ADVERTISEMENT

`ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 7:05 IST
Last Updated 5 ಏಪ್ರಿಲ್ 2013, 7:05 IST

ಸುರಪುರ: ಮಹಿಳೆಯರ ಕಲ್ಯಾಣಕ್ಕೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಸಮರ್ಪಕ ಅನುಷ್ಟಾನವಾಗುತ್ತಿಲ್ಲ. ಮಹಿಳೆಯರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮಹಿಳಾ ಸಬಲೀಕರಣ ಕನಸಿನ ಮಾತಾಗುತ್ತದೆ. ಯೋಜನೆಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಬಗ್ಗೆ ನೆರವಿನ ಅವಶ್ಯಕತೆಯೂ ಇದೆ. ಕಾನೂನು ಸೇವಾ ಪ್ರಾಧಿಕಾರ ಈ ದಿಸೆಯಲ್ಲಿ ಸಮರ್ಪಕ ಕೆಲಸಮಾಡುತ್ತಿದೆ ಎಂದು ನ್ಯಾಯಾಧೀಶೆ ಮಂಜುಳಾ ಉಂಡಿ ವಿವರಿಸಿದರು.

ಪಟ್ಟಣದ ಉದ್ದಾರ ಓಣಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂಚಾರಿ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ಜಾಥಾದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುರುಷ ಪ್ರದಾನ ದೇಶ ಎಂಬ ಹಣೆ ಪಟ್ಟಿ ಕಟ್ಟಿ ವಿನಾಕಾರಣ ಮಹಿಳೆಯರ ಮೇಲೆ ಮಾನಸಿಕ ಒತ್ತಡ ಹೇರಲಾಗುತ್ತಿದೆ. ನಾಲ್ಕು ಗೋಡೆಗಳ ಮಧ್ಯೆಯೆ ಮಹಿಳೆ ಕೆಲಸ ಮಾಡಬೇಕೆಂಬ ಸಾಮಾಜಿಕ ನಿರ್ಬಂಧ ಸರಿಯಲ್ಲ. ಮಹಿಳೆ ಕೇವಲ ಮಗು ಹೆರುವ ಯಂತ್ರವಲ್ಲ. ನಾರಿ ಮುನಿದರೆ ಮಾರಿ ಎಂಬ ಗಾದೆಯಂತೆ ಮಹಿಳೆ ಹೆದರಬೇಕಿಲ್ಲ. ಮಹಿಳೆಯನ್ನು ಮುಖ್ಯವಾಹಿನಿಗೆ ತರುವ ವ್ಯವಸ್ಥೆ ಆಗಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಹೆಣ್ಣು ಮಗು ಬೇಡ ಎಂಬ ಮನೋಭಾವ ಸರಿಯಲ್ಲ. ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ. ಹೆಣ್ಣು ಪುರುಷನಿಗೆ ಸರಿಸಮನಾಗಿ ಸಾಧನೆ ಮಾಡಬಲ್ಲಳು. ಹೆಣ್ಣಿಗೆ ಪ್ರಾಧಾನ್ಯತೆ ನೀಡಬೇಕು. ಮಹಿಳೆಗೆ ಗೌರವ, ಪೂಜ್ಯನೀಯ ಸ್ಥಾನ ನೀಡಿದರೆ ಸಾಲದು. ಅವಳಿಗೆ ಪುರುಷನಷ್ಟೆ ಸರಿಸಮನಾದ ಸ್ಥಾನಮಾನ ನೀಡಬೇಕು. ಇದು ದೇಶದ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದರು.

ಇಲ್ಲಿನ ನ್ಯಾಯಾಲಯದಲ್ಲಿ ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ದೌರ್ಜನ್ಯ, ಶೋಷಣೆಗೆ ಒಳಗಾದ ಮಹಿಳೆಯರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮಹಿಳೆಯರು ನಿಸ್ಸಂಕೋಚವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಮಹ್ಮದ್ ಹುಸೇನ್ ಬೆಂಡೆಬೆಂಬಳಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಾನೂನು ಸಾಕ್ಷರತಾ ಜಾಥಾ ನಡೆಸಲಾಗುತ್ತಿದೆ. ಪ್ರತಿ ಬಾರಿಯೂ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿ ಅಪರಾಧಗಳು ಕಡಿಮೆಯಾದಾಗ ನ್ಯಾಯಾಂಗ ಇಲಾಖೆ ನಡೆಸುತ್ತಿರುವ ಈ ಪ್ರಯತ್ನಕ್ಕೆ ಪ್ರತಿಫಲ ದೊರಕಿದಂತಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ವಿ. ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ವೆಂಕಟೇಶ ಹೊಸಮನಿ, ಹಿರಿಯ ವಕೀಲರಾದ ಉದಯಸಿಂಗ್, ಜಿ. ಎಸ್. ಪಾಟೀಲ, ನಿಂಗಣ್ಣ ಚಿಂಚೋಡಿ, ಜಿ. ತಮ್ಮಣ್ಣ, ಸುಗೂರ ಸಿದ್ರಾಮಪ್ಪ, ಬಸವರಾಜ ಅನಸೂರ, ಅರವಿಂದಕುಮಾರ, ಎನ್. ಎಸ್. ಪಾಟೀಲ ವೇದಿಕೆಯಲ್ಲಿದ್ದರು.

ಪರಿಸರ ಮಾಲಿನ್ಯ ತಡೆ ಮತ್ತು ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಕೀಲ ಮನೋಹರ ಕುಂಟೋಜಿ, ಆಹಾರ ಕಲಬೆರಿಕೆ ನಿಯಂತ್ರಣ ಕಾಯ್ದೆ ಬಗ್ಗೆ ವಕೀಲ ಶಿವಾನಂದ ಅವಂಟಿ ವಿಶೇಷ ಉಪನ್ಯಾಸ ನೀಡಿದರು.

ವಕೀಲರ ಸಂಘದ ಉಪಾಧ್ಯಕ್ಷೆ ಛಾಯಾ ಕುಂಟೋಜಿ ಪ್ರಾರ್ಥಿಸಿದರು. ಸಜ್ಜು ಸವಾರ ಸ್ವಾಗತಿಸಿದರು. ಸಿ. ವೈ. ಸಾಲಿಮನಿ ನಿರೂಪಿಸಿದರು. ಅಪ್ಪಣ್ಣ ಗಾಯಕವಾಡ ವಂದಿಸಿದರು.

ದೇವಿಂದ್ರಪ್ಪ ಬೇವಿನಕಟ್ಟಿ, ಬಸವರಾಜ ಕಿಲ್ಲೇದಾರ, ಯಂಕಾರೆಡ್ಡಿ ಹವಾಲ್ದಾರ್, ಸಂಗಣ್ಣ ಬಾಕ್ಲಿ, ಆದಪ್ಪ ಹೊಸ್ಮನಿ, ಗೋಪಾಲ ತಳವಾರ, ಜಲೀಲ ಬಾಬಾ, ಖಾಜಾ ಖಲೀಲ ಅಹ್ಮದ್ ಅರಿಕೇರಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.