ADVERTISEMENT

ವಸತಿ ಯೋಜನೆ ಗೊಂದಲದಲ್ಲಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:30 IST
Last Updated 19 ಜುಲೈ 2012, 8:30 IST

ಸುರಪುರ: ಹುಣಸಗಿ ಸಮಾರಂಭದಲ್ಲಿ 17,426 ಮನೆಗಳು ಮಂಜೂರಾಯಾಗಿವೆ ಎಂದು ಹೇಳಿದ ಸಚಿವ ರಾಜೂಗೌಡ ಅವರು ಮೊನ್ನೆ ಯಾದಗಿರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ 14 ಸಾವಿರ ಮನೆಗಳು ಬಂದಿವೆ ಎಂದು ಹೇಳಿದ್ದಾರೆ. ತಾಲ್ಲೂಕಿನಲ್ಲಿ ಮಂಜೂರಾಗಿರುವ ಬಸವ ವಸತಿ ಯೋಜನೆಯ ಮನೆಗಳ ಸಂಖ್ಯೆಯ ಬಗ್ಗೆ ಸ್ವತಃ ಸಚಿವ ರಾಜೂಗೌಡ ಅವರಿಗೆ ಗೊಂದಲವಿದ್ದಂತೆ ಕಾಣುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್ ಲೇವಡಿ ಮಾಡಿದರು.

ಬುಧವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾಲ್ಲೂಕಿಗೆ ಬಸವ ವಸತಿ ಯೋಜನೆಯಲ್ಲಿ ಒಟ್ಟು ಎಷ್ಟು ಮನೆಗಳು ಮಂಜೂರಾಗಿವೆ ಎಂದು ಒಂದು ವಾರದಲ್ಲಿ ರಾಜೂಗೌಡ ಅಧಿಕೃತ ವರದಿ ನೀಡಲಿ. ಅನಗತ್ಯ ಹೇಳಿಕೆ ನೀಡಿ ಮತದಾರರನ್ನು ಒಲಿಸಿಕೊಳ್ಳುವ ಷಡ್ಯಂತ್ರ ನಡೆಸುತ್ತಿರುವುದು ಸರಿಯಲ್ಲ ಎಂದು ದೂರಿದರು.

ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೆ ಗ್ರಾಮ ಸಭೆ ನಡೆಸಿಲ್ಲ. ಮನೆಗಳಲ್ಲಿ ಕುಳಿತುಕೊಂಡು ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಅನುಕೂಲಸ್ಥರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದರಿಂದ ವಸತಿ ಯೋಜನೆಯ ಉದ್ದೇಶ ದುರ್ಬಳಕೆಯಾದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪುನಃ ಗ್ರಾಮ ಸಭೆ ಮಾಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಮನೆಗಳ ಹಂಚಿಕೆಯಾಗಬೇಕು. ವಿಳಂಬವಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಬರಗಾಲ ಕಾಮಗಾರಿಗಾಗಿ ರೂ. ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ. ಅದು ಯಾವುದಕ್ಕೂ ಸರಿಹೋಗುವುದಿಲ್ಲ. ಎಲ್ಲಿಯೂ ಬರಗಾಲ ಕಾಮಗಾರಿ ಆರಂಭಿಸಿಲ್ಲ. ರೈತರು, ಕೃಷಿ ಕಾರ್ಮಿಕರು ನಿರಂತರವಾಗಿ ಗುಳೆ ಹೋಗುತ್ತಿದ್ದಾರೆ. ವಿನಾಕಾರಣ ನೋಡಲ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಬಂದಿರುವ ಅಭಿವೃದ್ಧಿ ಕಾಮಗಾರಿಗಳ ಅನುದಾನವನ್ನು ಲೊಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಇದರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದ್ದಾಗಿವೆ. ಇದರಿಂದ ಅಭಿವೃದ್ಧಿ ಶೂನ್ಯವಾಗಿದೆ. ಅನುದಾನದ ಲೂಟಿ ನಡೆದಿದೆ ಎಂದು ಆರೋಪಿಸಿದರು.

ಕ್ಷೇತ್ರದ ಮತದಾರರು ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನನ್ನು ಸಂಪರ್ಕಿಸಿ. ನಿಮ್ಮ ಸೇವೆಗೆ ಸದಾ ಸಿದ್ದನಿದ್ದೇನೆ.  ಮತದಾರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ ಗಫಾರ್ ನಗನೂರಿ, ಕಾಂಗ್ರೆಸ್ ಪಕ್ಷದ ತಾಲ್ಲೂಕು ವಕ್ತಾರ ವೆಂಕಟೇಶ ಹೊಸಮನಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಾನಪ್ಪ ಸುಗೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.