ಸುರಪುರ: ಶೇಂಗಾ ಖರೀದಿ ಕೇಂದ್ರ ಆರಂಭ, ತೂಕ ಮಾಪನದಲ್ಲಿನ ಮೋಸ ಮತ್ತು ಬಿಳಿ ಚೀಟಿ ನೀಡುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಕ್ರವಾರ ಧರಣಿ ನಡೆಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ತಾಲ್ಲೂಕಿನಾದ್ಯಂತ 2 ವರ್ಷಗಳಿಂದ ಕಾಲುವೆಯ ನೀರಿನ ಕೊರತೆ, ಸರಿಯಾಗಿ ಮಳೆಯಾಗದೆ ಬರಗಾಲ ಆವರಿಸಿ ರೈತ ತತ್ತರಿಸಿ ಹೋಗಿದ್ದಾನೆ. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದು ರೈತರ ಕೈಹಿಡಿಯುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯನ್ನು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತ ಸಂಕಷ್ಟಕ್ಕೆ ಗುರಿಯಾಗಿದ್ದಾನೆ ಎಂದು ವಿಷಾದಿಸಿದರು.
ಎಪಿಎಂಸಿಯಲ್ಲಿ ವ್ಯಾಪಾರಿಗಳು ತೂಕದ ವಿದ್ಯುನ್ಮಾನ ಯಂತ್ರಗಳನ್ನು ಉಪಯೋಗಿಸುತ್ತಿಲ್ಲ. ಇದರಿಂದ ತೂಕದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಖರೀದಿದಾರರು ಬೆಳೆ ಖರೀದಿಗೆ ಅಧಿಕೃತ ರಸೀದಿ ನೀಡದೆ ಬಿಳಿ ಚೀಟಿ ನೀಡಿ ಮೋಸ ಮಾಡುತ್ತಿದ್ದಾರೆ. ವಿನಾ ಕಾರಣ ಪ್ರತಿ ಚೀಲಕ್ಕೂ ಸೂಟ್ ಮುರಿದು ರೈತರಿಗೆ ನಷ್ಟ ಉಂಟುಮಾಡುತ್ತಿದ್ದಾರೆ. ಶೇ 3 ರಷ್ಟು ಹಣವನ್ನು ಕಮೀಷನ್ ರೂಪದಲ್ಲಿ ಪಡೆಯಲಾಗುತ್ತಿದೆ. ಈ ಎಲ್ಲ ಅಕ್ರಮಗಳು ಹಾಡು ಹಗಲೇ ಇಲ್ಲಿ ನಡೆಯುತ್ತಿದ್ದರೂ ಎಪಿಎಂಸಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಹರಿಹಾಯ್ದರು.
ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗೆ ಹಾಗೂ ಮೃತಪಟ್ಟ ಜಾನುವಾರಗಳಿಗೆ ಸೂಕ್ತ ಪರಿಹಾರ ನೀಡಬೇಕು. ಶೇಂಗಾ ಖರೀದಿ ಕೇಂದ್ರ ಸ್ಥಾಪಿಸಬೇಕು. ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ 21 ರಂದು ರಸ್ತೆತಡೆ ಚಳುವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿ, ಬಿಳಿ ಚೀಟಿ ನೀಡುವ ವರ್ತಕರ ಮೇಲೆ ಪ್ರಕರಣ ದಾಖಲಿಸುವಂತೆ ಹಾಗೂ ವಿದ್ಯುನ್ಮಾನ ಯಂತ್ರ ಬಳಸುವಂತೆ ಎಪಿಎಂಸಿ ಕಾರ್ಯದರ್ಶಿ ಆರ್.ಕೆ. ಕಿತ್ತೂರು ಅವರಿಗೆ ಸೂಚಿಸಿದರು.
ರೈತ ಮುಖಂಡರಾದ ಎಸ್.ಎಂ. ಸಾಗರ, ಗೌರಮ್ಮ ಪಾಟೀಲ್ ಗುಲ್ಬರ್ಗ, ಮುದ್ದಣ್ಣ ಅಮ್ಮಾಪುರ, ಬಸವರಾಜ ಸೂಗೂರು, ನಂದಣಪ್ಪ ವಾರಿ, ಪರಮಣ್ಣ ದೊರೆ, ಹಣಮಂತ್ರಾಯ ಮಡಿವಾಳ, ಬಸವರಾಜ ಐಕೂರು, ರಾಮಣ್ಣ ಕಟ್ಟಿಮನಿ, ಶಿವನಗೌಡ ಸಾಲವಾಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.