ADVERTISEMENT

ಶಹಾಪುರ: ಸರ್ಕಾರಿ ಪ್ರೌಢ ಶಾಲೆ:ಮೈದಾನ ಒತ್ತುವರಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 9:25 IST
Last Updated 20 ಏಪ್ರಿಲ್ 2012, 9:25 IST

ಶಹಾಪುರ:  ತಾಲ್ಲೂಕು ಕಂದಾಯ ಇಲಾಖೆಯ ಭೂಮಾಪನ ಅಧಿಕಾರಿ ಗುರುವಾರ ಪಟ್ಟಣದ ಸರ್ವೇ ನಂಬರ್ 6 ಎಕರೆ 7 ಗುಂಟೆ ಹಾಗೂ ಸರ್ವೇ ನಂಬರ್ 110ರ ಪೈಕಿ 4 ಎಕರೆ 10ಗುಂಟೆಯ ಸರ್ಕಾರಿ ಪ್ರೌಢ ಶಾಲೆ ಮತ್ತು ಮೈದಾನದ ಜಮೀನು ಅಳತೆ ನಡೆಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಕೋಟ್ಯಂತರ ಮೌಲ್ಯದ ಸರ್ಕಾರಿ ಜಾಗವನ್ನು ಅದರ ಸುತ್ತಮುತ್ತಲಿನ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿ ಕಬಳಿಕೆಯಾಗಿದೆ. ಶಾಲೆ ಹಾಗೂ ಆಟದ ಮೈದಾನದ ಒತ್ತುವರಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಎರಡು ತಿಂಗಳ ಹಿಂದೆ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಮಾಜ ಸೇವಕರಾದ ಹೈಯ್ಯಾಳಪ್ಪ ಹೈಯ್ಯಾಳಕರ್ ಮನವಿ ಸಲ್ಲಿಸಿದ್ದರು.

ಮನವಿಯನ್ನು ಕೈಗೆತ್ತಿಕೊಂಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ಇದು ಸಾರ್ವಜನಿಕ ಆಸ್ತಿಯಾಗಿದ್ದು ಅದರ ರಕ್ಷಣೆ ಎಲ್ಲರದ್ದಾಗಿದೆ. ತಕ್ಷಣ ಸಮೀಕ್ಷೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದರು.

ಮೆಲ್ನೋಟ: ಸರ್ಕಾರಿ ಮೈದಾನದ ಸುತ್ತಮುತ್ತಲು ಕೆಲ ಪ್ರಭಾವಿ ರಾಜಕೀಯ ಮುಖಂಡರ ಕಟ್ಟಡವಿದ್ದು  ಸರ್ವೇ ಮಾಡಿದ ಸಮಯದಲ್ಲಿ ಮೇಲ್ನೋಟಕ್ಕೆ ಒತ್ತುವರಿಯಾಗಿದ್ದು ಕಂಡು ಬರುತ್ತದೆ. ಅಲ್ಲದೆ ಕೆಲ ದಿನಗಳ ಹಿಂದೆ ಇದೇ ಕಂದಾಯ ಇಲಾಖೆಯ ಭೂಮಾಪನ ಅಧಿಕಾರಿಯೊಬ್ಬರು ಯಾವುದೇ ಜಮೀನು ಒತ್ತುವರಿ ಆಗಿಲ್ಲವೆಂದು ವರದಿ ನೀಡಿದ್ದು ಹಲವು ಗುಮಾನಿಗಳು ಹುಟ್ಟುಕೊಂಡಿವೆ ಎನ್ನುತ್ತಾರೆ ಹೈಯ್ಯಾಳಪ್ಪ ಹೈಯ್ಯಾಳಕರ್ ಆರೋಪಿಸಿದ್ದಾರೆ.

ಸ್ಥಳೀಯ ಭೂಮಾಪನ ಇಲಾಖೆಯ ಸರ್ವೇ ಅಧಿಕಾರಿಯವರು ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದು ಇಲ್ಲವೆ ಇನ್ಯಾವುದೋ ಪ್ರಭಾವಕ್ಕೆ ಒಳಗಾಗಿ ಕೋರ್ಟ್‌ಗೆ ತಪ್ಪು ವರದಿ ನೀಡುವ ಸಾಧ್ಯತೆಯಿದೆ. ತಕ್ಷಣ ಅವರನ್ನು ಎತ್ತಂಗಡಿ ಮಾಡಿ ಉನ್ನತಮಟ್ಟದ ಸರ್ವೇ ಅಧಿಕಾರಿಯನ್ನು ನೇಮಿಸಿ ನಿಷ್ಪಕ್ಷಪಾತವಾಗಿ ಸರ್ವೇ ನಡೆಸಬೇಕೆಂದು ತಾಲ್ಲೂಕು ದಂಡಾಧಿಕಾರಿಗೆ ಅವರು ಮನವಿ ಮಾಡಿದ್ದಾರೆ.

ರೈತ ಮುಖಂಡರಾದ ಎಸ್. ಎಂ.ಸಾಗರ, ದಾವಲಸಾಬ್ ನದಾಫ್, ಮಲ್ಲಯ್ಯ ಪೊಲ್ಲಂಪಲ್ಲಿ, ಶರಣು ನಾಯ್ಕ್‌ಡಿ, ಸೋಫಿಸಾಬ್, ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.