ADVERTISEMENT

`ವಿಶೇಷ ಉದ್ಯೋಗಿನಿ ಸಾಲ: ಬ್ಯಾಂಕುಗಳ ನಿರಾಕರಣೆ'

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:34 IST
Last Updated 8 ಡಿಸೆಂಬರ್ 2012, 6:34 IST

ಚಿಂಚೋಳಿ: ಮಕ್ಕಳ ಮಾರಾಟದಿಂದ ಗಮನ ಸೆಳೆದಿದ್ದ ತಾಲ್ಲೂಕಿನ ಕೊಂಚಾವರಂ ಸುತ್ತಮುತ್ತಲಿನ ತಾಂಡಾವಾಸಿಗಳ ಸ್ವಾವಲಂಬಿ ಜೀವನಕ್ಕೆ ನೆರವಾಗಲು ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಸಾಲ ನೀಡಲು ಕೊಂಚಾವರಂ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಮಹಮದ್ ರಫಿ ಚಕಾಲೆ ತಿಳಿಸಿದ್ದಾರೆ.

ಅಧ್ಯಕ್ಷೆ ಮಲ್ಲಮ್ಮಾ ಚಿತ್ರಶೇಖರ ಪಾಟೀಲ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ನರಸಿಮ್ಲು ಕುಂಬಾರ್ ಪ್ರಶ್ನೆಗೆ ಉತ್ತರಿಸಿದ ಅವರು, `ಬ್ಯಾಂಕುಗಳು ಸರ್ಕಾರದ ಸಾಲ ನೀಡಲು ನಿರಾಕರಿಸಿದ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ' ಎಂದರು.

`ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ತಾಲ್ಲೂಕಿಗೆ ಭೇಟಿ ನೀಡಿ ಕೊಂಚಾವರಂ ತಾಂಡಾಗಳ ಸಮಸ್ಯೆ ಖುದ್ದು ಕಂಡು ಇಲ್ಲಿನ ಜನರಿಗೆ ನೆರವಾಗಲು 150 ಮಂದಿಗೆ ವಿಶೇಷ ಉದ್ಯೋಗಿನಿ ಸಾಲ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು' ಎಂದರು.

ರಟಕಲ್ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿ ಬೋಗಸ್ ಹೆಸರು ಸೇರಿಸಿ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪಗಳ ಕುರಿತ ಪ್ರಶ್ನೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಮರ್ಪಕ ಉತ್ತರ ನೀಡದಿರುವುದಕ್ಕೆ ಸದಸ್ಯೆ ಸುಧಾ ರಾಜಶೇಖರ ಗುಡ್ದಾ ಅಸಮಾಧಾನ ವ್ಯಕ್ತಪಡಿಸಿದರು.

`ಕಿತ್ತೂರ ಚನ್ನಮ್ಮಾ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ  6,8,9ನೇ ತರಗತಿಯ ಮಕ್ಕಳ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದರೂ ಇಂಗ್ಲಿಷ್ ಭಾಷೆಯ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ' ಎಂದು ಸದಸ್ಯ ಗುಂಡಪ್ಪ ಮಾಳಗೆ ದೂರಿದರು.

`ವೇಗ ವರ್ಧಿತ ಬೆಳೆಕಾಳು ಬೇಸಾಯ ಯೋಜನೆ ಅಡಿಯಲ್ಲಿ ರೈತರಿಗೆ ನೀಡಿದ ಕಿಟ್ ಕಳಪೆಯಾಗಿದ್ದು ಮತ್ತು ಅರ್ಹ ರೈತರಿಗೆ ಸರಿಯಾಗಿ ಹಂಚಿಲ್ಲ' ಎಂದು ಬಸಯ್ಯಸ್ವಾಮಿ, ಮಹೆಶಪ್ಪ ದೊಡ್ಡಿ ಆರೋಪಿಸಿದರು.

ಸಭೆಯಲ್ಲಿ ಅಧ್ಯಕ್ಷೆ ಮಲ್ಲಮ್ಮಾ ಚಿತ್ರಶೇಖರ ಪಾಟೀಲ, ಉಪಾಧ್ಯಕ್ಷೆ ತಾರಾಮತಿ ಶಿವಶರಣಪ್ಪ ಕುಂಬಾರ್, ವಿಠಲ್ ಕಾರಬಾರಿ, ಶಾಮಸುಂದರ್ ಪವಾರ್, ರಾಮರಾವ್ ಪಾಟೀಲ, ಜಾನು ಜಾಯಕ್ ಇದ್ದರು.

ಮಿರಿಯಾಣ, ಐನಾಪುರ, ಚಂದನಕೇರಾ, ಅಣವಾರ್ ಕ್ಷೇತ್ರದ ಸದಸ್ಯರು ಗೈರಾಗಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಯೋಜನೆಯ ಪ್ರಗತಿ ಪರಿಶೀಲಿಸಿದರು. ಕಾರ್ಯನಿರ್ವಹಣಾಧಿಕಾರಿ ಜಗದೇವ ಬೈಗೊಂಡ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.