗ ಜನರಿಗೆ ಭಯವನ್ನು ಉಂಟು ಮಾಡುವ ತಾಣಗಳಾಗುತ್ತಿವೆ.

ನಗರದ ಗಾಂಧಿ ವೃತ್ತದಲ್ಲಿರುವ ಬಸ್ ನಿಲ್ದಾಣ ಇದಕ್ಕೊಂದು ಉತ್ತಮ ನಿದರ್ಶನ. ತೀರ ಹಳೆಯದಾದ ಈ ಬಸ್ ನಿಲ್ದಾಣದಲ್ಲಿ ನಿತ್ಯ ನೂರಾರು ಜನರು ಬಸ್‌ಗಾಗಿ ಕಾಯುತ್ತಾರೆ. ಆದರೆ ಈ ಬಸ್‌ನಿಲ್ದಾಣದ ಛಾವಣಿಯು ಕುಸಿಯುತ್ತಿದ್ದು, ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿವೆ ಎನ್ನುವ ಆತಂಕ ಪ್ರಯಾಣಿಕರದ್ದು.

ನಗರದ ಜನನಿಬಿಡ ಹಾಗೂ ಮಾರುಕಟ್ಟೆ ಸ್ಥಳವಾದ ಗಾಂಧಿ ವೃತ್ತದಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಮಾರುಕಟ್ಟೆ ಸ್ಥಳವಾಗಿರುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಇಲ್ಲಿಗೆ ಬರುತ್ತಾರೆ. ಕಳೆದ ಕೆಲ ತಿಂಗಳ ಹಿಂದೆ ಗಿರಿನಗರ ಸಾರಿಗೆ ಬಸ್‌ಗಳನ್ನು ಆರಂಭಿಸಿರುವುದರಿಂದ ಬಹಳಷ್ಟು ಪ್ರಯಾಣಿಕರು ಇಲ್ಲಿ ಬಸ್‌ಗಾಗಿಯೇ ಕಾಯುತ್ತಾರೆ.

`ಆದರೆ ಕಳೆದ ಕೆಲ ದಿನಗಳ ಹಿಂದೆ ಈ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಾಲಕನೊಬ್ಬನ ಮೇಲೆ ಮೇಲ್ಛಾವಣಿಯ ಸಿಮೆಂಟ್ ಕುಸಿದು ಬಿದ್ದಿದೆ. ಇದರಿಂದ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರೆಲ್ಲರೂ ಆತಂಕದಿಂದ ಆಚೆಗೆ ಓಡಿ ಬರುವಂತಾಯಿತು' ಎಂದು ವಕೀಲ ನಾಗರಾಜ ಬೀರನೂರ ಹೇಳುತ್ತಾರೆ.

ಗಾಂಧಿ ವೃತ್ತವು ಹಳೆ ಯಾದಗಿರಿಯ ಪ್ರಮುಖ ಸ್ಥಳವಾಗಿದೆ. ನಗರ ಬೆಳೆದಿದ್ದರೂ, ಇಂದಿಗೂ ಬಹುತೇಕ ಜನರು ಮಾರುಕಟ್ಟೆಗಾಗಿ ಇಲ್ಲಿಯೇ ಬರುತ್ತಾರೆ. ಮೊದಲು ಆಟೊ ರಿಕ್ಷಾಗಳಲ್ಲಿ ಪ್ರಯಾಣಿಸುತ್ತಿದ್ದ ಜನರು, ಇದೀಗ ಗಿರಿನಗರ ಸಾರಿಗೆ ಬಸ್‌ಗಳಿಗಾಗಿ ಕಾದು ಕುಳಿತಿರುತ್ತಾರೆ. ಮೊದಲೇ ಇಕ್ಕಟ್ಟಾದ ರಸ್ತೆ ಇರುವುದರಿಂದ ಅಕ್ಕಪಕ್ಕದಲ್ಲಿ ಬೇರೆ ಜಾಗೆಗಳೂ ಇಲ್ಲದಾಗಿವೆ.

ಹೀಗಾಗಿ ಅನಿವಾರ್ಯವಾಗಿ ಇದೇ ಬಸ್ ನಿಲ್ದಾಣದಲ್ಲಿ ಆತಂಕದಿಂದಲೇ ಬಸ್‌ಗಳ ಬರುವಿಕೆಗಾಗಿ ಕಾಯುವಂತಾಗಿದೆ ಎಂದು ನಾಗರಾಜ ಹೇಳುತ್ತಾರೆ.

ಬಿಕೋ ಎನ್ನುವ ಶೆಲ್ಟರ್‌ಗಳು: ನಗರದಲ್ಲಿ ಸಂಚರಿಸುವ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸದರ ಅನುದಾನದಲ್ಲಿ ನಗರದ ವಿವಿಧೆಡೆ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಈ ಬಸ್ ಶೆಲ್ಟರ್‌ಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಾಗೂ ಸರ್ಕಾರಿ ಪದವಿ ಕಾಲೇಜಿನ ಎದುರು ಬಸ್‌ಶೆಲ್ಟರ್‌ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಪ್ರಯಾಣಿಕರೇ ಇರುವುದಿಲ್ಲ. ಜನರೇ ಇಲ್ಲದ ನಗರದ ಹೊರವಲಯದ ಗುರುಸುಣಿಗಿ ಕ್ರಾಸ್‌ನಂತಹ ಪ್ರದೇಶಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.

ಆದರೆ ಜನನಿಬಿಡ ಪ್ರದೇಶವಾದ ಗಾಂಧಿ ವೃತ್ತದಲ್ಲಿ ಇಂತಹ ಶೆಲ್ಟರ್ ನಿರ್ಮಾಣ ಮಾಡಿಲ್ಲ ಎನ್ನುವ ದೂರು ಇಲ್ಲಿನ ನಿವಾಸಿಗಳದ್ದು.
ಗಾಂಧಿ ವೃತ್ತದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿರುವ ಹಳೆ ಬಸ್ ನಿಲ್ದಾಣ ತೆಗೆದು ಹೊಸ    ಬಸ್ ಶೆಲ್ಟರ್   ನಿರ್ಮಾಣ      ಮಾಡುವುದು ಅವಶ್ಯಕವಾಗಿದೆ.

ಮೊದಲೇ ಮಳೆ ಆರಂಭವಾಗಿದ್ದು, ಅನಾಹುತ ಆಗುವ ಮೊದಲೇ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇತ್ತ ಗಮನ ಹರಿಸುವುದು ಅವಶ್ಯಕ ಎನ್ನುತ್ತಾರೆ ಭೀಮುನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.