ADVERTISEMENT

ವಿದ್ಯೆಗೆ ‘ವಿದ್ಯಾನಿಕೇತನ’ ಶಾಲೆಯೇ ಸಾಟಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:35 IST
Last Updated 1 ಜನವರಿ 2014, 9:35 IST
ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸುರಪುರದ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು
ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸುರಪುರದ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು   

ಸುರಪುರ: ಅನಕ್ಷರಸ್ಥ ಮಾತೆಯೊಬ್ಬರು ತನ್ನಂತೆ ಇತರರು ಕಲಿಕೆಯಿಂದ ವಂಚಿತ­ರಾಗಬಾರದೆಂಬ ಉದ್ದೇಶ ಹೊಂದಿದ ಪರಿಣಾಮ ಹುಟ್ಟಿ­ಕೊಂಡಿದ್ದು ವಿದ್ಯಾ­ನಿಕೇತನ ಹಿರಿಯ ಪ್ರಾಥಮಿಕ ಶಾಲೆ. ಸುರಪುರ ಪಟ್ಟಣದ ಕಲ್ಯಾಣಗಿರಿ ಪರ­ಶು­ರಾಮ ಜಾಧವ ಸಮಾನ ಮನಸ್ಕ­ರೊಡಗೂಡಿ ಆರಂಭಿ­ಸಿದ ಈ ಶಾಲೆ ಈಗ ಬೃಹದಾಕಾರವಾಗಿ ಬೆಳೆದಿದೆ.

ತನ್ನ ತಾಯಿಯ ಬಯಕೆಯನ್ನು ಶಾಲೆ ಆರಂಭಿಸುವ ಮೂಲಕ ಈಡೇ­ರಿಸಿದ ಕಲ್ಯಾಣಗಿರಿ ಜಾಧವ ಸಂಸ್ಥೆಯ ಅಭಿವೃದ್ಧಿಗೆ ತಮ್ಮನ್ನು ಮುಡಿಪಾಗಿರಿ­ಸಿ­ಕೊಂಡಿದ್ದಾರೆ. ಪ್ರತಿವರ್ಷ ತಮ್ಮ ತಂದೆಯ ಪುಣ್ಯತಿಥಿಯಂದು ಬಡ ಮಕ್ಕಳಿಗೆ ಉಚಿತ ಬಟ್ಟೆ ವಿತರಿಸುತ್ತಾರೆ. ಅನಾಥ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಉಚಿತ ಪ್ರವೇಶ ನೀಡಿ ಅನಾಥ ಬಂಧುವಾಗಿದ್ದಾರೆ.

ಈ ಶಾಲೆ ಸಾಂಸ್ಕೃತಿಕ ಚಟುವಟಿಕೆ­ಗಳಿಗೆ ಹೆಸರುವಾಸಿಯಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರೀಯ ಹಬ್ಬ ಮತ್ತು ಇತರ ಕಾರ್ಯಕ್ರಮಗಳಲ್ಲಿ ವಿದ್ಯಾನಿಕೇತನ ಶಾಲೆಯ ಮಕ್ಕಳದ್ದೇ ಸಿಂಹಪಾಲು. ಜೊತೆಗೆ ಪ್ರಥಮ ಸ್ಥಾನ ಪಡೆಯುತ್ತಿ­ರುವುದು ಅಗ್ಗಳಿಕೆ.

ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆಗಳು, ಕ್ರೀಡೆ, ವಿಜ್ಞಾನ ಪ್ರದರ್ಶನ, ಮಕ್ಕಳ ಹಬ್ಬ, ಗಾಯನ, ಭಾಷಣ, ಮಹನೀಯರ ವೇಷಭೂಷಣ ಸ್ಪರ್ಧೆಗಳಲ್ಲಿ ವಿದ್ಯಾನಿಕೇತನ ಶಾಲೆಯ ಮಕ್ಕಳದ್ದೇ ಪಾರಮ್ಯ.

ಎಲ್.ಕೆ.ಜಿ.ಯಿಂದ ಒಂಬತ್ತನೆ ತರಗತಿವರೆಗೆ ನಡೆಯುತ್ತಿರುವ ಈ ಶಾಲೆಯಲ್ಲಿ ಈಗ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. 16 ಜನ ಶಿಕ್ಷಕರು ಬೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಿಸ್ತು, ವಿನಯ­ಶೀಲತೆ, ಓದಿನಲ್ಲಿ ತನ್ಮಯತೆ, ಹಿರಿಯರಿಗೆ ಗೌರವ ನೀಡುವುದು ಇತರ ಗುಣಗಳನ್ನು ಮಕ್ಕಳಲ್ಲಿ ಬಿತ್ತುವುದು ಶಾಲೆಯ ಪ್ರಥಮ ಕಾರ್ಯವಾಗಿದೆ.

ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವೀರದೊರೆ ರಾಜಾ ವೆಂಕಟಪ್ಪನಾಯಕ ಪಾತ್ರದಲ್ಲಿ ಪ್ರಥಮ ಸ್ಥಾನ, ಮೈಸೂರು ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶನ, ರಸಪ್ರಶ್ನೆ ಇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಅದಮ್ಯ.

ಶಾಲೆಯ ದಾಖಲಾತಿ ಜೊತೆಗೆ ಸಮನಾಗಿ ಹಾಜರಾತಿ ಇರುವುದು ಶಾಲೆಯ ಪ್ಲಸ್ ಪಾಯಿಂಟ್. ಆಯ್ದ ಬಡ ಮಕ್ಕಳಿಗೆ ಶುಲ್ಕವಿಲ್ಲದೆ ಪ್ರವೇಶ ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಚಾಚು ತಪ್ಪದೇ ಪಾಲಿಸಿ ಅಧಿಕಾರಿಗಳ ಪ್ರಶಂಸೆಗೆ ಈ ಶಾಲೆ ಪಾತ್ರವಾಗಿದೆ.

ಪಠ್ಯ ಮತ್ತು ಸಹಪಠ್ಯದಲ್ಲಿ ಮೇರು ಸಾಧನೆ ಮಾಡುತ್ತಿರುವ ಈ ಶಾಲೆಯ ಬೆಳವಣಿಗೆ ಸಹಜವಾಗಿ ಸರ್ಕಾರಿ ಶಾಲೆಗಳು ಹುಬ್ಬೇರುವಂತೆ ಮಾಡಿದೆ. ಇಂತಹ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಗರಿಮೆ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.