ADVERTISEMENT

ಶಹಾಪುರ: ಸಿಪಿಎಸ್ ಶಾಲಾ ಮೈದಾನ ಸರ್ವೇಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 9:55 IST
Last Updated 11 ಜನವರಿ 2012, 9:55 IST

ಶಹಾಪುರ: ಪಟ್ಟಣದ ಸಿಪಿಎಸ್ ಶಾಲಾ ಮೈದಾನದ ಸುತ್ತಮುತ್ತಲೂ ಭೂಗಳ್ಳರು ಒತ್ತುವರಿ ಮಾಡಿಕೊಂಡು ಬಂಗಲೆಗಳನ್ನು ನಿರ್ಮಿಸಿದ್ದಾರೆ. ಸಾರ್ವಜನಿಕರು ಸಾಕಷ್ಟು ಬಾರಿ ಒತ್ತುವರಿ ಜಾಗವನ್ನು ಸರ್ವೇ ಮಾಡಿ ಆಟದ ಮೈದಾನವನ್ನು ರಕ್ಷಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಕಸದ ಬುಟ್ಟಿಗೆ ಎಸೆಯಲಾಗಿದೆ.

ಇವೆಲ್ಲದರ ನಡುವೆ ಒತ್ತುವರಿ ಜಾಗದ ರಕ್ಷಣೆಗಾಗಿಯೇ ಭೂಸೇನಾ ನಿಗಮದ ವತಿಯಿಂದ ರಾಜಕೀಯ ಸ್ವಾರ್ಥಕ್ಕಾಗಿ ಕಂಪೌಂಡ್ ನಿರ್ಮಾಣದ ನೆಪದಲ್ಲಿ ರಸ್ತೆ ನಿರ್ಮಿಸುವ ಕಾರ್ಯವು ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ತಾಜಾತನ ಎನ್ನುವಂತೆ ಆಟದ ಮೈದಾನದಲ್ಲಿ ಕಲ್ಲುಗಳನ್ನು ಸಂಗ್ರಹಿಸುವ ಕಾರ್ಯವು ಭರದಿಂದ ಸಾಗಿದೆ ಎಂದು  ತಾಲ್ಲೂಕು ಕೃಷಿಕೂಲಿಕಾರ ಸಂಘದ ಕಾರ್ಯದರ್ಶಿ ಮಲ್ಲಯ್ಯ ಪ್ಲ್ಲೊ ಲಂಪಲ್ಲಿ ತಿಳಿಸಿದ್ದಾರೆ.

ಮೂಲತಃ ಸಿಪಿಎಸ್ ಶಾಲಾ ಆಟದ ಮೈದಾನಕ್ಕಾಗಿ ಸರ್ವೇನಂಬರ 110ರಲ್ಲಿ 4ಎಕರೆ 10ಗುಂಟೆ ಜಾಗವನ್ನು ವಶಪಡಿಸಿಕೊಂಡಿದೆ. ಆಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸದ್ದುಗದ್ದಲವಿಲ್ಲದೆ ನಿರಂತರವಾಗಿ ಅತಿಕ್ರಮಿಸುತ್ತಾ ಭವ್ಯ ಬಂಗಲೆಗಳನ್ನು ನಿರ್ಮಿಸಿದ್ದಾರೆ.

ವಿಚಿತ್ರವೆಂದರೆ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ವತಃ ಪುರಸಭೆ ಪರವಾನಗಿ ನೀಡಿದೆ. ಒತ್ತುವರಿದಾರರು ಕಟ್ಟಡ ಪರವಾನಗಿಯನ್ನು ದಾಳವಾಗಿ ಬಳಸುತ್ತಿದ್ದಾರೆ. ಇದಕ್ಕೆ ಆಶ್ರಯ ಎನ್ನುವಂತೆ ಒತ್ತುವರಿ ಜಾಗವನ್ನು ಹೊರತುಪಡಿಸಿ ಉಳಿದ ಅತ್ಯಲ್ಪ ಜಾಗದಲ್ಲಿ ಕಂಪೌಂಡ್‌ನಿರ್ಮಿಸಲು ಹೊರಟಿರುವುದು ಅತ್ಯಂತ ನಾಚಿಗೇಡು ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲು ಆಟದ ಮೈದಾನದ ಒಟ್ಟು ಜಾಗವನ್ನು ಸರ್ವೇಮಾಡಿ ಒತ್ತುವರಿದಾರರನ್ನು ತೆರವುಗೊಳಿಸಿ  ನಂತರ ಕಂಪೌಂಡ್ ನಿರ್ಮಿಸಲಿ. ಕಳೆದ 2004ರಲ್ಲಿ ಶಾಲೆಯ ಮುಖ್ಯಸ್ಥರೊಬ್ಬರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಶಾಲೆಯ ವ್ಯಾಪ್ತಿಯ ಜಾಗವನ್ನು ಸರ್ವೇಮಾಡಿ ಅದರ ಸುತ್ತಲು ಕಂಪೌಂಡ್ ನಿರ್ಮಿಸಲು ನಿವೇದಿಸಿಕೊಂಡಿದ್ದರು. ಅಲ್ಲದೆ 2008ರಲ್ಲಿಯೂ ಜನಸ್ಪಂದನ ಸಭೆಯಲ್ಲಿ ಇದರ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಇಂದಿಗೂ ಇತ್ತ ಗಮನಹರಿಸುತ್ತಿಲ್ಲವೆಂದು ಮಲ್ಲಯ್ಯ ಆರೋಪಿಸಿದ್ದಾರೆ.

ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ 1ರಲ್ಲಿ 6ಎಕರೆ 7ಗುಂಟೆ ಜಾಗವಿದ್ದು. (ಸರ್ಕಾರಿ ಪದವಿಪೂರ್ವ ಕಾಲೇಜು) ಅದರ ಸುತ್ತಮುತ್ತಲು ಒತ್ತುವರಿ ಮಾಡಿಕೊಂಡು ಇದೇ ದುಸ್ಥಿತಿ ಎದುರಿಸುತ್ತಿದೆ. ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಲ್ಲಿ ಅಸಡ್ಡೆಯ ಭಾವನೆ ಮೂಡುತ್ತಿದ್ದು. ಒತ್ತುವರಿದಾರರ ಪರ ಇದ್ದಾರೆ ಎಂಬ ಗುಮಾನಿ ಶುರುವಾಗಿದೆ ಎಂದು ಅವರು ದೂರಿದ್ದಾರೆ.

ತಕ್ಷಣ ಕಂಪೌಂಡ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ. ಮೊದಲು ಸರ್ಕಾರಿ ಜಾಗದ ಸರ್ವೇ ನಡೆಸಿ ನಂತರ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.