ADVERTISEMENT

ವರ್ಗಾವಣೆಗೆ ವಿರೋಧ: ಶಿಕ್ಷಕರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:26 IST
Last Updated 18 ಜೂನ್ 2013, 11:26 IST

ಯಾದಗಿರಿ: ನ್ಯಾಯಾಲಯದ ಆದೇಶದಂತೆ ಮುಂದುವರಿದ ಶಿಕ್ಷಕರ ಹಾಗೂ ಪ್ರಾಂಶುಪಾಲರ ವರ್ಗಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಆಗ್ರಹಿಸಿ ಹೊರ ಸಂಪನ್ಮೂಲ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಸೋಮವಾರ ಇಲ್ಲಿಯ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಟ್ಟೆಪ್ಪ, ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಶಿಕ್ಷಕರು, ಹೈಕೋರ್ಟ್ ಆದೇಶ ಮೇರೆಗೆ ಸೇವೆಯಲ್ಲಿ ಮುಂದುವರಿದಿದ್ದು, ಕಡಿಮೆ ವೇತನವನ್ನು ವಿಳಂಬವಾಗಿ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಡತನದ ಬವಣೆ ಮಧ್ಯೆ ಕಡಿಮೆ ಸಂಬಳದಲ್ಲೂ ಕಾರ್ಯ ಸಿಬ್ಬಂದಿಯೊಂದಿಗೆ ಅದೇ ಶಾಲಾವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಿ ಮಾನಸಿಕವಾಗಿ ತೊಂದರೆಗೆ ಒಳಗಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೋರ್ಟ್ ಆದೇಶದಂತೆ ಶಿಕ್ಷಕರು ಹಾಗೂ ಪ್ರಾಂಶುಪಾಲರ ವರ್ಗಾವಣೆ ಮಾಡದೆ ಅದೇ ಶಾಲೆಗಳಲ್ಲಿ ಅದೇ ಹುದ್ದೆ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಈಗಾಗಲೇ ಸಿಇಟಿ ಮೂಲಕ ನೇಮಕಾತಿ ಹೊಂದಿದ, ಅಧಿಕ ಸಂಬಳ ತೆಗೆದುಕೊಂಡು ಕೆಲಸ ಮಾಡುವ ಶಿಕ್ಷಕರನ್ನು ಯಾವುದೇ ಶಾಲೆಗೆ ವರ್ಗಾವಣೆ ಮಾಡಿದರೂ ಅನುಕೂಲವಾಗುತ್ತದೆ.

ಕೋರ್ಟ್ ಆದೇಶದ ಮೆರೆಗೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪದಾಧಿಕಾರಿಗಳಾದ ಸಂಗನಗೌಡ ಧನರೆಡ್ಡಿ, ದೇವೇಂದ್ರ ಕರಡಕಲ್, ಮಡಿವಾಳಪ್ಪ ಹೆಗ್ಗಣದೊಡ್ಡಿ, ಜಟ್ಟೆಪ್ಪ ಹದನೂರ, ಗೌಸ್ ಪಟೇಲ್, ಗೋಪಾಲ ಗಿರೆಪ್ಪನೋರ್, ಲಕ್ಷ್ಮಿ ಪಾಟೀಲ, ರೇಣುಕಾ ಪಾಟೀಲ, ಗೌರಮ್ಮ ಶಹಾಪುರ, ಶ್ರೀಕಾಂತ ರಾಠೋಡ ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.