ADVERTISEMENT

`ರಕ್ತದೊತ್ತಡ ನಿಯಂತ್ರಿಸಿ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:52 IST
Last Updated 10 ಏಪ್ರಿಲ್ 2013, 6:52 IST

ಯಾದಗಿರಿ: ಅಧಿಕ ರಕ್ತದೊತ್ತಡ ಹೃದಯಾಘಾತ, ಪಾರ್ಶ್ವವಾಯು, ದೃಷ್ಟಿಹೀನತೆ ಹಾಗೂ ಮೂತ್ರ ಪಿಂಡದ ಕಾಯಿಲೆಗಳಿಗೆ ಕಾರಣವಾಗುವ ಹಿನ್ನೆಲೆಯಲ್ಲಿ ನಿರಂತರವಾಗಿ ರಕ್ತದೊತ್ತಡ ಪರೀಕ್ಷಿಸಿಕೊಂಡು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಜಿಲ್ಲಾ ಸರ್ಜನ್ ಡಾ. ಪಿ.ವಿಜಯಕುಮಾರ ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಾರ್ಯಾಲಯದಲ್ಲಿ ಮಂಗಳವಾರ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿ,  ಯುವಜನ ರಹಿತ, ಅನಾರೋಗ್ಯಕರ ಜೀವನ ಶೈಲಿ, ಉಪ್ಪಿನಾಂಶ ಅಧಿಕವಿರುವ ಆಹಾರ ಸೇವನೆ, ಮಾನಸಿಕ ಒತ್ತಡ, ಹೊಗೆಸೊಪ್ಪಿನ ಬಳಕೆ ಮತ್ತು ಮದ್ಯಸೇವನೆಯಂತಹ ಚಟಗಳಿಂದ ಹಾಗೂ ದೈಹಿಕ ಶ್ರಮ ಕಡಿಮೆ ಇರುವುದರಿಂದ ಹೆಚ್ಚಿನ ಜನರು ಅಧಿಕ ರಕ್ತದ ಒತ್ತಡಕ್ಕೆ ಸಿಲುಕುತ್ತಾರೆ.

ಕಾರಣ ರಕ್ತದೊತ್ತಡದ  ಸರಿಯಾದ ನಿರ್ವಹಣೆಯಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದರಿಂದ ಜೀವನದಲ್ಲಿ ಸಂತೋಷ ಹಾಗೂ ಆರೋಗ್ಯವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಮಹಿಳೆಯರಲ್ಲೂ ಈ ರೋಗ ಹೆಚ್ಚಾಗಿದ್ದು ನಿಯಮಿತ ಆಹಾರ ಸೇವನೆ ಹಾಗೂ ನಿರಂತರ ಆರೋಗ್ಯ ತಪಾಸಣೆಯಿಂದ ಆರೋಗ್ಯವಂತರಾಗಿ ಇರಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, 30 ವರ್ಷದ ನಂತರ ಪ್ರತಿ ಮೂವರಲ್ಲಿ ಒಬ್ಬರಿಗೆ ರಕ್ತದೊತ್ತಡ ಕಾಯಿಲೆ ಇದೆ.  ಅದರಂತೆ 50 ವರ್ಷ ನಂತರದ ಪ್ರತಿ ಇಬ್ಬರಲ್ಲಿ ಈ ಕಾಯಿಲೆ ಇರುವ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ನಿಯಮಿತ ಆಹಾರ ಸೇವನೆ, ಆರೋಗ್ಯಕರ ಜೀವನ  ಶೈಲಿ, ದುಶ್ಚಟಗಳಿಂದ ದೂರ ಇರಬೇಕು.

ಪ್ರತಿ 2-3 ತಿಂಗಳಿಗೊಮ್ಮೆ ರಕ್ತದೊತ್ತಡ ಪರೀಕ್ಷಿಸಿಕೊಂಡು ಉತ್ತಮ ಆರೋಗ್ಯ ಇರುವಂತೆ ನೋಡಿಕೊಳ್ಳಬೇಕು. ಸದೃಢ ಮನಸ್ಸು ಆರೋಗ್ಯಕ್ಕೆ ಸಹಕಾರಿ. ದುರ್ಬಲ ಮನಸ್ಸು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

ಜಿಲ್ಲಾ ಆರ್.ಸಿ.ಎಚ್. ಅಭಯಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಓಂಪ್ರಕಾಶ ಕಟ್ಟಿಮನಿ, ಕ್ಷಯರೋಗ ನಿಯಂತ್ರಣಾಧಿಕಾರಿ ಸೂರ್ಯಪ್ರಕಾಶ ಕಣಕೂರ ಇದ್ದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿದ್ರಾಮ ಹೊನ್ಕಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. `ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ' ಈ ದಿನಾಚರಣೆ ಮುಖ್ಯ ಘೋಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.