ADVERTISEMENT

ಶುಕ್ರವಾರ ಸಂತೆಯಲ್ಲಿ ಕುರಿಗಳ ಭರ್ಜರಿ ಮಾರಾಟ

ಇದು ಎಲೆಕ್ಷನ್ ಎಫೆಕ್ಟ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:57 IST
Last Updated 20 ಏಪ್ರಿಲ್ 2013, 10:57 IST

ಶಹಾಪುರ:  ಮತದಾರರಿಗೆ ಆಮಿಷ ಒಡ್ಡಬಾರದು. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಚುನಾವಣಾ ಆಯೋಗ ಹಲವಾರು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇವೆಲ್ಲದರ ನಡುವೆ ಮತದಾರರಿಗೆ ಬಾಡೂಟ ಸವಿಯನ್ನು ಉಣಬಡಿಸಲು ರಾಜಕೀಯ ಪಕ್ಷದ ಮುಖಂಡರು ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ.  ಶುಕ್ರವಾರ ಸಂತೆಯಲ್ಲಿ ಕುರಿ, ಮೇಕೆ ಖರೀದಿಸಲು ಕೆಲ ಕಾರ್ಯಕರ್ತರ ಪಡೆಯು ಸಂತೆಯಲ್ಲಿ ಕಾಣಿಸಿಕೊಂಡು ಹೆಚ್ಚಿನ ಬೆಲೆಗೆ ಖರೀದಿಸುವುದು ಸಾಮಾನ್ಯವಾಗಿತ್ತು. ರೈತರು ಮಾತ್ರ ಖುಷಿಯಿಂದ ಮನೆಗೆ ಮರಳಿದರು.

ಈಗ ಎರಡು ವಾರ ಆಯ್ತು ನಮ್ಮ ಕುರಿ ಮತ್ತು ಆಡು (ಮೇಕೆ) ಚಲೋ ರೊಕ್ಕ ಬರಕತ್ಯಾದ. ಇಷ್ಟು ತುಟ್ಟಿ (ದುಬಾರಿ) ಟಗರದ ಮರಿಯನ್ನು ನಾನು ಮಾರಾಟ ಮಾಡಿಲ್ಲ. ಈಗ ಎಷ್ಟು ಹಣ ಹೇಳಿದರು ಸಹ ಪ್ಯಾಂಟ್ ಹಾಕಿಕೊಂಡವರ ಗರಿ ಗರಿಯ ಐನೂರ, ಸಾವಿರ ನೋಟು ಕೊಡಾ ಕತ್ತ್ಯಾರ ಎನ್ನುತ್ತಾರೆ ಮಾಳಪ್ಪ ಪೂಜಾರಿ.

ಎಲೆಕ್ಷನ್ ಬಂದಾದ ಎಷ್ಟು ರೊಕ್ಕ ಅಂದ್ರನು ಕೊಟ್ಟು ಖರೀದಿ ಮಾಡಕತ್ಯಾರ, ಹಳ್ಳಿ ಮಂದಿ ಕರಕೊಂಡು ಬಂದ ಜೋಡಿಯಲ್ಲಿ ಕುರಿ ಇಲ್ಲ ಆಡು ಖರೀದಿಸಿ ತಗೊಂಡು ಹೊಂಟ್ಟಾರ. ಇಷ್ಟೊಂದು ತುಟ್ಟಿ ಮಾರಾಟ ಆಗ್ತಾವ್ ಅಂತ ನಾವು ಕನಸ್ಸಿನಲ್ಲಿ ನೆನಸಿಲ್ಲ. ಒಂದು ಸಣ್ಣ ಮರಿಗೆ 3,000 ರೂ. ದೊಡ್ಡದಾಗ ಕುರಿ ಬೆಲೆ ಐದಾರು ಸಾವಿರ ರೂಪಾಯಿ ಹೇಳಿದರೆ ಯಾವುದೇ ಚೌಕಾಸಿ ಇಲ್ಲದ ತಗೊಂಡ ಹೊಗ್ತಾರ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ಅಗಿದೆ. ನಮಗ ಮಾತ್ರ ರೊಕ್ಕ ಜಗ್ಗಿ ಬಂದಾವ್ ಎನ್ನುತ್ತಾರೆ ಕುರಿ ಮಾರಾಟ ಮಾಡಿದ ಕಮಲಿಬಾಯಿ.

ಮತದಾರರನ್ನು ಸೆಳೆಯಲು  ಭರ್ಜರಿಯಾಗಿ ಬಾಡೂಟ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮೊದಲು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ನಂತರ ಸಭೆ ನಡೆಸುವುದು ಆಗ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮತದಾರರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.

ರಾಜಕೀಯ ಪಕ್ಷದ ಮುಖಂಡರು ತಮ್ಮ ಹಿಂಬಾಲಕರಿಗೆ ಆಯಾ ಸಮುದಾಯ ಹಿರಿಯ ನಾಯಕರಿಗೆ ಇದರ ಉಸಾಬರಿಯನ್ನು ಒಪ್ಪಿಸಿ ಸಂತೆಗೆ ಬಂದು ಕುರಿಯನ್ನು ಖರೀದಿಸಿ ಬಾಡೂಟ ಮಾಡಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. ನಾವೆಲ್ಲರು ಬಂದು ಕುರಿಯನ್ನು ಖರೀದಿಸಿದ್ದೇವೆ ಎನ್ನುತ್ತಾರೆ ರಾಜಕೀಯ ಪಕ್ಷದ ಮುಖಂಡರ ಕಾರ್ಯಕರ್ತರೊಬ್ಬರು.

ನಮಗೆ ಕುರಿ ಬೆಲೆ ದುಪ್ಪಟ್ಟಾದರು ಚಿಂತೆಯಿಲ್ಲ. ಹಣ ನೀಡುವರು ಬೇರೆಯಾಗಿದ್ದಾರೆ. ಬಂದಷ್ಟು ಬರಲಿ ಒಂದಿಷ್ಟು ತಿಂದು ಮಜಾ ಮಾಡೋಣ. ಈಗಾಗಲೇ ಹಳ್ಳಿಗಳಲ್ಲಿ ಮದ್ಯ ಸರಬರಾಜು ಮಾಡಿದ್ದಾರೆ.

ದಿನಾಲು ಸಂಜೆಯ ನಂತರ ಬಾಟಲಿಗಳನ್ನು ಕಳುಹಿಸುತ್ತಿದ್ದಾರೆ. ಮದ್ಯ ಸೇವನೆಯ ಜೊತೆ ಬಾಡೂಟವು ಗೌಪ್ಯವಾಗಿ ಮನೆಯೊಂದರಲ್ಲಿ  (ಬಿರ‌್ಯಾನಿ) ತಯಾರಿಸಿ ಹಂಚಿಕೆ ಮಾಡುತ್ತಿದ್ದೇವೆ. ಯಾವ ತಂಡವು ನಮ್ಮನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂಬ ಹುಂಬುತವನ್ನು ಕಾರ್ಯಕರ್ತನೊಬ್ಬ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಕುರಿ, ಮೇಕೆಗಳ ಬೆಲೆ ಮಾತ್ರ ಏರುಮುಖವಾಗಿದೆ. ಸಾಮಾನ್ಯವಾಗಿ  ಖರೀದಿ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದವರಿಗೆ ತಾತ್ಕಾಲಿಕ ಬ್ರೇಕ್ ಹಾಕಿದೆ ಚುನಾವಣೆ ಎಂಬ ಮಾಯಾ ಜಿಂಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.