ADVERTISEMENT

ಶೇಂಗಾ ಬೆಳೆಗೆ ಜಿಪ್ಸ್‌ಂ ಬಳಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:02 IST
Last Updated 5 ಡಿಸೆಂಬರ್ 2012, 7:02 IST

ಯಾದಗಿರಿ: ಶೇಂಗಾ ಬೆಳೆ ಬಿತ್ತನೆಯಾದ 35 ರಿಂದ 40 ದಿನದ ಅವಧಿಯಲ್ಲಿ ಪ್ರತಿ ಹೆಕ್ಟೇರ್‌ಗೆ 500 ಕಿ.ಗ್ರಾಂ. ಜಿಪ್ಸ್‌ಂ ಅನ್ನು ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ, ಅಥವಾ ಗಿಡದ ಬುಡಕ್ಕೆ ಹಾಕುವಂತೆ ಕೃಷಿ ಇಲಾಖೆ ಸಲಹೆ ಮಾಡಿದೆ.

ಜಿಪ್ಸ್‌ಂನಲ್ಲಿ ಸುಣ್ಣ, ಗಂಧಕ ಇರುವುದರಿಂದ ಶೇಂಗಾ ಬೆಳೆಗೆ ಭೂಮಿಯಲ್ಲಿ ಅನುಕೂಲವಾಗಲಿದೆ. ಇದರಿಂದ ಕಾಯಿ ಜೊಳ್ಳಾಗುವುದಿಲ್ಲ. ಎಣ್ಣೆ ಅಂಶ ಹೆಚ್ಚಾಗಿ ಕಾಯಿಗಳಿಗೆ ಹೊಳಪು ಬರುತ್ತದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಕಾಯಿಗಳ ಮೇಲೆ ಬರುವ ಬೂಸ್ಟ್ ಸಹ ನಿಯಂತ್ರಣ ಆಗುತ್ತದೆ.

ಸತತವಾಗಿ ಶೇಂಗಾ ಬೆಳೆಯುವ ಕಡೆ ಸತು ಮತ್ತು ಕಬ್ಬಿಣದ ಕೊರತೆ ಕಂಡು ಬರುತ್ತದೆ. ಇದನ್ನು ನೀಗಿಸಲು 3 ವರ್ಷಕ್ಕೆ ಒಮ್ಮೆಯಾದರೂ ಪ್ರತಿ ಹೆಕ್ಟೇರ್‌ಗೆ 12 ಕಿ.ಗ್ರಾಂ. ಸತುವಿನ ಸಲ್ಪೇಟ್ ಮತ್ತು 12 ಕಿ.ಗ್ರಾಂ. ಕಬ್ಬಿಣದ ಸಲ್ಪೇಟ್ ಅನ್ನು ಬಳುಸುವುದರಿಂದ ಉತ್ತಮ ಇಳುವರಿ ಪಡೆಯಬಹುದು.

ಸುಳಿ ನೊಣ ನಿರ್ವಹಣೆ: ಹಿಂಗಾರು ಜೋಳ ಉತ್ತರ ಕರ್ನಾಟಕ ಭಾಗದ ಜನರ ಮುಖ್ಯ ಆಹಾರ ಬೆಳೆಯಾಗಿದ್ದು, ಈ ಬೆಳೆಯನ್ನು ಬಾಧಿಸುವ ಕೆಲವು ಮುಖ್ಯ ಕೀಟಗಳಲ್ಲಿ ಸುಳಿ ನೊಣವು ಒಂದು. ಮನೆ ನೊಣಕ್ಕಿಂತ ಸ್ವಲ್ಪ ಚಿಕ್ಕದಾಗಿ ಕಂಡು ಬರುವ ಈ ಕೀಟವನ್ನು ವೈಜ್ಞಾನಿಕವಾಗಿ ಅಥೆರಿಗೊನಾ ಸಾಕೇಟಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಹೆಣ್ಣು ನೊಣವು ಎಲೆಯ ಕೆಳಭಾಗದಲ್ಲಿ ಇಡುವ ಒಂದು ಅಥವಾ ಮೂರ‌್ನಾಲ್ಕು ಮೊಟ್ಟೆಗಳು ಒಂದೆರಡು ದಿನಗಳಲ್ಲಿ ಒಡೆದು ಕೆನೆ ಬಿಳಿ ಬಣ್ಣದ ಮರಿಗಳು ಹೊರ ಬರುತ್ತವೆ. ಸುಳಿ ಸೇರಿಕೊಳ್ಳುವ ಈ ನೊಣಗಳು ಸುಳಿ ಕೊರೆಯಲು ಆರಂಭಿಸುತ್ತವೆ. ಇದರಿಂದ ಕಾಂಡವು ಒಣಗುತ್ತದೆ.

ಹತೋಟಿ ಕ್ರಮಗಳು: ಸುಳಿ ಹಾಗೂ ಕಾಂಡ ಕೊರೆಯುವ ಹುಳುಗಳು ಇರುವ ಸಸಿಗಳನ್ನು ಕಿತ್ತು ಸುಡಬೇಕು. ಕೊಳೆ ಸುಡುವುದರಿಂದ ಸುಪ್ತಾವಸ್ಥೆಯಲ್ಲಿನ ಕಾಂಡ ಕೊರೆಯುವ ಹುಳು ನಾಶವಾಗುತ್ತವೆ. ಬಿತ್ತುವಾಗ ಪ್ರತಿ ಎಕರೆಗೆ ಒಂದು ಕಿಗ್ರಾಂನಷ್ಟು ಹೆಚ್ಚು ಬೀಜವನ್ನು ಬಿತ್ತನೆ ಮಾಡಿದ್ದಲ್ಲಿ ಸುಳಿ ಬಿದ್ದ ಸಸಿಗಳನ್ನು ಕಿತ್ತು ಎಕರೆವಾರು ಸಸಿಯನ್ನು ಕಾಪಾಡಿಕೊಳ್ಳಬಹುದು. ಕೀಟನಾಶಕಗಳನ್ನು ಉಪಯೋಗಿಸಿ ಹತೋಟಿ ಮಾಡಬಹುದು. ಕ್ಲೋರೋಫೈರಿಫಾಸ್ 20 ಇಸಿ 2ಮಿ.ಲೀ ಅಥವಾ ಮೊನೋಕ್ರೋಟೋಫಾಸ್ 36 ಎಸ್‌ಎಸ್ 2 ಮಿ.ಲೀ. ಅಥವಾ ಕ್ವಿನಾಲಫಾಸ್-2 ಮಿ.ಲೀ. ನೀರಿಗೆ ಬೆರಿಸಿ ಸಿಂಪಡಿಸುವುದರಿಂದ ಇದರ ಬಾಧೆ ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದೆ.

ಲದ್ದಿ ಹುಳ,  ರಬ್ಬರ್‌ಹುಳು ನಿರ್ವಹಣೆ: ಶೇಂಗಾ ಸುಮಾರು 30-40 ದಿವಸದ ಬೆಳೆಯಾಗಿದ್ದು, ಎಲೆ ತಿನ್ನುವ ಸ್ಪೊಡಾಪ್ಟೆರಾ (ಲದ್ದಿ/ರಬ್ಬರ ಹುಳ) ಕೀಟದ ಬಾಧೆ ಅತಿಯಾಗಿ ಕಾಡುತ್ತದೆ.

ಈ ಕೀಡೆಯ ಬಾಧೆ ಹತೋಟಿ ಮಾಡಲು ಕೀಟನಾಶಕಗಳಾದ ಎಮಾಮೆಕ್ಟೀನ್ ಬೆಂಜೊಯೇಟ್, 0.2 ಮಿ.ಗ್ರಾಂ/ಲೀ ಅಥವಾ ಲ್ಯಾಂಬ್ಡಾ ಸೈಲೊಥ್ರಿನ್ 1 ಮಿ.ಲೀ/ಲೀ ಆಥವಾ ಕ್ವಿನಾಲ್‌ಫಾಸ್ 2 ಮಿ.ಲೀ/ಲೀ ಗೆ ಬೆರೆಸಿ ಸಿಂಪಡಿಸಬೇಕು. ಕೀಟಗಳು ದೊಡ್ಡದಾದಾಗ ಹಾಗೂ ಬಾಧೆ ಅತಿಯಾದಾಗ ಮೊನೊಕ್ರೊಟೋಪಾಸ್ ಔಷಧಿಯಿಂದ ತಯಾರಿಸಿದ ವಿಷಾನ್ನವನ್ನು ಸಂಜೆ ಬೆಳೆಯ ಸಾಲುಗಳ ಮಧ್ಯದಲ್ಲಿ ಚೆಲ್ಲಬೇಕು.

ವಿಷಾನ್ನ ತಯಾರಿಸುವ ವಿಧಾನ: 20 ಕಿಗ್ರಾಂ ಅಕ್ಕಿ ತವಡು ಜೊತೆಗೆ 2 ಕಿ.ಗ್ರಾಂ. ಬೆಲ್ಲ ಹಾಗೂ 250 ಮಿ.ಲೀ ಮೊನೊಕ್ರೊಟೋಪಾಸ್ 36 ಎಸ್.ಎಲ್ ಕೀಟನಾಶಕವನ್ನು ಬೆರೆಸಿ 24 ಗಂಟೆ ಕೊಳೆಯಲು ಬಿಡಬೇಕು. ಸಂಜೆ ಸಮಯದಲ್ಲಿ ಬೆಳೆಯ ಸಾಲುಗಳ ಮಧ್ಯದಲ್ಲಿ ಚೆಲ್ಲುವುದರಿಂದ ಈ ಕೀಟದ ಬಾಧೆ ನಿಯಂತ್ರಿಸಬಹುದು ಎಂದು ತಿಳಿಸಿದೆ.

ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರು, ಯಾದಗಿರಿ, ಮೊಸಂ:  9731387542. ದೂಸಂ: 08473-252417) ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.